Advertisement

ಸುಗಮ ಸಂಚಾರಕ್ಕೆ ಬಸ್‌ ಬೇ

09:21 PM Feb 24, 2022 | Team Udayavani |

ಮಹಾನಗರ: ಸ್ಮಾರ್ಟ್‌ಸಿಟಿಯಾಗಿ ರೂಪು ಗೊಳ್ಳುತ್ತಿರುವ ಮಂಗಳೂರು ನಗರದಲ್ಲಿ ವಾಹನದಟ್ಟಣೆ ನಿಯಂತ್ರಿಸುವ ಮತ್ತು ಸುಗಮ ವಾಹನ ಸಂಚಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸುಮಾರು 1.09 ಕೋಟಿ ರೂ. ವೆಚ್ಚದಲ್ಲಿ ಬಸ್‌ ಬೇ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.

Advertisement

ಬಸ್‌ ಬೇ ನಿರ್ಮಾಣಕ್ಕೆ ಪಾಲಿಕೆ ಈಗಾಗಲೇ ಟೆಂಡರ್‌ ಆಹ್ವಾನಿಸಿದ್ದು, ಈ ತಿಂಗಳಾಂತ್ಯಕ್ಕೆ ಅವಧಿ ಪೂರ್ಣಗೊಳ್ಳಲಿದೆ. ಬಳಿಕ ಕೆಲವೇ ದಿನಗಳಲ್ಲಿ ಕಾಮಗಾರಿಯೂ ಆರಂಭಗೊಳ್ಳಲಿದೆ. ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ಮೊದ ಲನೇ ಹಂತದಲ್ಲಿ ನಗರದ ಬಂಟ್ಸ್‌ಹಾಸ್ಟೆಲ್‌, ಮಲ್ಲಿಕಟ್ಟೆ, ಕೆಪಿಟಿ, ಮೇರಿಹಿಲ್‌, ಕುಲ ಶೇಖರ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಲಾಲ್‌ಬಾಗ್‌ ಪ್ರದೇಶಗಳಲ್ಲಿ ಬಸ್‌ ಬೇ ನಿರ್ಮಾಣಗೊಳ್ಳಲಿದೆ. ಹಂತ ಹಂತವಾಗಿ ಮತ್ತಷ್ಟು ಕಡೆಗಳಲ್ಲಿ ಬಸ್‌ ಬೇ ನಿರ್ಮಾಣದ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ.

ಈಗಾಗಲೇ ನಗರದ ಕೆಲವೊಂದು ಕಡೆಗಳಲ್ಲಿ ಬಸ್‌ ಲೇನ್‌ ಇದ್ದರೂ ಬಸ್‌ಗಳು ಮಾತ್ರ ಲೇನ್‌ ತಪ್ಪುತ್ತಿವೆ. ಬಂಟ್ಸ್‌ಹಾಸ್ಟೆಲ್‌, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬಾವುಟಗುಡ್ಡೆ, ಲಾಲ್‌ಬಾಗ್‌, ನಂತೂರು, ಸಕೀìಟ್‌ ಹೌಸ್‌ ಸಹಿತ ವಿವಿಧ ಕಡೆಗಳಲ್ಲಿ ಬಸ್‌ ಲೇನ್‌ ಈಗಾಗಲೇ ಇದ್ದು, ಅದು ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ಇದೀಗ ಮತ್ತೆ ಬಸ್‌ ಬೇ ನಿರ್ಮಾಣಕ್ಕೆ ಸ್ಥಳೀಯಾಡಳಿತ ಮುಂದಾಗಿದ್ದು, ಬಳಿಕ ಸಂಚಾರ ವ್ಯವಸ್ಥೆ ಸುಧಾರಣೆಯಾಗುವ ನಿರೀಕ್ಷೆ ಇದೆ.

ಜಂಕ್ಷನ್‌ಗಳ ಅಭಿವೃದ್ಧಿಗೂ ಆದ್ಯತೆ :

ನಗರದಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಒಂದೆಡೆ ಬಸ್‌ ಬೇ ನಿರ್ಮಾಣವಾಗುತ್ತಿದ್ದರೆ ಮತ್ತೂಂದೆಡೆ ನಗರದ ನಾಲ್ಕು ಜಂಕ್ಷನ್‌ಗಳನ್ನು ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಪ್ರೀಮಿಯಂ ಎಫ್‌.ಎ.ಆರ್‌. ನಿಧಿಯಲ್ಲಿ ಕೊಟ್ಟಾರಚೌಕಿ ಜಂಕ್ಷನ್‌, ಕೆಎಸ್ಸಾರ್ಟಿಸಿ ಜಂಕ್ಷನ್‌, ಹೊನ್ನಕಟ್ಟೆ ಜಂಕ್ಷನ್‌ ಮತ್ತು ಸುರತ್ಕಲ್‌ ಜಂಕ್ಷನ್‌ ಅಭಿವೃದ್ಧಿಯಾಗಲಿದೆ. ನಗರದ ಕೆಲವೊಂದು ಜಂಕ್ಷನ್‌ಗಳು ಅವೈಜ್ಞಾನಿಕವಾಗಿದ್ದು, ಅವುಗಳಿಂದಲೇ ನಗರದಲ್ಲಿ ವಾಹನ ದಟ್ಟಣೆಗೆ ಕಾರಣವಾಗುತ್ತದೆ. ಕೆಲವೊಂದು ಜಂಕ್ಷನ್‌ಗಳು ಅಪಘಾತ ವಲಯವಾಗಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ಜಂಕ್ಷನ್‌ ನಿರ್ಮಾಣ ಕುರಿತಂತೆ ನಾಗರಿಕರಿಂದ ಬೇಡಿಕೆ ಬಂದಿತ್ತು. ಇದೀಗ ರಾಜ್ಯ ಸರಕಾರದ ಪ್ರೀಮಿಯಂ ಎಫ್‌.ಎ.ಆರ್‌. ನಿಧಿಯಲ್ಲಿ ಮೊದಲನೇ ಹಂತದಲ್ಲಿ ನಗರದ ಪ್ರಮುಖ ನಾಲ್ಕು ಜಂಕ್ಷನ್‌ ಅಭಿವೃದ್ಧಿಗೊಳ್ಳಲಿದೆ.

Advertisement

ಏನಿದು ಬಸ್‌ ಬೇ ? :

“ಬಸ್‌ ಬೇ’ ಅಂದರೆ ಬಸ್‌ ತಂಗುದಾಣದಲ್ಲಿ ಬಸ್‌ ನಿಲ್ಲಿಸುವ ಸಲುವಾಗಿ ಪ್ರತ್ಯೇಕವಾಗಿ ನಿಗದಿಪಡಿಸಿದ ಜಾಗ. ಇಲ್ಲಿ ರಸ್ತೆಯನ್ನು ಅರ್ಧ ವೃತ್ತಾಕಾರದಲ್ಲಿ ವಿಸ್ತರಿಸಲಾಗುತ್ತದೆ. ದ್ವಿಮುಖ ರಸ್ತೆಯಲ್ಲಿ ಒಂದು ಕಡೆಯಲ್ಲಿ ಒಳ ಹೋದರೆ, ಇನ್ನೊಂದು ಕಡೆಯಲ್ಲಿ ಹೊರಗೆ ಬರಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. “ಬೇ’ಯಲ್ಲಿ ಬಸ್‌ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಟ್ರಾಫಿಕ್‌ ಒತ್ತಡವೂ ತಪ್ಪುವುದು. “ಬಸ್‌-ಬೇ’ ಯ ಜಾಗಕ್ಕೆ ಕಾಂಕ್ರೀಟ್‌ ಹಾಕುವುದರೊಂದಿಗೆ, ಟ್ರಾಫಿಕ್‌ ಕೋನ್‌ಗಳನ್ನು ಕೂಡ ಅಳವಡಿಸಲಾಗುತ್ತದೆ.

ಸುಗಮ ಸಂಚಾರಕ್ಕೆ ಅನುಕೂಲ :

ಸುಗಮ ವಾಹನ ಸಂಚಾರದ ನಿಟ್ಟಿ ನಲ್ಲಿ ನಗರದ ವಿವಿಧ ಕಡೆಗಳಲ್ಲಿ ವ್ಯವ ಸ್ಥಿತ ಬಸ್‌ ಬೇಗಳನ್ನು ನಿರ್ಮಾಣ ಮಾಡುತ್ತೇವೆ. ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ 1.9 ಕೋಟಿ ರೂ. ಮೀಸಲಿರಿಸಿದ್ದು, ಸದ್ಯದಲ್ಲಿಯೇ ಕಾಮಗಾರಿಯೂ ಆರಂಭಗೊಳ್ಳಲಿದೆ. ಈಗಾಗಲೇ ನಗರದ ಕೆಲವೊಂದು ಕಡೆಗಳಲ್ಲಿ ಬಸ್‌ ಲೇನ್‌ಗಳಿದ್ದು, ಅವುಗಳ ಸುಧಾರಣೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.-ಡಿ. ವೇದವ್ಯಾಸ ಕಾಮತ್‌, ಶಾಸಕರು

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next