Advertisement

ಪಣತ್ತೂರು ಬಸ್ ದುರಂತ:  ವಧುವಿನ ಮನೆಯಲ್ಲಿ ನೀರವ ಮೌನ

01:38 PM Jan 04, 2021 | Team Udayavani |

ಪುತ್ತೂರು : ಮದುವೆ ದಿಬ್ಬಣದ ಬಸ್‌ ಅಪಘಾತದ ಬಳಿಕ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪಾಲೆಚ್ಚಾರಿನ ವಧುವಿನ ಮನೆಯಲ್ಲಿ ನೀರವ ಮೌನ ಮನೆ ಮಾಡಿತ್ತು.

Advertisement

ಬಲ್ನಾಡಿನ ಕೊಗ್ಗು ನಾಯ್ಕ ಅವರ ಪುತ್ರಿ ಅರುಣಾ ಅವರ ವಿವಾಹವು ಕರಿಕೆಯ ಪ್ರಶಾಂತ್‌ ಅವರೊಂದಿಗೆ ಜ. 3ರಂದು ವರನ ಮನೆಯಲ್ಲಿ ನಿಗದಿಯಾಗಿತ್ತು. ಬೆಳಗ್ಗೆ 9ಕ್ಕೆ ಮುಹೂರ್ತ ಇದ್ದ ಕಾರಣ ವಧು, ತಂದೆ-ತಾಯಿ ಸೇರಿದಂತೆ ಅಗತ್ಯ ಸಂಬಂಧಿಗಳು ಮುಂಜಾನೆಯೇ ಟೆಂಪೊ ಟ್ರಾವೆಲರ್‌ ಮತ್ತು ಕಾರಿನಲ್ಲಿ ತೆರಳಿದ್ದರು. ಉಳಿದ 60ಕ್ಕೂ ಅಧಿಕ ಮಂದಿ ಪುತ್ತೂರಿನ ಸುರಕ್ಷಾ ಟೂರಿಸ್ಟ್‌ ಬಸ್‌ನಲ್ಲಿ 9 ಗಂಟೆಗೆ ಪಾಲೆಚ್ಚಾರಿನ ಮನೆಯಿಂದ ಹೊರಟಿದ್ದರು.

ಮನೆಯಲ್ಲಿದ್ದವರಿಗೆ ಗೊತ್ತೇ ಇರಲಿಲ್ಲ!
ಶನಿವಾರ ರಾತ್ರಿ ಮೆಹಂದಿ ಸಂಭ್ರಮವಿತ್ತು. ಜ. 4ರಂದು ಅತಿಥಿ ಸತ್ಕಾರ ನಡೆಯಲಿತ್ತು. ವಧುವಿನ ಮನೆಯಲ್ಲಿ ಸಂಬಂಧಿಕರಾದ ಪೆರ್ಲದ ವಯಸ್ಕ ದಂಪತಿ, ವಧುವಿನ ಚಿಕ್ಕಪ್ಪ ಉಳಿದುಕೊಂಡಿದ್ದರು. ಅಪಘಾತ ಸಂಭವಿಸಿ 7 ಜನರು ಸಾವನ್ನಪ್ಪಿದ ವಿಚಾರ ಮನೆಯಲ್ಲಿದ್ದವರಿಗೆ ರವಿವಾರ ಸಂಜೆ ತನಕವೂ ತಿಳಿದಿರಲಿಲ್ಲ. ಬಸ್‌ ಅಪಘಾತಕ್ಕೆ ಈಡಾಗಿದೆ. ಸ್ವಲ್ಪ ಏಟಾಗಿದೆ ಎಂದಷ್ಟೇ ಮಾಹಿತಿ ನೀಡಲಾಗಿತ್ತು. ಮನೆಗೆ ತೆರಳಿದ ಮಾಧ್ಯಮದವರ ಜತೆ ನಿಮಗೆ ಏನಾದರೂ ಮಾಹಿತಿ ಇದೆಯಾ ಎಂದು ಹಿರಿಯ ಜೀವಗಳು ಮುಗ್ಧವಾಗಿ ಪ್ರಶ್ನಿಸುತ್ತಿದ್ದರು. ಅಪಘಾತವಾದ ಬಗ್ಗೆ ದೂರವಾಣಿ ಕರೆ ಬಂತು. ಜ. 4ರಂದು ನಿಗದಿಯಾಗಿದ್ದ ಅತಿಥಿ ಸತ್ಕಾರ ರದ್ದು ಮಾಡುವಂತೆ ತಿಳಿಸಿದ್ದಾರೆ. ಅದು ಬಿಟ್ಟು ಬೇರೇನೂ ತಿಳಿದಿಲ್ಲ ಎಂದು ಮನೆಯಲ್ಲಿದ್ದ ಸಂಬಂಧಿಕರು ಉದಯವಾಣಿಗೆ ತಿಳಿಸಿದರು.

ಇದನ್ನೂ ಓದಿ:ಬಲ್ನಾಡು: ಪಾಣತ್ತೂರು ಬಸ್ ದುರಂತದಲ್ಲಿ ಮೃತಪಟ್ಟ ತಂದೆ – ಮಗನ ಅಂತ್ಯಕ್ರಿಯೆ

5 ಕಿ.ಮೀ. ದೂರದಲ್ಲಿದ್ದರು!
ಅಪಘಾತ ಸ್ಥಳವು ವರನ ಮನೆಯಿಂದ 5 ಕಿ.ಮೀ. ದೂರದಲ್ಲಿತ್ತು. ಧಾರೆ ಮುಹೂರ್ತ ಮುಗಿದು ವಧುವಿನ ಕಡೆಯ ಸಂಬಂಧಿಕರ ಆಗಮನದ ನಿರೀಕ್ಷೆಯಲ್ಲಿರುವಾಗಲೇ ದುರಂತದ ಸುದ್ದಿ ಬಂತು. ಬಸ್‌ ವೇಗವಾಗಿ ಚಲಿಸುತ್ತಿತ್ತು. ನಾನು ಹಿಂಬದಿಯ ಸೀಟಿನಲ್ಲಿದ್ದೆ. ಮುಂಬದಿ ಸೀಟಿನಲ್ಲಿದ್ದ ಹೆಚ್ಚಿನವರು ಗಾಯಗೊಂಡಿದ್ದಾರೆ ಎಂದು ಬಸ್‌ನಲ್ಲಿದ್ದ ದಯಾನಂದ ಉದಯವಾಣಿಗೆ ತಿಳಿಸಿದ್ದಾರೆ.

Advertisement

ಮನೆ ಮಂದಿ ಪಾರು
ಸುಳ್ಯ: ಪೂರ್ವಾಹ್ನ 11.30ರ ಸುಮಾರಿಗೆ ಇಳಿಜಾರಿನ ತಿರುವಿನಲ್ಲಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿ ಬಳಿಕ ಜೋಸೆಫ್ ಅವರ ಮನೆಯ ಮೇಲೆ ಬಿದ್ದಿದೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಸೇವಾಭಾರತಿಯ ಉದಯ್‌ ತಿಳಿಸಿದರು.

ನೆರವಿಗೆ ಧಾವಿಸಿದ ಸ್ಥಳೀಯರು
ಅಪಘಾತದ ಶಬ್ದ ಕೇಳಿದ ಆಸುಪಾಸಿನ ಜನರು ಕೂಡಲೇ ಸ್ಥಳಕ್ಕೆ ಧಾವಿಸಿದರು. ಅನಂತರ ಪರಿಸರದ ಇತರ ಜನರನ್ನೂ ಕರೆಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಹತ್ತಿರದಲ್ಲಿ ಲಭ್ಯವಿದ್ದ, ಜೀಪು ಮತ್ತು ಕಾರುಗಳನ್ನೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ತರಿಸಿಕೊಂಡರು. ಕುಡಿಯುವುದಕ್ಕೆ ನೀರು ನೀಡಿ ಗಾಯಕ್ಕೆ ಬಟ್ಟೆ ಕಟ್ಟಿ ಉಪಚರಿಸಿ ಮಾನವೀಯತೆ ಮೆರೆದರು.

ಕಿರಿದಾದ, ತಿರುವಿನ ರಸ್ತೆ
ಅಪಘಾತ ಸಂಭವಿಸಿದ ಪ್ರದೇಶದಲ್ಲಿ ರಸ್ತೆ ಕಿರಿದಾಗಿದ್ದು, ತಿರುವಿನಿಂದ ಕೂಡಿತ್ತು. ಇಷ್ಟು ಮಾತ್ರವಲ್ಲದೆ, ಈ ಬಸ್‌ನ ಚಾಲಕನಿಗೂ ಈ ದಾರಿಯ ಕುರಿತು ಅಷ್ಟೇನೂ ಗೊತ್ತಿರಲಿಲ್ಲ. ತಿರುವಿನಲ್ಲಿ ವೇಗ ನಿಯಂತ್ರಿಸಲು ವಿಫ‌ಲವಾಗಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್‌ ಸಾಮಾನ್ಯವಾಗಿ ಮಂಗಳೂರು ಕಡೆ ದೈನಂದಿನ ಟ್ರಿಪ್‌ ನಡೆಸುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಗ್ರಾ.ಪಂ. ಅಭ್ಯರ್ಥಿ ರವಿಚಂದ್ರ ನಾಯ್ಕ
ಮೃತ ರವಿಚಂದ್ರ ನಾಯ್ಕ ಅವರು ಗ್ರಾ.ಪಂ. ಚುನಾವಣೆಯಲ್ಲಿ ಜಾಲೂÕರು 1ನೇ ವಾರ್ಡ್‌ನಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಅವರು ಹೆತ್ತವರು, ಪತ್ನಿ, ಪುತ್ರ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿ¨ªಾರೆ.

ತಂದೆ – ಮಗ ಸಾವು !
ವಧುವಿನ ಮನೆಯಿಂದ ಕೆಲವೇ ಮೀಟರ್‌ ದೂರದಲ್ಲಿರುವ ಸಂಬಂಧಿ ರಾಜೇಶ್‌, ಪತ್ನಿ ಜಯಾ ಮತ್ತು ಇಬ್ಬರು ಮಕ್ಕಳೊಂದಿಗೆ ಬಸ್‌ನಲ್ಲಿ ಮದುವೆಗೆ ತೆರಳಿದ್ದರು. ರಾಜೇಶ್‌ ಮತ್ತು ಪುತ್ರ ಆದರ್ಶ ಮೃತಪಟ್ಟಿದ್ದಾರೆ. ಆದರ್ಶ ಅಂಗವೈಕಲ್ಯ ಹೊಂದಿದ್ದನು. ರಾಜೇಶ್‌ ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು.

ಅಪಘಾತದ ಸುದ್ದಿ ತಿಳಿದ ರಾಜೇಶ್‌ ಅವರ ಮಾವ (ಪತ್ನಿಯ ತಂದೆ) ಚಣಿಲದ ಬೀಗ ಜಡಿದಿದ್ದ ಮಗಳ ಮನೆ ಸನಿಹದಲ್ಲಿ ಮಧ್ಯಾಹ್ನದಿಂದಲೇ ಕಾದು ಕುಳಿತಿದ್ದರು. ಅಳಿಯ, ಮೊಮ್ಮಗ ಮೃತಪಟ್ಟಿರುವ ವಿಚಾರ ಅವರಿಗೆ ತಿಳಿದಿರಲಿಲ್ಲ. ಆದರ್ಶನಿಗೆ ಸ್ವಲ್ಪ ಗಾಯವಾಗಿದೆ ಎಂದಷ್ಟೇ ಹೇಳಿದ್ದಾರೆ. ಈಗ ಯಾರ ಫೋನ್‌ ಕೂಡ ಸಿಗುತ್ತಿಲ್ಲ ಎಂದವರು ದುಃಖೀಸಿದರು.

Advertisement

Udayavani is now on Telegram. Click here to join our channel and stay updated with the latest news.

Next