Advertisement

ಬಸ್‌, ಆಟೋ ಪ್ರಯಾಣ ದರ ಏರಿಕೆ ಸಾಧ್ಯತೆ ?

11:24 PM Jul 06, 2019 | Team Udayavani |

ಮಹಾನಗರ: ಕೇಂದ್ರ ಸರಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಸುಂಕವನ್ನು ಏರಿಕೆ ಮಾಡಲಾಗಿದ್ದು, ಇದನ್ನೇ ಹೊಂದಿಕೊಂಡಿರುವ ಮೋಟರು ವಾಹನಗಳ ಪ್ರಯಾಣ ದರ ಏರಿಕೆಯಾಗಬಹುದೇ ಎಂಬ ಪ್ರಶ್ನೆ ಪ್ರಯಾಣಿಕರಲ್ಲಿ ಮೂಡಿದೆ.

Advertisement

ನಗರದಲ್ಲಿ ಶನಿವಾರ ಪೆಟ್ರೋಲ್ ಬೆಲೆಯು 2.53 ರೂ. ಹೆಚ್ಚಳವಾಗಿದ್ದು, ಡಿಸೇಲ್ ಬೆಲೆಯು 2.43 ರೂ. ಏರಿಕೆ ಕಂಡಿದೆ. ತೈಲ ದರ ಏರಿಕೆಯ ಜತೆಗೆ ವಾಹನಗಳ ಬಿಡಿ ಭಾಗಗಳ ದರ ಕೂಡ ಹೆಚ್ಚಳವಾಗಿದೆ.

ನಗರದಲ್ಲಿ ಓಡಾಡುವ ಸಿಟಿ, ಖಾಸಗಿ ಬಸ್‌ ಟಿಕೆಟ್ ದರ ಕೆಲವು ವರ್ಷಗಳ ಹಿಂದೆ ಡಿಸೇಲ್ ಬೆಲೆ 58 ರೂ. ಇದ್ದಾಗ ಏರಿಕೆ ಮಾಡಲಾಗಿತ್ತು. ಕಳೆದ ವರ್ಷ ಸೆಸ್‌ ಆಧಾರದಲ್ಲಿ ಒಂದು ರೂ. ಏರಿಕೆ ಮಾಡಲಾಗಿತ್ತು. ಈಗ ತೈಲ ಬೆಲೆ ಮತ್ತಷ್ಟು ಏರಿಕೆಯಾಗಿದೆ. ಹಾಗಂತ ಏಕಾಏಕಿ ಬಸ್‌ ಟಿಕೆಟ್ ದರ ಏರಿಕೆ ಮಾಡಲು ಸಾಧ್ಯವಿಲ್ಲ. ಟಿಕೆಟ್ ದರ ಏರಿಕೆ ಮಾಡಬೇಕೆಂದು ಸಿಟಿ ಬಸ್‌ ಮಾಲಕರ ಸಂಘದಿಂದ ಈ ಹಿಂದೆಯೇ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ಮತ್ತೂಮ್ಮೆ ಮನವಿ ಮಾಡಲು ನಿರ್ಧರಿಸಿದ್ದು, ರಾಜ್ಯ ಸರಕಾರವು ಈ ಬಗ್ಗೆ ನೋಟಿಫಿಕೇಶನ್‌ ಮಾಡಿದ ಬಳಿಕವಷ್ಟೇ ದರ ಏರಿಕೆ ನಿಗದಿಯಾಗುತ್ತದೆ. ನಗರದಲ್ಲಿ ಓಡಾಡುವ ಆಟೋರಿಕ್ಷಾ ಬಾಡಿಗೆ ದರವನ್ನು ಏರಿಕೆ ಮಾಡಬೇಕು ಎಂದು ಯೂನಿಯನ್‌ ವತಿಯಿಂದ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ದರ ಮತ್ತಷ್ಟು ಏರಿಕೆಯಾಗದು

ಬಜೆಟ್‌ನಲ್ಲಿ ಪೆಟ್ರೋಲ್, ಡಿಸೇಲ್ ಮೇಲಿನ ಸುಂಕವನ್ನು ಏರಿಕೆ ಮಾಡಿದ ಕಾರಣಕ್ಕೆ ತೈಲ ಬೆಲೆ ಇದೀಗ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮತ್ತು ಡಾಲರ್‌ ಬೆಲೆ ಸ್ಥಿರ ಇದೆ. ಸದ್ಯದ ಪರಿಸ್ಥಿತಿ ಗಮನಿಸುವಾಗ ತೈಲ ಬೆಲೆಯು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗದು.
– ಸತೀಶ್‌ ಎನ್‌. ಕಾಮತ್‌, ಅಧ್ಯಕ್ಷ, ದ.ಕ., ಉಡುಪಿ ಪೆಟ್ರೋಲ್ ಡೀಸೆಲ್ ಅಸೋಸಿಯೇಶನ್‌

ಮತ್ತೂಮ್ಮೆ ಮನವಿ

ಪೆಟ್ರೋಲ್, ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ವಾಹನಗಳ ಬಿಡಿ ಭಾಗಗಳ ಬೆಲೆಯೂ ಏರಿಕೆಯಾಗಿದೆ. ಇದರಿಂದಾಗಿ ಬಸ್‌ ಮಾಲಕರು ಸಂಕಷ್ಟದಲ್ಲಿದ್ದಾರೆ. ಬಸ್‌ ದರ ಏರಿಕೆ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೆವು. ಇದೀಗ ಮತ್ತೂಮ್ಮೆ ಮನವಿ ಮಾಡುತ್ತೇವೆ.
Advertisement

-ದಿಲ್ರಾಜ್‌ ಆಳ್ವ,ಅಧ್ಯಕ್ಷ , ಸಿಟಿ ಬಸ್‌ ಮಾಲಕರ ಸಂಘ

ಬೇಡಿಕೆ ಈಡೇರದಿದ್ದರೆ ಹೋರಾಟ

ನಗರದಲ್ಲಿ ಓಡಾಡುವ ಆಟೋರಿಕ್ಷಾ ದರ ಪರಿಷ್ಕರಣೆ ಮಾಡದೆ ಕೆಲವು ವರ್ಷಗಳಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೆವು. ಇದೀಗ ತೈಲ ಬೆಲೆ ಮತ್ತಷ್ಟು ಏರಿಕೆಯಾಗಿದ್ದು, ಮತ್ತೂಮ್ಮೆ ಮನವಿ ಮಾಡುತ್ತೇವೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ.
-ಸುನಿಲ್ ಕುಮಾರ್‌ ಬಜಾಲ್, ಜಿಲ್ಲಾಧ್ಯಕ್ಷ , ಸಿಐಟಿಯು ಸಂಯೋಜಿತ ಆಟೋ ರಿಕ್ಷಾ ಡ್ರೈವರ್ ಯೂನಿಯನ್‌
Advertisement

Udayavani is now on Telegram. Click here to join our channel and stay updated with the latest news.

Next