ಬಸ್ಸಿನಲ್ಲಿ ಸಂಚರಿಸುವುದು ಒಂದು ವಿಶಿಷ್ಟ ಅನುಭವ. ಬಸ್ ಪ್ರಯಾಣದಲ್ಲಿ ಹಲವಾರು ವ್ಯಕ್ತಿಗಳ ಹಾಗೂ ವ್ಯಕ್ತಿತ್ವಗಳ ಪರಿಚಯ ಸಾಧ್ಯ. ನಿತ್ಯ ಸಂಚರಿಸುವವರಿಗೆ ಆಯಾ ಬಸ್‌ನ ಕಂಡಕ್ಟರ್ ಹಾಗೂ ಡ್ರೈವರ್‌ಗಳ ಒಡನಾಟ ಸಹಜವಾಗಿ ಇರುತ್ತದೆ. ಅದರಲ್ಲೂ ಖಾಸಗಿ ಬಸ್‌ಗಳು ದಿನನಿತ್ಯ ಒಂದಿಲ್ಲೊಂದು ಪ್ರಸಂಗಗಳಿಗೆ ವೇದಿಕೆ !
ನಮ್ಮ ಬಸ್ ನಿರ್ವಾಹಕರಿಗೆ ಒಂದು ವಿಶಿಷ್ಟ ಭಾಷೆಯಿದೆ! ಅದು ಹೊಗಳಿಕೆಯೂ ಆಗಿರಬಹುದು ಅಥವಾ ಬೈಗುಳವೇ ಆಗಿರ ಬಹುದು. ಇವರ ಅದ್ಭುತ ಭಾಷಾ ಪ್ರಯೋಗಕ್ಕೆ ಬಲಿಪಶುಗಳೆಂದರೆ ಏಜೆಂಟ್‌ಗಳು ಮತ್ತು ಬೇರೆ ಬಸ್‌ನ ಡ್ರೈವರ್‌ಗಳು. ಅವರನ್ನು ಹೊರತು ಪಡಿಸಿದರೆ ಕಾಲೇಜು ವಿದ್ಯಾರ್ಥಿಗಳು. ನಿರ್ವಾಹಕರಿಗೆ ಬಹುಶಃ ಅವರ ಕೆಲಸದ ಒತ್ತಡದಿಂದಲೋ ಏನೋ ಕೊಂಚ ತಾಳ್ಮೆ ಕಡಿಮೆಯೇ! ಬಸ್ಸಿಗೆ ಹತ್ತುವಾಗ ನಿಧಾನವಾದರೆ ತಪ್ಪು, ಇಳಿಯುವಾಗ ನಿಧಾನವಾದರಂತೂ ಹೇಳುವುದೇ ಬೇಡ, ನಿರ್ವಾಹಕನ ಬಾಯಿಗೆ ಸಿಲುಕಿದ ಚಕ್ಕುಲಿಯ ಪರಿಸ್ಥಿತಿ.
ಇನ್ನೊಂದೆಡೆ ನಿರ್ವಾಹಕನ ಉರಿಯುವ ಬೆಂಕಿಗೆ ತುಪ್ಪ ಸುರಿಯಲೆಂದೇ ಕೆಲವು ಕಾಲೇಜು ವಿದ್ಯಾರ್ಥಿಗಳು ಬರುವುದುಂಟು. ಇವರ ಮೊದಲ ಕೆಲಸ ಬಸ್ಸಿನಲ್ಲಿ ಎಷ್ಟೇ ಸೀಟುಗಳು ಖಾಲಿ ಇರಲಿ, ಇವರಂತೂ ಮೇಲೆ ಹತ್ತುವ ಜಾಯಮಾನದವರಲ್ಲ. ಬಸ್ಸಿನಲ್ಲಿ ನೇತಾಡಿಕೊಂಡು ಬರಲೆಂದೇ ಕೆಲವು ಹುಡುಗರ ಗುಂಪುಗಳು ಸಿದ್ಧವಾಗಿರುತ್ತವೆ. ಬಸ್ಸಿನೊಳಗೆ ಜಾಗವಿದ್ದರೂ ಇವರು ಮೆಟ್ಟಿಲಿನಿಂದ ಮೇಲೆರದೆ, ಕಂಡಕ್ಟರ್‌ನ ಬೈಗುಳಗಳಿಗೂ ಕಿವಿ ಕೊಡದೆ ನೇತಾಡುವುದನ್ನೇ ಹವ್ಯಾಸ ಮಾಡಿಕೊಂಡಿರುತ್ತಾರೆ. ಜೋರಾಗಿ ಮಳೆ ಸುರಿಯುತ್ತಿದ್ದರೂ ಮೆಟ್ಟಿಲಿನಲ್ಲಿ ನೇತಾಡುವ ಹುಮ್ಮಸ್ಸಿಗೇನೂ ಕಡಿಮೆ ಇಲ್ಲ.
ಇನ್ನು ಶಾಲಾ-ಕಾಲೇಜುಗಳಿಗೆ ತೆರಳುವ ಲಲನೆಯರು ಯಾವುದೇ ಹೊರಜಗತ್ತಿಗೆ ಕಿವಿಗೊಡದೆ, ನಿರ್ವಾಹಕ ಟಿಕೆಟ್ ಕೇಳುವುದರ ಪರಿವೆಯೂ ಇಲ್ಲದೇ ಲೋಕಾಭಿರಾಮ ಮಾತನಾಡುವುದರಲ್ಲಿ ಮಗ್ನರಾಗಿರುತ್ತಾರೆ. ಕೆಲವರು ಕೂರಲು ಜಾಗವಿಲ್ಲದೇ ಇದ್ದರೂ ಕಷ್ಟಪಟ್ಟು ನಿಂತುಕೊಂಡು ಮೊಬೈಲ್ ಒತ್ತುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಕೆಲವು ಹುಡುಗಿಯರು ಆಕಾಶ ತಲೆಯ ಮೇಲೇ ಬಿದ್ದವರಂತೆ ಕಿಟಕಿಯ ಆಚೆ ಮರಗಳ ಸಾಲುಗಳನ್ನು ಎಣಿಸುತ್ತ ಈ ಲೋಕದಿಂದ ಕಳೆದುಹೋಗಿರುತ್ತಾರೆ.
ಬಸ್‌ನಲ್ಲಿ ಸ್ವಲ್ಪ ರಶ್ ಆದ ಕೂಡಲೇ ಬಸ್ ನಿರ್ವಾಹಕನ “ದುಂಬು ಪೋಲೆ, ಪಿರ ಪೋಲೆ’ ಗಾನವೂ ಆರಂಭವಾಗುತ್ತದೆ. ದುಂಬು-ಪಿರ ಹೋಗಲು ಜಾಗವೇ ಇಲ್ಲದಷ್ಟು ಜನಸಂದಣಿ ಇದ್ದರೂ ಹೋಗಲೇಬೇಕೆಂದು ಕಂಡಕ್ಟರ್ ಬಸ್ಸನ್ನು ಬಡಿಬಡಿದು ಬಡಬಡಾಯಿಸುತ್ತಾನೆ. ಮುಂದೆ ಹಿಂದೆ ಹೋಗುವಾಗ ಬಸ್ಸಿನಿಂದ ಇಳಿಯುವವರ ಪರಿಸ್ಥಿತಿಯಂತೂ ಹೇಳತೀರದು. ಸೀಟಿನಲ್ಲಿ ಕುಳಿತಿರುವವರು ತಮ್ಮ ಬ್ಯಾಗ್‌ಗಳ ಬೆಟ್ಟದಿಂದ ಎದ್ದು ಬಂದು ನಿಂತುಕೊಂಡವರ ಕೂದಲೆಳೆದು, ಕಾಲುತುಳಿದು ಇಳಿಯುವ ಹೊತ್ತಿಗೆ ಬಸ್ ಮುಂದಿನ ಸ್ಟಾಪ್‌ನಲ್ಲಿ ಇರುತ್ತದೆ. ಆ ಸಂದರ್ಭದಲ್ಲಿ ಬೊಬ್ಬೆ ಹೊಡೆದರೆ ಕಂಡಕ್ಟರ್‌ನ ಬೈಗುಳದ ಅಭಿಷೇಕ ಸಿದ್ಧವಾಗಿರುತ್ತದೆ.
ನಮ್ಮೂರ ಹಳ್ಳಿಯ ಬಸ್ಸುಗಳು “ಡಕೋಟಾ ಎಕ್ಸ್‌ಪ್ರೆಸ್’ ಎಂದೇ ಖ್ಯಾತಿ. ನಿಂತ ಜನರು ಆಧಾರಕ್ಕೆಂದು ಹಿಡಿಯುವ ಕಬ್ಬಿಣದ ರಾಡ್‌ಗಳು ಕೈಯಲ್ಲೇ ಬಂದರೂ ಆಶ್ಚರ್ಯವೇನಿಲ್ಲ. ಮಳೆಗಾಲದ ಸಮಯದಲ್ಲಂತೂ ಬರೋಬ್ಬರಿ ಶವರ್ ಬಾತ್ ಬಸ್ಸಿನಲ್ಲೇ ಪುಕ್ಕಟ್ಟೆಯಾಗಿ ಆಗಿಬಿಡುತ್ತದೆ. ಮನೋರಂಜನೆಯ ಜೊತೆಗೆ ಒಂದಷ್ಟು ಜೀವನ ಪಾಠಗಳ ಅನುಭವವೂ ಇಲ್ಲಿದೆ.
ದುರ್ಗಾ ಭಟ್ ಬೊಳ್ಳುರೋಡಿ
ಪ್ರಥಮ ಬಿ. ಎ., ಆಳ್ವಾಸ್ ಕಾಲೇಜು, ಮೂಡುಬಿದಿರೆ