ಚಿಕ್ಕಬಳ್ಳಾಪುರ: ಭಾನುವಾರ ರಜೆ ಇದ್ದರೂ ಸಹ ಹೊಟ್ಟೆ ಪಾಡಿಗಾಗಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ಸಂಜೆ ಮನೆಗೆ ಆಟೋದಲ್ಲಿ ವಾಪಸ್ಸು ತೆರಳುತ್ತಿದ್ದ ವೇಳೆ ಆಟೋಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿರುವ ದಾರುಣಾ ಘಟನೆ ಜಿಲ್ಲೆಯ ಗೌರಿಬಿದನೂರು ಸಮೀಪ ನಡೆದಿದೆ.
ಮೃತ ಕೂಲಿ ಕಾರ್ಮಿಕರನ್ನು ಗೌರಮ್ಮ (೨೮) ಹಾಗೂ ಯಶೋಧಮ್ಮ (೫೦} ಎಂದು ಗುರುತಿಸಲಾಗಿದೆ.
ಸೋಮವಾರ ಹಬ್ಬದ ಪ್ರಯುಕ್ತ ಈ ಮಹಿಳೆಯರು ಭಾನುವಾರ ಸಹ ಗಾರ್ಮೆಂಟ್ಸ್ ಗೆ ಹೋಗಿ ಗೌರಿಬಿದನೂರಿನಿಂದ ಹೊಸೂರು ಕಡೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಕೋಟಾಲದಿನ್ನೆ ಕಡೆಯಿಂದ ಗೌರಿಬಿದನೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ರಭಸವಾಗಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟರೆ, ಆರೇಳು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.
ತಕ್ಷಣವೇ ಗಾಯಳುಗಳನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ಮೃತ ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತಕ್ಕೆ ಖಾಸಗಿ ಬಸ್ ಚಾಲಕನ ಅತಿವೇಗ ಹಾಗೂ ಅಜಾಗರೂಕತೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದೆ.