Advertisement
ಮೂಲತಃ ಬೆಳಗಾವಿ ಜಿಲ್ಲೆಯ ಯರಗಟ್ಟಿಯವರಾದ ಅನಿತಾ ಅವರು ಮಂಗಳೂರು-ಕಾರ್ಕಳ ನಡುವೆ ಸಂಚರಿ ಸುವ ಖಾಸಗಿ ಬಸ್‌ನಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಸುಮಾರು 7ರಿಂದ ಸಂಜೆ ಸುಮಾರು 7 ಗಂಟೆಯವರೆಗೆ ಕೆಲಸ ಮಾಡುವ ಅನಿತಾ ಅವರು ಈ ವೃತ್ತಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.
ಸಣ್ಣವಳಿರುವಾಗಲೇ ಕುಟುಂಬಿಕರು ಮದುವೆ ಮಾಡಿಸಿದ್ದರು. ಹಾಗಾಗಿ ವಿದ್ಯಾ ಭ್ಯಾಸ ಮೊಟಕುಗೊಳಿಸಬೇಕಾಯಿತು. ತಾಯಿಯಾದ ಮೇಲೆ ಮತ್ತೆ ವಿದ್ಯಾಭ್ಯಾಸ ಮುಂದುವರಿಸಿದೆ. ದ್ವಿತೀಯ ಪಿಯುಸಿ ಪೂರ್ಣಗೊಳಿಸಿದೆ. ಪೊಲೀಸ್ ಆಗಬೇಕೆಂಬ ಆಸೆ ಇತ್ತು. ಆದರೆ ಸಿಜೇರಿಯನ್ ಆದ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಮಗಳಿಗೆ ಮೂರು ವರ್ಷ ಆಗಿರುವಾಗ ಪತಿ ಅಪಘಾತದಲ್ಲಿ ಮೃತಪಟ್ಟರು. ನಾನು ಚಿಕ್ಕವಳಿರುವಾಗಲೇ ತಂದೆ ತೀರಿ ಕೊಂಡಿದ್ದರು. ಉದ್ಯೋಗ ಅರಸುತ್ತಾ ಕುಂದಾಪುರಕ್ಕೆ ಬಂದಿದ್ದೆ. ಅಲ್ಲಿನ ಖಾಸಗಿ ಬಸ್ ಒಂದರ ಮಾಲಕರು ಕುಂದಾಪುರ- ಕೊಲ್ಲೂರು, ಉಡುಪಿ-ಕೊಲ್ಲೂರು ಮತ್ತು ಉಡುಪಿ-ಮಂಗಳೂರು ಮಾರ್ಗದಲ್ಲಿ ನಿರ್ವಾಹಕಿಯ ಕೆಲಸ ನೀಡಿದರು. ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಊರಿಗೆ ವಾಪಸಾದೆ. ಲಾಕ್‌ಡೌನ್ ಮುಗಿದ ಅನಂತರ ಮಂಗಳೂರಿಗೆ ಬಂದು ಮತ್ತೆ ಬಸ್ ಕಂಡಕ್ಟರ್ ಆದೆ. ಸ್ವಲ್ಪ ಸಮಯ ಸೆಕ್ಯೂರಿಟಿ ಗಾರ್ಡ್ ಆಗಿಯೂ ಕೆಲಸ ಮಾಡಿದೆ. ಪ್ರಸ್ತುತ ಮಂಗಳೂರು-ಕಾರ್ಕಳ ನಡುವೆ ಸಂಚರಿಸುವ ಖಾಸಗಿ ಬಸ್ ಒಂದರಲ್ಲಿ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಗಳು ಮೂರನೇ ತರಗತಿಯಲ್ಲಿದ್ದಾಳೆ. ಸಹೋದರ ಪಿಯುಸಿ ಮುಗಿಸಿದ್ದಾನೆ. ಇತ್ತೀಚೆಗೆ ನನ್ನ ಅಮ್ಮ ಕೂಡ ಮೃತಪಟ್ಟಿದ್ದಾಳೆ. ನಮ್ಮನ್ನು ದೊಡ್ಡಮ್ಮ, ದೊಡ್ಡಪ್ಪ ನೋಡಿಕೊಳ್ಳುತ್ತಿದ್ದಾರೆ. ನನಗೀಗ 27 ವರ್ಷ ವಯಸ್ಸು. ನನ್ನ ಮಗಳನ್ನಾದರೂ ಪೊಲೀಸ್ ಮಾಡಬೇಕೆಂಬ ಆಸೆ ಇದೆ ಎನ್ನುತ್ತಾರೆ ಅನಿತಾ. ಕರಾವಳಿಯಲ್ಲಿ ಪ್ರೋತ್ಸಾಹ
ಒಂದೇ ಬಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸಹಿತ ಒಟ್ಟು 6 ವರ್ಷಗಳಿಂದ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಮೂರು ತಿಂಗಳುಗಳಿಂದ ಮಂಗಳೂರು- ಕಾರ್ಕಳ ಸಂಚರಿಸುವ ಖಾಸಗಿ ಬಸ್‌ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದೇನೆ. ಉಡುಪಿ, ಕುಂದಾಪುರ, ಮಂಗಳೂರು, ಕಾರ್ಕಳ ಭಾಗದಲ್ಲಿ ನನಗೆ ಹಲವಾರು ಮಂದಿ ಪ್ರೋತ್ಸಾಹದ ಮಾತುಗನ್ನಾಡಿ ಆತ್ಮವಿಶ್ವಾಸ ಮೂಡಿಸಿದ್ದಾರೆ ಎನ್ನುವ ಬಗ್ಗೆ ಅನಿತಾ ಅಭಿಮಾನದಿಂದ ಹೇಳುತ್ತಾರೆ.
Related Articles
ಬಸ್ ನಿರ್ವಾಹಕಿ ಕೆಲಸ ನನಗೆ ಸಮಾಧಾನ ತಂದಿದೆ. ಪ್ರಯಾಣಿಕರನ್ನು ನೋಡುತ್ತಾ ಅವರ ನಡುವೆ ಕೆಲಸ ಮಾಡುತ್ತಾ ನನ್ನ ಬದುಕಿನ ನೋವನ್ನು ಮರೆಯುತ್ತೇನೆ. ನನ್ನ ಕುಟುಂಬಕ್ಕೆ ನನ್ನಿಂದಾಗುವ ಆರ್ಥಿಕ ಬೆಂಬಲ ನೀಡುತ್ತೇನೆ. ಮಹಿಳೆಯರು ಯಾವುದೇ ಕೆಲಸವನ್ನು ಮಾಡಲು ಸಮರ್ಥರು. ಬಸ್ ನಿರ್ವಾಹಕರಾಗಿಯೂ ಕೆಲಸ ಮಾಡಬಹುದು. ಈ ಕೆಲಸ ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದೆ.
Advertisement
-ಅನಿತಾ, ಖಾಸಗಿ ಬಸ್ ನಿರ್ವಾಹಕಿ