ಮಂಗಳೂರು: ನಗರದ ಕೊಟ್ಟಾರ ಕಲ್ಲುರ್ಟಿ ದೈವಸ್ಥಾನದ ಎದುರು ರಸ್ತೆ ದಾಟುತ್ತಿದ್ದಾಗ ಬಸ್ ಢಿಕ್ಕಿಯಾಗಿ ಮೇಘಾ ರಂಜಿತ್ ಪೈ (34) ಅವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಸ್ ಚಾಲಕ ಪದವಿನಂಗಡಿಯ ಶರಣ್ ಕುಮಾರ (35)ನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 304ರಂತೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಡಿ. 17ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚಾಲಕ ಬಸ್ಸನ್ನು ರಸ್ತೆಯ ವಿರುದ್ಧ ದಿಕ್ಕಿನಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಾದಚಾರಿ ಮೇಘಾ ರಂಜಿತ್ ಪೈ ಅವರಿಗೆ ಢಿಕ್ಕಿ ಹೊಡೆಸಿದ್ದ. ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 304 (ಕೊಲೆಯಲ್ಲದ ಮಾನವ ಹತ್ಯೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಡಿ. 3ರಂದು ನಡೆದ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮೇಘಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಡಿ. 6ರಂದು ಮೃತಪಟ್ಟಿದ್ದರು.