Advertisement
ಹಲವು ಬಾರಿ ಪೆಟ್ರೋಲ್, ಡೀಸೆಲ್ ದರ ಏರಿದ್ದರೂ ಬಸ್ ಯಾನ ದರ ಹೆಚ್ಚಿಸಿಲ್ಲ. ಇದ ರಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಸಿಎಂ ಯಡಿಯೂರಪ್ಪ ಸಾರಿಗೆ ಇಲಾಖೆಗೆ ಸಂಬಂಧಿಸಿ ನಡೆಸಿದ ಬಜೆಟ್ ಪೂರ್ವಭಾವಿ ಸಭೆ ಯಲ್ಲೂ ಈ ವಿಚಾರ ಚರ್ಚೆಯಾಗಿದೆ. ನಷ್ಟ ತಪ್ಪಿಸಲು ಪ್ರಯಾಣ ದರ ಏರಿಕೆ ಮಾಡಲು ಇಲಾಖೆ ಗಂಭೀರ ಚಿಂತನೆ ನಡೆಸಿದಂತಿದೆ ಎನ್ನಲಾಗಿದೆ.
ಬಸ್ ಯಾನ ದರ ಏರಿಕೆಗೆ ಸರಕಾರ ಮುಂದಾಗಿರುವುದು ಇದೇ ಮೊದಲಲ್ಲ; ಈ ಹಿಂದೆಯೂ ಎರಡು ಬಾರಿ ದರ ಹೆಚ್ಚಳ ಮಾಡಿ, ವಿರೋಧದ ಹಿನ್ನೆಲೆಯಲ್ಲಿ ಆದೇಶ ಹಿಂಪಡೆದ ಉದಾಹರಣೆಗಳಿವೆ.
Related Articles
2019ರ ಸೆಪ್ಟಂಬರ್‌ನಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆಗೆ ಆದೇಶಿಸಲಾಗಿತ್ತು. ವಿದ್ಯಾರ್ಥಿ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ್ದರಿಂದ ಕೊನೆ ಕ್ಷಣದಲ್ಲಿ ಹಿಂಪಡೆಯಲಾಯಿತು. ಆಗ ವಿದ್ಯಾರ್ಥಿ ಬಸ್ ಪಾಸ್ ದರವನ್ನು ಕನಿಷ್ಠ 100ರಿಂದ ಗರಿಷ್ಠ 250 ರೂ.ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿತ್ತು.
Advertisement
2013ರಲ್ಲಿ ಪ್ರಯಾಣ ದರವನ್ನು ಶೇ.10.50ರಷ್ಟು ಹೆಚ್ಚಿಸಲಾಗಿತ್ತು. 2014ರಲ್ಲಿ ಮತ್ತೆ ಸರಾಸರಿ ಶೇ. 7.96ರಷ್ಟು ದರ ಏರಿಕೆ ಶಾಕ್ ನೀಡಲಾಗಿತ್ತು. ಇದಾದ ಅನಂತರ ಅಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ದರ ಏರಿಕೆ ಮಾಡಿರಲಿಲ್ಲ. ಈ ಮಧ್ಯೆ 2015ರಲ್ಲಿ ಪ್ರಯಾಣಿಕರಿಗೆ ಶೇ. 2ರಷ್ಟು ದರ ಇಳಿಕೆ ಮಾಡುವ ಮೂಲಕ ಕೊಂಚ ಸಮಾಧಾನ ನೀಡಲಾಗಿತ್ತು.
ಕೇಂದ್ರದ ಭಾರೀ ದಂಡ ಜಾರಿ?ಪ್ರಯಾಣ ದರ ಏರಿಕೆಗೆ ಸಿದ್ಧತೆ ನಡೆಸಿರುವ ಬೆನ್ನಲ್ಲೇ ರಾಜ್ಯ ಸರಕಾರವು ಸಂಚಾರ ನಿಯಮ ಉಲ್ಲಂಘನೆಗೆ ಕೇಂದ್ರ ವಿಧಿಸಿರುವ ದಂಡ ಮೊತ್ತದ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ಚಿಂತನೆ ನಡೆಸಿದೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರಿಗೆ ಈ ಬಗ್ಗೆ ಸುಳಿವು ನೀಡಿದ ಸಾರಿಗೆ ಸಚಿವ, ಲಕ್ಷ್ಮಣ ಸವದಿ, ದೇಶದಲ್ಲಿ ವಾರ್ಷಿಕವಾಗಿ ರಸ್ತೆ ಅಪಘಾತದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 200ಕ್ಕೆ ತಿದ್ದುಪಡಿ ತಂದು ದೊಡ್ಡ ಮೊತ್ತದ ದಂಡ ವಿಧಿಸಿತ್ತು. ಆದರೆ ಸಾರ್ವಜನಿಕರಲ್ಲಿ ಈ ಬಗ್ಗೆ ವ್ಯಾಪಕ ಅರಿವು ಮೂಡಿಸದೆ ಏಕಾಏಕಿ ಜಾರಿಗೊಳಿಸುವುದರಿಂದ ಹೊರೆಯಾಗಲಿದೆ ಎಂಬ ಕಾರಣಕ್ಕೆ ರಾಜ್ಯ ಸರಕಾರ ದಂಡ ಮೊತ್ತ ಇಳಿಕೆ ಮಾಡಿತ್ತು ಎಂದರು. ಈಗ ಜನರಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚು ಮೊತ್ತದ ದಂಡ ವಿಧಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಆಯ್ದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಗಳು ಕಡಿಮೆಯಾಗಿವೆ ಎಂದು ಪೊಲೀಸ್ ಇಲಾಖೆಯ ವರದಿಗಳಿಂದ ಗೊತ್ತಾಗಿದೆ ಎಂದರು. ಅರಿವು ಹೆಚ್ಚಿದಂತೆ ಜನರು ನಿಯಮ ಉಲ್ಲಂಘನೆ ನಡೆಸುವುದಿಲ್ಲ. ಹಾಗಾಗಿ ಕೇಂದ್ರ ವಿಧಿಸಿದ್ದ ಭಾರೀ ದಂಡ ಮೊತ್ತವನ್ನೇ ಜಾರಿ ಮಾಡಲು ಚಿಂತಿಸಲಾಗಿದೆ. ಜಾರಿಗೆ ಕಾಲಮಿತಿ ಇರಿಸಿಕೊಂಡಿಲ್ಲ. ಬಜೆಟ್ ಅಧಿವೇಶನದ ಬಳಿಕ ಪರಿಸ್ಥಿತಿ ಅವಲೋಕಿಸಿ ಚಿಂತನೆ ನಡೆಸಲಾಗುವುದು ಎಂದರು.