ಕೊಂಡಗಟ್ಟು: ತೆಲಂಗಾಣದಲ್ಲಿ ಮಂಗಳವಾರ ರಣ ಭೀಕರ ಅಪಘಾತವೊಂದು ನಡೆದಿದ್ದು 43 ಮಂದಿ ದಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಗಿತ್ಯಾಲ್ ಜಿಲ್ಲೆಯ ಕೊಂಡಗಟ್ಟುವಿನ ಘಾಟಿ ಪ್ರದೇಶದಲ್ಲಿ ಬೆಳಗ್ಗೆ 12 ಗಂಟೆಯ ವೇಳೆ ಈ ಘೋರ ದುರಂತ ನಡೆದಿದ್ದು , ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.
ಮೃತರ ಪೈಕಿ 25 ಮಂದಿ ಮಹಿಳೆಯರು ಮತ್ತು 7 ಮಂದಿ ಮಕ್ಕಳು ಎಂದು ತಿಳಿದು ಬಂದಿದೆ. 8 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕನ ಎರಡೂ ಕಾಲುಗಳು ತುಂಡಾಗಿವೆ. ಸ್ಥಳದಲ್ಲಿ ರಕ್ತ ನದಿಯೋಪಾದಿಯಲ್ಲಿ ಹರಿದಿದೆ.
ಗಾಯಾಳುಗಳಿಗೆ ಕರೀಂ ಗರ್ ಮತ್ತು ಜಗಿತ್ಯಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯ ನಡೆಸಿದ್ದಾರೆ.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕೊಂಡಗಟ್ಟುವಿನಲ್ಲಿ ಹನುಮಂತನ ದೇವಸ್ಥಾನ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು ಮಂಗಳವಾರ ಮತ್ತು ಶನಿವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.