Advertisement
ಬಳ್ಳಾರಿ ಮೂಲದ ಮುತ್ತಯ್ಯ ಸ್ವಾಮಿ (45) ಮೃತಪಟ್ಟಿರುವ ಬಿಎಂಟಿಸಿ ನಿರ್ವಾಹಕ. ಸುಮನಹಳ್ಳಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇದಾಗಿದ್ದು, ಚಾಲಕ ಪ್ರಕಾಶ್ ಗುರುವಾರ ರಾತ್ರಿ 10.30ಕ್ಕೆ ಕರ್ತವ್ಯ ಮುಗಿಸಿ ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಿದ್ದರು. ಬಳಿಕ ಅವರು ನಿಲ್ದಾಣದಲ್ಲಿರುವ ರೂಂಗೆ ಹೋಗಿ ಮಲಗಿದ್ದರು. ಇತ್ತ ನಿರ್ವಾಹಕ ಮುತ್ತಯ್ಯ ಸ್ವಾಮಿ ಬಸ್‌ನಲ್ಲೇ ಮಲಗಿದ್ದರು. ಶುಕ್ರವಾರ ಮುಂಜಾನೆ 4.45ಕ್ಕೆ ಏಕಾಏಕಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ ಇಡೀ ಬಸ್‌ಗೆ ಆವರಿಸಿಕೊಂಡಿತ್ತು. ಪರಿಣಾಮ ಬಸ್‌ನಲ್ಲಿ ನಿದ್ದೆಗೆ ಜಾರಿದ್ದ ಮುತ್ತಯ್ಯ ಸ್ವಾಮಿ ಬೆಂಕಿಗೆ ಸಿಲುಕಿ ಸಜೀವ ದಹನವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
Related Articles
Advertisement
ರೂಟ್ ಬದಲಾವಣೆ: ಶುಕ್ರವಾರ ಬೆಳಗ್ಗೆ 5 ಗಂಟೆಗೆ ಲಿಂಗಧೀರನಹಳ್ಳಿಯಿಂದ ಈ ಬಸ್ ಕೆ. ಆರ್.ಮಾರ್ಕೆಟ್‌ಗೆ ತೆರಳಬೇಕಿತ್ತು. ಇಷ್ಟು ದಿನ ಮೆಜೆಸ್ಟಿಕ್‌ಗೆ ತೆರಳುತ್ತಿದ್ದ ಈ ಬಸ್ಸು ಶುಕ್ರವಾರದ ಮಟ್ಟಿಗೆ ಮಾರ್ಕೆಟ್‌ಗೆ ರೂಟ್ ಬದಲಿಸಲಾಗಿತ್ತು ಎಂದು ತಿಳಿದು ಬಂದಿದೆ.
ಬಸ್ ಸುಟ್ಟ ದೃಶ್ಯ ಸಿಸಿ : ಕ್ಯಾಮೆರಾದಲ್ಲಿ ಸೆರೆ ಪ್ರಕರಣದ ನಡೆದ ಕೆಲ ಹೊತ್ತಿನ ಬಳಿಕ ಅನುಮಾನದ ಮೇರೆಗೆ ಪೊಲೀಸರು ಸ್ಥಳೀಯ ಕ್ಯಾಮೆರಾ ಪರಿಶೀಲಿಸಿದ್ದಾರೆ. ಅದರಲ್ಲಿ ಬಸ್ ಏಕಾಏಕಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿರುವ ದೃಶ್ಯ ಕಂಡು ಬಂದಿದೆ. ಯಾರೂ ಬಸ್ ಬಳಿ ಓಡಾಡುವುದಾಲಿ, ಬಸ್‌ಗೆ ಬೆಂಕಿ ಹಚ್ಚುವುದಾಗಲಿ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಡಕ್ಟರ್ ಮುತ್ತಯ್ಯ ಸ್ವಾಮಿಗೆ ಬೆಂಕಿ ಬೀಳುವ ಮುನ್ನ ಪ್ರಜ್ಞೆ ತಪ್ಪಿರುವ ಸಾಧ್ಯತೆ : ನಿರ್ವಾಹಕ ಮುತ್ತಯ್ಯ ಸ್ವಾಮಿ ಚಾಲಕನ ಸೀಟಿನ ಪಕ್ಕದಲ್ಲಿರುವ ಎಂಜಿನ್ ಸಮೀಪ ಮಲಗಿದ್ದ. ಆತ ಸಿಗರೇಟ್ ಸೇದಿ ಅಲ್ಲೇ ಎಸೆದಿರುವ ಸಾಧ್ಯತೆಗಳಿವೆ. ಸೊಳ್ಳೆ ಬತ್ತಿ ಉರಿಸಿ ಅದರಿಂದ ಅಲ್ಲಿರುವ ವೈಯರ್‌ಗಳಿಗೆ ತಾಗಿ ಬೆಂಕಿ ಉಂಟಾಗಿರಬಹದು. ವೈಯರುಗಳು ಬೆಂಕಿಗೆ ಸುಟ್ಟು ಹೋದ ಬಳಿಕ ಹೊರ ಬರುವ ಹೊಗೆಯು ಹೆಚ್ಚಿನ ಪ್ರಮಾಣದಲ್ಲಿ ದೇಹದೊಳಗೆ ಸೇರಿದರೆ ಕೆಲವೊಮ್ಮೆ ವ್ಯಕ್ತಿ ಪ್ರಜ್ಞೆತಪ್ಪಿಸುವ ಉದಾಹರಣೆಗಳಿವೆ. ಇವರೂ ಪ್ರಜ್ಞೆ ಕಳೆದುಕೊಂಡು ಬಿದ್ದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ನಿರ್ವಾಹಕನ ಪತ್ನಿಗೆ ನೌಕರಿ ಆದೇಶ :
ಬೆಂಗಳೂರು: ಲಿಂಗದೀರನಹಳ್ಳಿ ಬಸ್ ಬೆಂಕಿ ಪ್ರಕರಣದಲ್ಲಿ ಮೃತಪಟ್ಟ ಬಿಎಂಟಿಸಿ ನಿರ್ವಾಹಕ ಮುತ್ತಯ್ಯ ಅವರ ಕುಟುಂಬದ ನೆರವಿಗೆ ಧಾವಿಸಿರುವ ಸಂಸ್ಥೆ, ಮುತ್ತಯ್ಯ ಅವರ ಪತ್ನಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವುದರ ಜತೆಗೆ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಸಂಸ್ಥೆಯ ಸಿಬ್ಬಂದಿ ಮೃತಪಟ್ಟ ದಿನವೇ ಆ ಕುಟುಂಬದ ಅವಲಂಬಿತರೊಬ್ಬರಿಗೆ ಅನುಕಂಪದ ಆಧಾರದಲ್ಲಿ ನೌಕರಿ ಆದೇಶ ನೀಡುತ್ತಿರುವುದು ಇದೇ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದ್ದು, ಮುತ್ತಯ್ಯ ಅವರ ಪತ್ನಿ ಮಂಜುಳಾ ಅವರಿಗೆ ಉದ್ಯೋಗ ನೀಡಲಾಗುತ್ತಿದೆ. ಮೃತರಿಗೆ 14 ವರ್ಷದ ಮಗಳು ಇದ್ದಾಳೆ. ಇದಲ್ಲದೆ 3 ಲಕ್ಷ ರೂ. ಇಲಾಖಾ ಗುಂಪು ವಿಮಾ ಪರಿಹಾರ ಮೊತ್ತದ ಹಣ ಮತ್ತು 15 ಸಾವಿರ ರೂ. ಎಕ್ಸ್ ಗ್ರೇಷಿಯಾ ನೀಡಲಾಗುತ್ತಿದೆ.
ಸಿಬ್ಬಂದಿ ಬಸ್‌ನಲ್ಲಿ ಬೆಂಕಿಗಾಹುತಿಯಾಗಿದ್ದು ಇದೇ ಮೊದಲ ಪ್ರಕರಣವಾಗಿದ್ದು, ಈ ರೀತಿಯ ಅವಘಡಗಳನ್ನು ನಿಯಂತ್ರಿಸಲು ಹಾಗೂ ಸಂಸ್ಥೆಯ ಚಾಲನಾ ಸಿಬ್ಬಂದಿ ಸುರಕ್ಷತೆ ಮತ್ತಷ್ಟು ಹೆಚ್ಚಿಸಲು, ಎಲ್ಲ ರಾತ್ರಿ ತಂಗುವ ಬಸ್‌ಗಳ ಸ್ಥಳಗಳನ್ನು ಸಮೀಕ್ಷೆ ನಡೆಸಿ, ಪರಿಶೀಲನೆ ಮಾಡಿ ಅಗತ್ಯ ಸುಧಾರಣಾ ಕ್ರಮಗಳ ಕುರಿತು ಮಾರ್ಗಸೂìಚಿ ಹೊರಡಿಸಲಾಗುವುದು. ಅಲ್ಲದೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.