ಯಲಬುರ್ಗಾ: ಪಟ್ಟಣದ ಕೆಎಸ್‌ಆರ್‌ಟಿಸಿ ಡಿಪೋ ಬಸ್ ಚಾಲಕ, ನಿರ್ವಾಹಕರು ರಾಜೋತ್ಸವದ ನಿಮಿತ್ತ ತಮ್ಮ ಬಸ್‌ನ್ನು ಹಳದಿ-ಕೆಂಪು ಬಣ್ಣ ಹಾಗೂ ಬಗೆಯ ಹೂವು, ತಳಿರು ತೋರಣಗಳಿಂದ ಸಿಂಗರಿಸಿ ಭುವನೇಶ್ವರಿ ದೇವಿ ಭಾವಚಿತ್ರದೊಂದಿಗೆ ಪ್ರಯಾಣಿಸುವ ಮೂಲಕ ಕನ್ನಡ ಪ್ರೇಮ ಮೆರೆಯುತ್ತಾರೆ.
ಪಟ್ಟಣದ ಬಸ್ ಡಿಪೋದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಸವನಗೌಡ ಹಳೇಮನಿ ಎಂಬುವರು ಕರ್ತವ್ಯದ ಭಾಗವಾಗಿಯೇ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ. ಇವರ ಕನ್ನಡದ ಕೈಂಕರ್ಯಕ್ಕೆ ತಾಲೂಕು ಸೇರಿ ಪಕ್ಕದ ಜಿಲ್ಲೆಯ ಜನತೆಯೂ ತಲೆದೂಗಿದ್ದಾರೆ.
ಗದಗ-ನರೇಗಲ್ ಮಾರ್ಗದಲ್ಲಿ ಸಂಚರಿಸುವ ಇವರ ಬಸ್‌ನ್ನು ರಾಜ್ಯೋತ್ಸವದಂದು ವಿಶೇಷವಾಗಿ ಅಲಂಕರಿಸುತ್ತಾರೆ. ಬಸ್ ಮುಂದೆ ಮೈಕ್ ಹಾಗೂ ಸ್ಪೀಕರ್ ಕಟ್ಟಿಕೊಂಡು ಕನ್ನಡ ಪ್ರೇಮ ಹೆಚ್ಚಿಸುವ ಗೀತೆಗಳನ್ನು ಹಚ್ಚಿಕೊಂಡು ಸುತ್ತುವುದು ವಿಶೇಷವಾಗಿರುತ್ತದೆ. ಬಸ್ ತುಂಬಾ ಕವಿ ಸಾಹಿತಿಗಳ, ಶರಣ, ಸಂತರ, ದಾರ್ಶನಿಕರ, ಹೋರಾಟಗಾರರ ಹಾಗೂ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಗಳನ್ನು ಹಾಕಿದ್ದಾರೆ.
ರಾಷ್ಟ್ರಕವಿ ಕುವೆಂಪು, ಸಾಹಿತಿ ಜಿ.ಎಸ್. ಶಿವರುದ್ರಪ್ಪನವರ ಬರಹಗಳಿಂದ ಬಸ್ ಅಂಲಕರಿಸುತ್ತಾರೆ. ತಮ್ಮ ಸ್ವಂತ ಹಣದಿಂದಲೇ ಹೂವು, ಭಾವಚಿತ್ರಗಳನ್ನು, ಧ್ವನಿವರ್ಧಕ ಖರೀದಿಸಿದ್ದಾರೆ. ಸೇವೆಗೆ ಸೇರಿ 23 ವರ್ಷಗಗಳಾಗಿವೆ. ಬಸ್ ಸಿದ್ಧಗೊಳಿಸಿ ರಾಜೋತ್ಸವಕ್ಕೆ ಮೆರಗುವ ತರುವ ಕಾರ್ಯವು ಕಳೆದ 10 ವರ್ಷಗಳಿಂದ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ಇವರ ಸಹೊದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸನ್ಮಾನ: ಇವರ ಕನ್ನಡ ಪ್ರೇಮವನ್ನು ಮೆಚ್ಚಿ ತಾಲೂಕಾಡಳಿತ ಕಳೆದ ಬಾರಿಯ ಕನ್ನಡ ರಾಜೋತ್ಸವಕಾರ್ಯಕ್ರಮದಲ್ಲಿ ಸನ್ಮಾನಿಸಿದೆ. ಚಾಲಕ ಬಸವನಗೌಡ ಅವರು ಸಾಹಿತಿಗಳ ಹಾಗೂ ಜ್ಞಾನಪೀಠ ಪುರಸ್ಕೃತರ ಹೆಸರು ಮತ್ತು ಅವರು ಬರೆದ ಪುಸ್ತಕ, ಬರಹಗಳು ಪಟಪಟನೆ ಹೇಳುತ್ತಾನೆ. ಇವರ ಕನ್ನಡದ ಅಭಿಮಾನಕ್ಕೆ ಧನ್ಯವಾದ ಹೇಳಲೇಬೇಕು. ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಚಾಲಕ ಬಸವನಗೌಡ ಎಂದರೇ ಎಲ್ಲರಿಗೂ ಅಚ್ಚುಮೆಚ್ಚು.
-ಮಲ್ಲಪ್ಪ ಮಾಟರಂಗಿ