Advertisement

ಕರುಡುಚಿಲುಮಿ ಗ್ರಾಮಕ್ಕಿಲ್ಲ ಬಸ್‌ ಸೌಲಭ್ಯ

10:40 AM Jan 05, 2019 | |

ಸಿಂಧನೂರು: ತಾಲೂಕಿನ ಉಮಲೂಟಿ ಗ್ರಾಪಂ ವ್ಯಾಪ್ತಿಯ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕರುಡುಚಿಲುಮಿ ಗ್ರಾಮಕ್ಕೆ ಈವರೆಗೂ ಬಸ್‌ ಸೌಲಭ್ಯ ಇಲ್ಲದ್ದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ನಡೆದುಕೊಂಡೇ ಗ್ರಾಪಂ ಕೇಂದ್ರ ಉಮಲೂಟಿಗೆ ಬಂದು ಬಸ್‌ ಹಿಡಿಯಬೇಕಿದೆ.

Advertisement

ಸುತ್ತಲೂ ಗುಡ್ಡಗಳ ಸಾಲಿನ ಮಧ್ಯೆ ಇರುವ ಗ್ರಾಮದಲ್ಲಿ ಏರು ಇಳುವಿನ ಕಾಲು ದಾರಿ ಇದೆ. ರಸ್ತೆ ಅಕ್ಕಪಕ್ಕ ಮುಳ್ಳಿನ ಗಿಡಗಳು ಬೆಳೆದಿವೆ. ಗ್ರಾಮದಲ್ಲಿ ಸುಮಾರು ಒಂದು ಸಾವಿರ ಮತದಾರರಿದ್ದಾರೆ. ಆದರೆ ಗ್ರಾಮಕ್ಕೆ ಸರಿಯಾದ ರಸ್ತೆ ಸೌಲಭ್ಯವಿಲ್ಲ. ರಸ್ತೆ ಸೌಲಭ್ಯವಿಲ್ಲದ್ದರಿಂದ ಗ್ರಾಮಕ್ಕೆ ಬಸ್‌ಗಳು ಬರುತ್ತಿಲ್ಲ. ಗ್ರಾಮಸ್ಥರಿಗೆ ಇಂದಿಗೂ ಟಂಟಂ ರಿಕ್ಷಾ, ಟ್ರ್ಯಾಕ್ಟರ್‌ಗಳೇ ಆಧಾರವಾಗಿವೆ. 

ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆ ಇದ್ದು 1ರಿಂದ 5ನೇ ತರಗತಿವರೆಗೆ ಕಲಿಸಲಾಗುತ್ತಿದೆ. ನಂತರ 6ರಿಂದ 8ನೇ ತರಗತಿವರೆಗೆ ಮೂರು ಕಿ.ಮೀ. ಅಂತರದಲ್ಲಿರುವ ಗೊರಲೂಟಿಗೆ ನಡೆದುಕೊಂಡು ಹೋಗಬೇಕು. ಇನ್ನು 9ರಿಂದ 10ನೇ ತರಗತಿ ಕಲಿಯಲು ಗ್ರಾಪಂ ಕೇಂದ್ರ ಸ್ಥಾನ ಉಮಲೂಟಿಯಲ್ಲಿರುವ ಪ್ರೌಢಶಾಲೆಗೆ ನಡೆದುಕೊಂಡು, ಇಲ್ಲವೇ ಟಂ ಟಂ ರಿಕ್ಷಾಗಳಲ್ಲಿ ಹೋಗಬೇಕು. ಇಲ್ಲವೇ 6-7 ಕಿಮೀ ಅಂತರದಲ್ಲಿರುವ ಕುಷ್ಟಗಿ ತಾಲೂಕಿನ ತಾವರಗೆರೆಗೆ ಹೋಗುತ್ತಾರೆ. ಸಿಂಧನೂರು ತಾಲೂಕು ಕೇಂದ್ರದಿಂದ 38 ಕಿಮೀ ದೂರದಲ್ಲಿರುವ ಕರುಡುಚಿಲುಮಿ ಗ್ರಾಮಕ್ಕೆ ಕುಷ್ಟಗಿ ತಾಲೂಕಿನ ತಾವರಗೆರೆ ಪಟ್ಟಣ ಕೇವಲ 6 ಕಿಮೀ ಅಂತರದಲ್ಲಿದೆ. ಗ್ರಾಮದಿಂದ ತಾವರೆಗೆರೆಗೆ ಬಸ್‌ ಸೌಲಭ್ಯವಿಲ್ಲದ್ದರಿಂದ ಸುಮಾರು 40ಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲೇ ತೆರಳುವಂತಾಗಿದೆ.

ಇನ್ನು ತಾಲೂಕು ಕೇಂದ್ರ ಸಿಂಧನೂರಿನ ಪ್ರೌಢಶಾಲೆ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಉಮಲೂಟಿ ಗ್ರಾಮಕ್ಕೆ ನಡೆದುಕೊಂಡು ಬಂದು ಅಲ್ಲಿಂದ ಬಸ್‌ನಲ್ಲಿ ತೆರಳುತ್ತಾರೆ. ಗ್ರಾಮ ಸಿಂಧನೂರು ತಾಲೂಕಿಗೆ ಒಳಪಟ್ಟಿದ್ದರೂ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಇಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ರಾಮದಲ್ಲಿ ಸರಿಯಾದ ರಸ್ತೆ, ಚರಂಡಿ, ಶುದ್ಧ ನೀರು, ಶೌಚಾಲಯ, ಬೀದಿ ದೀಪಗಳಂತಹ ಕನಿಷ್ಠ ಸೌಲಭ್ಯಗಳೂ ಇಲ್ಲ ಎಂದು ದೂರಿದ್ದಾರೆ ಗ್ರಾಮಸ್ಥರು. ಪಕ್ಕದ ಗೊರಲೂಟಿ ಮತ್ತು ಹೊಸೂರು ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಶಾಲಾ-ಕಾಲೇಜ್‌ಗೆ ತೆರಳಲು ತೊಂದರೆ ಅನುಭವಿಸಿದ ಹಲವು ವಿದ್ಯಾರ್ಥಿಗಳು ಕೊಪ್ಪಳದ ಗವಿಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇನ್ನು ಕೆಲವರು ಸುತ್ತಮುತ್ತಲಿನ ಪಟ್ಟಣಗಳಲ್ಲಿ ರೂಮ್‌ ಮಾಡಿಕೊಂಡು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
 
ಚುನಾವಣೆ ವೇಳೆ ಮತ ಕೇಳಲು ಬರುವ ಜನನಾಯಕರು ನಂತರ ಈ ಗ್ರಾಮದತ್ತ ಮುಖ ಮಾಡದ್ದರಿಂದ ಇಲ್ಲಿ ಅಭಿವೃದ್ಧಿ, ಗ್ರಾಮಸ್ಥರಿಗೆ ಸೌಲಭ್ಯವೆಂಬುದು ಮರೀಚಿಕೆಯಾಗಿದೆ. ಕ್ಷೇತ್ರದ ಶಾಸಕರಾದ ಪ್ರತಾಪಗೌಡ ಪಾಟೀಲ ಎರಡು ಬಾರಿ ಮಾತ್ರ ಇಲ್ಲಿಗೆ ಭೇಟಿ ನೀಡಿದ್ದಾರೆ.

Advertisement

ಶುದ್ಧ ನೀರಿಲ್ಲ: ಗ್ರಾಮಸ್ಥರಿಗೆ ಶುದ್ಧ ನೀರು ಸೌಲಭ್ಯ ಇಲ್ಲದ್ದರಿಂದ ಕೊಳವೆ ಬಾವಿ ನೀರೇ ಆಧಾರ. ಕೊಳವೆಬಾವಿ ಕೈಕೊಟ್ಟರೆ ದೂರದ ಹೊಲ, ತೋಟಗಳಿಗೆ ಹೋಗಿ ಗ್ರಾಮಸ್ಥರು ನೀರು ತರಬೇಕು. ಇಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲೂ ಕ್ಷೇತ್ರದ ಶಾಸಕರು ಮುಂದಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಆರೋಗ್ಯ ಕೇಂದ್ರವಿಲ್ಲ: ಗ್ರಾಮದಲ್ಲಿ ಆರೋಗ್ಯ ಕೇಂದ್ರವಿಲ್ಲ. ಸಣ್ಣಪುಟ್ಟ ಕಾಯಿಲೆಗಳಿಗೆ ಗ್ರಾಮಸ್ಥರು ಉಮಲೂಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಲ್ಲವೇ ತಾವರಗೆರೆಗೆ ಹೋಗುತ್ತಾರೆ. ಇಲ್ಲವೇ ಗಂಗಾವತಿ, ಸಿಂಧನೂರು ನಗರಗಳಿಗೆ ಹೋಗಬೇಕು ಎನ್ನುತ್ತಾರೆ ಗ್ರಾಮದ ಮಾರುತೇಶ.

ರಸ್ತೆ ನಿರ್ಮಿಸಲಿ: ಬೇರಿಗಿಯಿಂದ ಕರುಡುಚಿಲುಮಿ ಗ್ರಾಮಕ್ಕೆ ಕಾಲು ದಾರಿ ಇದೆ. ರಸ್ತೆ ಬದಿ ಬೆಳೆದಿರುವ ಮುಳ್ಳುಕಂಟಿ, ಜಾಲಿ ಪೊದೆಗಳನ್ನು ಕಡಿಸಿ ಸ್ವತ್ಛಗೊಳಿಸಿದರೆ, ನಡುವೆ ಇರುವ ಏರು-ಇಳುವು ಸಮಗೊಳಿಸಿ 10 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡಿದರೆ ಗ್ರಾಮಕ್ಕೆ ಬಸ್‌ ಸಂಪರ್ಕ ಕಲ್ಪಿಸಲು ಅವಕಾಶವಿದೆ. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮನಸ್ಸು ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.

ಸುಮಾರು ವರ್ಷಗಳಿಂದ ನಮ್ಮ ಗ್ರಾಮಕ್ಕೆ ಬಸ್‌ ವ್ಯವಸ್ಥೆಯಿಲ್ಲ. ಸಂಬಂಧಪಟ್ಟವರಿಗೆ ತಿಳಿಸಿ ತಿಳಿಸಿ ಸಾಕಾಗಿದೆ. ನೀರಿನ ತೊಂದರೆಯೂ ಹೆಚ್ಚಿದೆ. ಇದರ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಬಸ್‌ ಸೌಲಭ್ಯವಿಲ್ಲದ್ದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಗಿದೆ.
 ಹನುಮಂತ, ಗ್ರಾಪಂ ಸದಸ್ಯ, ಕರಡುಚಿಲುಮಿ

ಕರಡುಚಿಲುಮಿ ಗ್ರಾಮಕ್ಕೆ ಬಸ್‌ ಸೌಲಭ್ಯವಿಲ್ಲ ಎಂಬುದು ನಮ್ಮ ಗಮನಕ್ಕಿಲ್ಲ. ಈ ಕುರಿತು ಮನವಿ ಸಲ್ಲಿಸಿದರೆ ಬಸ್‌ ಬಿಡುವ ವ್ಯವಸ್ಥೆ ಮಾಡಲಾಗುವುದು.
 ರಾಕೇಶ ಜಾಧವ, ಈಶಾನ್ಯ ಸಾರಿಗೆ ಸಂಸ್ಥೆ ಡಿಟಿಒ, ರಾಯಚೂರು

„ಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next