ಗಂಗಾವತಿ: ಗೇರ್ ಫೈಲ್ ಆಗಿ ಕೆಎಸಾರ್ಟಿಸಿ ಬಸ್ ರಸ್ತೆ ಬದಿಯ ಹಳ್ಳಕ್ಕೆ ನುಗ್ಗಿದ್ದು, ಚಾಲಕನ ಜಾಣ್ಮೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ತಾಲೂಕಿನ ಮುಕುಂಪಿ ಮತ್ತು ಜಬ್ಬಲಗುಡ್ಡ ಮಧ್ಯೆ ಜು.14ರ ಶುಕ್ರವಾರ ಬೆಳಗ್ಗೆ ನಡೆದಿದೆ.
ಕೊಪ್ಪಳದಿಂದ ಗಂಗಾವತಿ ಕಡೆ ಬರುತ್ತಿದ್ದ ಕೆಎಸಾರ್ಟಿ ಸಿ ಬಸ್ ಮುಕುಂಪಿ ಮತ್ತು ಜಂಬಲ ಗುಡ್ಡ ಗ್ರಾಮಗಳ ಮಧ್ಯೆ ತಿರುವಿನಲ್ಲಿ ಹೋಗುವ ಸಂದರ್ಭ ಗೇರ್ ಫೈಲ್ ಆಗಿ ಬಸ್ ಪಲ್ಟಿಯಾಗುವುದನ್ನು ಚಾಲಕ ಜಾಣ್ಮೆಯಿಂದ ತಪ್ಪಿಸಿದ್ದಾನೆ.
ಈ ಸಂದರ್ಭದಲ್ಲಿ ಕೂಡಲೇ ಎಚ್ಚೆತ್ತ ಚಾಲಕ ಬಸ್ಸನ್ನು ನಿಯಂತ್ರಿಸಿ ಬ್ರೇಕ್ ಹಾಕಿ ಬಸ್ ಬಲಭಾಗಕ್ಕೆ ತಿರುಗಿಸುವಲ್ಲಿ ಯಶಸ್ವಿಯಾಗಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಈ ಸಂದರ್ಭದಲ್ಲಿ ಎದುರುಗಡೆ ಯಾವುದೇ ವಾಹನ ಬರದೇ ಇರುವುದರಿಂದ ಅನಾಹುತ ಸಂಭವಿಸಿಲ್ಲ. ಬಸ್ ನಲ್ಲಿದ್ದ ವಿದ್ಯಾರ್ಥಿಗಳು ಮತ್ತು ಒಂದಿಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬಸ್ ನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಸ್ಥಳಕ್ಕೆ ಕೆಎಸಾರ್ಟಿಸಿ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಕೇಸ್ ದಾಖಲಿಸಿ ತನಿಖೆ ನಡೆಸಿದ್ದಾರೆ.