ಕುಷ್ಟಗಿ: ಹೊಸಪೇಟೆ-ಕುಷ್ಟಗಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ (ಎನ್ನೆಚ್) ಹೊಂದಿಕೊಂಡಿರುವ ಕುರಬನಾಳ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲಿಯವರೆಗೂ ಇರಲಿಲ್ಲ. ಇದೇ ಮೊದಲ ಬಾರಿಗೆ ಸೋಮವಾರದಿಂದ ಬಸ್ ಸೇವೆ ಆರಂಭಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಗ್ರಾಮಕ್ಕೆ ಬಂದ ಬಸ್ ನ್ನು ಗ್ರಾಮಸ್ಥರು ಸಂಭ್ರಮದಿಂದ ಸ್ವಾಗತಿಸಿಕೊಂಡರು.
ಕುಷ್ಟಗಿ ಪಟ್ಟಣದಿಂದ ಕೇವಲ 5 ಕಿ.ಮೀ. ದೂರದಲ್ಲಿರುವ ಕುರಬನಾಳ ಗ್ರಾಮಕ್ಕೆ ಚತುಷ್ಪಥ ರಾಷ್ತ್ರೀಯ ಹೆದ್ದಾರಿಯಿಂದಾಗಿ ಸಾರಿಗೆ ಸೌಲಭ್ಯ ನೆಚ್ಚಿಕೊಂಡಿರಲಿಲ್ಲ. ಹೆದ್ದಾರಿ ಕಾರಣದಿಂದಾಗಿ ಇಲ್ಲಿನ ಮಕ್ಕಳನ್ನು ಹೈಸ್ಕೂಲ್ ಶಿಕ್ಷಣಕ್ಕಾಗಿ 5 ಕಿ.ಮೀ. ದೂರದ ಕುಷ್ಟಗಿ ಬದಲಿಗೆ ಅಷ್ಟೇ ಕಿ.ಮೀ.ದೂರದಲ್ಲಿರುವ ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮಕ್ಕೆ ಹೋಗಿ ಬರುತ್ತಿದ್ದರು. ಹೀಗಾಗಿ ಈ ಗ್ರಾಮದ ವಿದ್ಯಾರ್ಥಿಗಳಿಗೆ ಸೈಕಲ್, ಬೈಕ್, ಖಾಸಗಿ ವಾಹನ, ಕಾಲ್ನಡಿಗೆ ಬಳಕೆಯಲ್ಲಿತ್ತು.
ಇದೇ ಮೊದಲ ಬಾರಿ ಗ್ರಾಮಕ್ಕೆ ಬಂದ ಬಸ್ ಗೆ ಗ್ರಾಮಸ್ಥರು ತಳಿರು ತೋರಣಗಳಿಂದ ಅಲಂಕರಿಸಿ, ಪೂಜಿ ಶಾಲಾ ಮಕ್ಕಳನ್ನು ಅರಳಹಳ್ಳಿ ಗ್ರಾಮಕ್ಕೆ ಬೀಳ್ಕೊಟ್ಟರು. ಈ ವೇಳೆ ಡಿಪೋ ವ್ಯವಸ್ಥಾಪಕ ಜಡೀಸ್ ಜೆ.ವಿ. ಚಾರ್ಜಮನ್ ಕುಂಟೆಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಕುರಿತು ಗ್ರಾಮದ ರಮೇಶ ಬಿ. ಕುರ್ನಾಳ ಪ್ರತಿಕ್ರಿಯಿಸಿ ಬಸ್ಸು ನಿಗದಿತ ಶಾಲಾ ವೇಳೆಗೆ ಕುಷ್ಟಗಿ, ಕುರಬನಾಳ, ನೆರೆಬೆಂಚಿ,ಹಿರೇ ಅರಳಹಳ್ಳಿ ತಲುಪಲಿದ್ದು ಸಂಜೆ ಶಾಲೆ ಬಿಡುವಿನ ವೇಳೆಗೆ ಸಕಾಲಿಕವಾಗಿ ಬರಲಿದೆ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರಲ್ಲಿ ಈ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದರಿಂದ ನಮ್ಮೂರಿಗೆ ಇದೆ ಮೊದಲ ಬಾರಿಗೆ ಅಧೀಕೃತ ಬಸ್ ಸೇವೆ ಆರಂಭವಾಗಿರುವುದು ಸಂತೋಷದ ಸಂಗತಿ ಎಂದರು.
ಹನಮಂತಪ್ಪ ಸಾಹುಕಾರ ನಿಂಗಪ್ಪ ಬೆಣಕಲ್ಲ್ ಶರಣಪ್ಪ ತಳವಾರ ಮಲ್ಲಣ್ಣ ಪರಪ್ಪನವರ್ ಮಲ್ಲಪ್ಪ ಗುಮಗೆರಿ ಮಲ್ಲಪ್ಪ ರಾಮಣ್ಣನವರು ಭೀಮಪ್ಪ ಪವಡೆಪ್ಪನವರ್ .ಶರಣಪ್ಪ ಪವಡೆಪ್ಪನವರ್ ದೇವೆಂದ್ರಗೌಡ ಮಾಲಿ ಪಾಟೀಲ ಬಾಲಪ್ಪ ಕರಕಪ್ಪನವರು ಶಂಕ್ರಪ್ಪ ಪ್ಯಾಟೇನ್ ಇದ್ದರು.