Advertisement

ಬಸ್‌ -ಕಾರು ಢಿಕ್ಕಿ: ಮಹಿಳೆಯರಿಬ್ಬರ ಸಾವು

11:02 AM Apr 27, 2019 | Team Udayavani |

ಬಂಟ್ವಾಳ: ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ನೆಹರೂ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ ಮತ್ತು ಮಾರುತಿ ಸೆಲೆರಿಯೋ ಕಾರು ಮುಖಾಮುಖೀ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಎಕ್ಕೂರು ನಿವಾಸಿ ಕೋಚಣ್ಣ ಮಲ್ಲಿ ಅವರ ಪತ್ನಿ ರುಕ್ಮಿಣಿ ಕೆ. ಮಲ್ಲಿ (69) ಮತ್ತು ಮಂಗಳೂರು ಜಪ್ಪುಗುಡ್ಡೆ ತುಕಾರಾಮ ಶೆಟ್ಟಿ ಅವರ ಪತ್ನಿ ಸರೋಜಿನಿ ಟಿ. ಶೆಟ್ಟಿ (63) ಮೃತಪಟ್ಟವರು. ಕಾರು ಕೋಚಣ್ಣ ಮಲ್ಲಿ ಅವರಿಗೆ ಸೇರಿದ್ದಾಗಿದೆ. ಸರೋಜಿನಿ ಮತ್ತು ರುಕ್ಮಿಣಿ ಅವರ ತಾಯಂದಿರು ಅಕ್ಕ-ತಂಗಿಯರು. ಗಂಭೀರ ಗಾಯಗೊಂಡಿರುವ ಮೃತರ ನಿಕಟ ಸಂಬಂಧಿ ಶಕ್ತಿನಗರ ನಿವಾಸಿ ಅನುಷಾ (40) ಹಾಗೂ ಕಾರು ಚಾಲಕ ಸುಳ್ಯ ಕನಕಮಜಲು ನಿವಾಸಿ ಉಮೇಶ್‌ ಪೂಜಾರಿ (36) ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಗೃಹ ಪ್ರವೇಶಕ್ಕೆ ತೆರಳುತ್ತಿದ್ದರು
ಶಂಭೂರು ಗ್ರಾಮದ ಸಣ್ಣಕುಕ್ಕಿನಲ್ಲಿ ನಡೆಯಲಿದ್ದ ಸಂಬಂಧಿಗಳ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ರುಕ್ಮಿಣಿ ಕಾರಿನ ಮುಂಬದಿ ಸೀಟಲ್ಲಿದ್ದು, ಢಿಕ್ಕಿಯ ರಭಸಕ್ಕೆ ಮುಂದಕ್ಕೆ ಎಸೆಯಲ್ಪಟ್ಟು ಕಾರಿನ ಮುಂಬದಿ ಗಾಜು ಒಡೆದು ಬಸ್ಸಿನ ಎಂಜಿನ್‌ಗೆ ಅವರ ತಲೆ ಬಡಿದಿತ್ತು. ಬಸ್ಸಿನ ಮುಂಬದಿ ತಗಡುಗಳನ್ನು ಕತ್ತರಿಸಿ ಕಾರನ್ನು ತೆರವು ಮಾಡಿದ ಬಳಿಕ ಅವರ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

ಹಿಂಭಾಗದ ಸೀಟ್‌ನಲ್ಲಿದ್ದ ಸರೋಜಿನಿ ಅವರ ಕುಟುಂಬ ಪ್ರಸ್ತುತ ತಮಿಳುನಾಡಿನಲ್ಲಿ ವಾಸ್ತವ್ಯವಿದ್ದು, ಶುಭ ಕಾರ್ಯ ನಿಮಿತ್ತ ಊರಿಗೆ ಬಂದಿದ್ದರು. ಸರೋಜಿನಿ ಶೆಟ್ಟಿ ಅವರ ಮನೆಯಲ್ಲಿ ಗುರುವಾರ ರಾತ್ರಿ ದೈವದ ಕಾರ್ಯ ಇದ್ದು, ತಡರಾತ್ರಿ ವರೆಗೆ ಕಾರ್ಯಕ್ರಮ ನಡೆದಿತ್ತು. ಕಾರು ಚಾಲಕನೂ ಅವರ ಮನೆಯಲ್ಲೇ ಇದ್ದು, ನಿದ್ದೆಗೆಟ್ಟದ್ದರಿಂದ ಕಾರು ಚಲಾಯಿಸುವ ವೇಳೆ ತೂಕಡಿಕೆ ಬಂದಿರುವುದು ಅಪಘಾತಕ್ಕೆ ಕಾರಣ ಇರಬಹುದು ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಓವರ್‌ಟೇಕ್‌ ಕಾರಣ
ಅತಿ ವೇಗದಲ್ಲಿದ್ದ ಕಾರು ಇನ್ನೊಂದು ವಾಹನವನ್ನು ಹಿಂದಿಕ್ಕಿ ಹೋಗುವ ಭರದಲ್ಲಿ ಸರಕಾರಿ ಬಸ್ಸಿನ ಮುಂಬದಿಗೆ ಗುದ್ದಿ ಅದರ ಎಂಜಿನ್‌ನ ಒಳಗೆ ಸೇರಿತ್ತು. ಅಪಘಾತ ಸಂಭವಿಸಿದ ತತ್‌ಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಕಾರು ಚಾಲಕ ಮತ್ತು ಗಾಯಾಳು ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು. ಮೆಲ್ಕಾರ್‌ ಸಂಚಾರ ಠಾಣೆ ಎಎಸ್‌ಐ ಕುಟ್ಟಿ ಎಂ.ಕೆ. ಸ್ಥಳಕ್ಕೆ ಧಾವಿಸಿದ್ದರು. ಪಿಎಸ್‌ಐ ಮಂಜುನಾಥ್‌ ಅವರು ಪ್ರಕ ರಣ ದಾಖ ಲಿ ಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next