Advertisement
ಬಸ್ಸು ಎಲ್ಲಿ ತಲುಪಬೇಕು ಎಂಬುದಷ್ಟೇ ಚಾಲಕನ ನಿರ್ಧಾರ. ಎಲ್ಲೆಲ್ಲಿ ನಿಲ್ಲಬೇಕು? ಯಾವಾಗ ಬಸ್ಸನ್ನು ಹೊರಡಿಸಬೇಕು?? ಎಂಬುದೆಲ್ಲ ಕಂಡಕ್ಟರ್‌ಗೆ ಬಿಟ್ಟ ವಿಷಯ. ಚಾಲಕ ಬಸ್ಸನ್ನು ನಡೆಸುವನಾದರೂ ಕಂಡಕ್ಟರ್ ಬಾಯಿಂದ ರೈಟ್… ರೈಟ್… ಧ್ವನಿಯೋ ಅಥವಾ ವಿಶಿಲ್ ಶಬ್ದವೋ ಬರದೇ ಆತ ಒಂದಿಂಚು ಅಲುಗಾಡಲಾರ.
Related Articles
Advertisement
ಎಷ್ಟೋ ಭಾರಿ ಜಗಳ ಪರಿಹಾರ ಮಾಡಲು ಹೋಗಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗುವುದು ಕೂಡಾ ಇದೆ. ಟಿಕೆಟ್ ತೆಗೆದುಕೊಳ್ಳದೇ ಕಂಡಕ್ಟರ್ ಎದುರು ಬುದ್ದಿವಂತಿಕೆ ಪ್ರದರ್ಶನಕ್ಕಿಡುವ ಜನರೂ ಕೂಡಾ ಇದ್ದಾರೆ. ಬಸ್ಸಿನಲ್ಲಿ ವಿಶಾಲ ಜಾಗವಿದ್ದರೆ ಅಲ್ಲಿ ಕಂಡಕ್ಟರದೇ ಕಾರು ಬಾರು.ಆದರೆ ಬಾಗಿಲ ಮೆಟ್ಟಿಲಿನಲ್ಲೂ ಜಾಗ ಬಿಡದೇ ಜನರು ತುಂಬಿಕೊಂಡಾಗ ಕಂಡಕ್ಟರ್ ಪಡುವ ಪಾಡು ಅಷ್ಟಿಷ್ಟಲ್ಲ. ಲೇಖಕರೊಬ್ಬರು ಹೇಳುವಂತೆ “ರಶ್ಶಿನ ಬಸ್ಸಿನಲ್ಲಿ ಒಳಗೆ ಹೋಗುವಾಗ ಒಲೆಗೆ, ಹೊರಗೆ ಬರುವಾಗ ಹೆರಿಗೆ ನೆನಪಾಗುತ್ತದೆ “ಅಂತಹ ಇಕ್ಕಟ್ಟಿನಲ್ಲೂ ಜಾಗ ಮಾಡಿಕೊಂಡು ಹೋಗಿ ಎಲ್ಲರಿಗೂ ಟಿಕೆಟ್ ಹರಿಯುವಷ್ಟರಲ್ಲಿ ಅವ ರ ಪೂರ್ತಿ ಮುಖದ ಕಳೆ ಮಾಸಿ ಹೋಗಿರುತ್ತದೆ.ಆದರೂ ಸಾಧ್ಯವಾದಷ್ಟು ತಾಳ್ಮೆಯಿಂದ ವರ್ತಿಸುತ್ತಾರೆ. ವ್ಯವಹರಿಸುತ್ತಾರೆ.
ಕಂಡಕ್ಟರ್ ಎಂದರೆ ಕೇವಲ ಟಿಕೆಟ್ ಹರಿದು ಕೊಡುವುದಕ್ಕೆ ಸೀಮಿತವಾದವನಲ್ಲ. ಅವರಲ್ಲಿ ಜವಾಬ್ದಾರಿ ಇರುತ್ತದೆ.ನಮ್ಮ ಒಂದು ಸಣ್ಣ ನಿರ್ಲಕ್ಷ್ಯ ಅವರ ಸಂಬಳಕ್ಕೋ,ವೃತ್ತಿಗೊ ಕತ್ತರಿ ಹಾಕಬಹುದು.ಇಲ್ಲ ನಮ್ಮ ಜೀವವನ್ನೇ ಬಲಿ ತೆಗೆಯಬಹುದು. ಬೆಳಿಗ್ಗೆಯಿಂದ ಸಂಜೆಯವರೆಗೆ ಕುಳಿತು ಕೆಲಸ ಮಾಡುವ ಚಾಲಕನಷ್ಟೇ ಭಾಧೆ ಜನರನ್ನು ಸುಧಾರಿಸುವ, ನೂಕು ನುಗ್ಗಲಿನಲ್ಲಿ ಹಿಂಡಿ ಹಿಪ್ಪೆಕಾಯಿ ಆಗುವ ಕಂಡಕ್ಟರ್‌ಗೂ ಇರುತ್ತದೆ.
ಸ್ವಲ್ಪ ಜನ ಜಂಗುಳಿ ಎಂದರೆ ದೂರ ಸರಿಯುವ ನಾವು ತನ್ನ ವೃತ್ತಿಯ ಮುಕ್ಕಾಲು ಭಾಗವನ್ನು ಈ ಜನರ ದಂಡಿನ ಮಧ್ಯೆಯೇ ನೂಕುವ ಕಂಡಕ್ಟರ್ ವೃತ್ತಿ ಎಷ್ಟು ಕಷ್ಟದ್ದಾಗಿರಬಹುದು ಎಂದು ಅರ್ಥ ಮಾಡಿಕೊಳ್ಳಬೇಕು. ಬೆವರು ವಾಸನೆಗೆ ಹೇಸಿಗೆ ಪಡುವ ಹಾಗಿಲ್ಲ. ಸಾರಾಯಿ ವಾಸನೆ ಎಂದು ಪ್ರಯಾಣಿಕರ ಹತ್ತಿರ ಹೋಗದೆ ಇರುವ ಹಾಗಿಲ್ಲ, ಯಾರೋ ಪ್ರಯಾಣಿಕರು ಬೈದರೆಂದು ಕೋಪಿಸಿ ಕೂರುವ ಹಾಗಿಲ್ಲ. ಆತ ಎಲ್ಲವನ್ನೂ ಸಹಿಸಿಕೊಳ್ಳಬಲ್ಲ.
ಇದು ಯಾವುದೋ ಒಬ್ಬ ಕಂಡಕ್ಟರ್ ಕಥೆಯಲ್ಲ. ಕಂಡಕ್ಟರ್ ಬಾಗಿಲ ಬಳಿ ನಿಲ್ಲಬೇಡಿ ಮುಂದೆ ನಡೆಯಿರಿ ಎಂದಾಗ ಹಿಂಸೆ ಎನಿಸುತ್ತದೆ. ಟಿಕೆಟ್ ಕೇಳಿ ಪಡೆದುಕೊಳ್ಳಿ ಎಂದಾಗ ಅಸಡ್ಡೆ ಮೂಡುತ್ತದೆ. ಪಾಸ್ ಕೈಯಲ್ಲಿ ಹಿಡಿದುಕೊಳ್ಳಿ ಎಂದಾಗ ಕಿರಿಕಿರಿಯಾಗುತ್ತದೆ. ಈ ಬಸ್ಸಲ್ಲಿ ಜಾಗವಿಲ್ಲ ಇನ್ನೊಂದು ಬಸ್ಸಿಗೆ ಬನ್ನಿ ಎಂದರೆ ಮುಖ ಗಂಟಿಕ್ಕುತ್ತದೆ.ಆದರೆ = ಇದೆಲ್ಲ ಮಾತುಗಳ ಹಿಂದಿನ ಉದ್ದೇಶವನ್ನು ಮಾತ್ರ ನಾವ್ಯಾರು ಚಿಂತಿಸುವುದೇ ಇಲ್ಲ.ನಮಗೆ ಬೇಕಾಗಿಯೂ ಇಲ್ಲ.ಇನ್ನಾದರೂ ಕಂಡಕ್ಟರ್ ಕಷ್ಟವನ್ನು ಅರ್ಥ ಮಾಡಿಕೊಳ್ಳೋಣ.ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಕರಿಸೋಣ.
-ಶಿಲ್ಪಾ ಪೂಜಾರಿ
ವರ್ತೆಹಕ್ಕಲು