ಮುದ್ದೇಬಿಹಾಳ: ಸಾರಿಗೆ ಸಂಸ್ಥೆಯ ಬಸ್ಸೊಂದು ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸುವಾಗ ಎದುರಿಗೆ ಬಂದ ಟ್ರ್ಯಾಕ್ಟರ್ ಗೆ ದಾರಿ ಕೊಡುವ ಭರದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ಕಂಬಕ್ಕೆ ಢಿಕ್ಕಿ ಹೊಡೆದರೂ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲುಕು ಬಸರಕೋಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮುದ್ದೇಬಿಹಾಳದಿಂದ ಬಸರಕೋಡ ಮಾರ್ಗವಾಗಿ ಗುಡದಿನ್ನಿಗೆ ಈ ಬಸ್ ತೆರಳುತ್ತಿತ್ತು. ಗ್ರಾಮದ ಸ್ಟೇಟ್ ಬ್ಯಾಂಕ್ ಶಾಖೆಯ ಬಳಿ ಬಸ್ ಬಂದಾಗ ಎದುರಿನ ವಾಹನಕ್ಕೆ ದಾರಿ ಮಾಡಿ ಕೊಡಲು ರಸ್ತೆ ಬದಿಗೆ ಚಾಲಕ ಬಸ್ ಚಲಾಯಿಸಿದ್ದಾನೆ. ಆದರೆ ಏಕಾಏಕಿ ಆತನಿಗೆ ಮೈ ಜುಂ ಎಂದಂತಾಗಿ ಗಾಬರಿಗೊಂಡು ಎಕ್ಸಿಲೆಟರ್ ಅದುಮಿದ್ದಾನೆ. ವೇಗ ಹೆಚ್ಚಾದ ಬಸ್ ಎದುರಿಗಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ರಭಸಕ್ಕೆ ಕಂಬ ಮುರಿದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗಳು ಬಸ್ ಮೇಲೆ ಬಿದ್ದಿವೆ. ಅಷ್ಟರೊಳಗೆ ವಿದ್ಯುತ್ ಬಂದ್ ಆಗಿ ಪ್ರಾಣಾಪಾಯ ತಪ್ಪಿದೆ.
ಇದನ್ನೂ ಓದಿ:2ಎ ಮೀಸಲಾತಿ ಹೋರಾಟ ವಿಚಾರ: ಸಿಎಂ ಭೇಟಿಯಾದ ಜಯ ಮೃತ್ಯುಂಜಯ ಸ್ವಾಮೀಜಿ
ಒಂದು ವೇಳೆ ಬಸ್ ಮೇಲೆ ಬಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರೆ ಅದರ ಶಾಕಗೆ ಬಸ್ಸಿನೊಳಗಿದ್ದ 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವ ಸಾದ್ಯತೆ ಇತ್ತು. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸ್ ಠಾಣೆಯ ಪೊಲೀಸರು ತೆರಳಿದ್ದಾರೆ.
ಸಾರ್ವಜನಿಕರ ಆಕ್ರೋಶ: ವಿದ್ಯುತ್ ಕಂಬವು ರಸ್ತೆ ಸಂಚಾರಕ್ಕೆ ಅಡ್ಡಿ ಆಗುವಂತಿದೆ. ಇಕ್ಕಟ್ಟಾದ ರಸ್ತೆಯನ್ನು ಸಾರ್ವಜನಿಕರು ಅತಿಕ್ರಮಿಸಿದ್ದರಿಂದ ಸುಗಮ ಸಂಚಾರ ಸಾಧ್ಯವಿಲ್ಲದಂತಾಗಿದೆ. ನಿತ್ಯವೂ ಇದೇ ಪರಿಸ್ಥಿತಿ ಇಲ್ಲಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಅಗಲಗೊಳಿಸಲು, ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತಿರುವ ಕಂಬ ಸ್ಥಳಾಂತರಿಸಲು ಆಗ್ರಹಿಸಿದ್ದಾರೆ.