Advertisement

ಬರಿದಾಗುತ್ತಿದೆ ಕಡವಿನಕಟ್ಟೆ ಡ್ಯಾಂ

05:02 PM Apr 26, 2019 | pallavi |

ಭಟ್ಕಳ: ನಗರದ ನೀರು ಸರಬರಾಜಿನ ಏಕೈಕ ಮೂಲ ಕಡವಿನಕಟ್ಟೆ ಡ್ಯಾಂ ಬತ್ತಿಹೋಗುವ ಸಂಭವವಿದ್ದು ಹಾಗೇನಾದರೂ ಆದಲ್ಲಿ ನಗರದ ಜನತೆ ನೀರಿಗಾಗಿ ಪರಿತಪಿಸಬೇಕಾಗುವುದಂತೂ ಸತ್ಯ.

Advertisement

ಕಡವಿನಕಟ್ಟೆಯಲ್ಲಿ ಹರಿಯುತ್ತಿರುವ ಭೀಮಾ ನದಿಗೆ ವೆಂಕಟಾಪುರದಲ್ಲಿ ಅಡ್ಡಲಾಗಿ ಕಟ್ಟಲಾದ ಡ್ಯಾಂ ಹಲವಾರು ವರ್ಷ ಕೃಷಿ ಜಮೀನಿಗೆ ನೀರುಣಿಸಿತು. ಡ್ಯಾಂ ಕಟ್ಟಿರುವ ಉದ್ದೇಶವೇ ಅದು ಆಗಿದ್ದರೂ ಇಲಾಖೆಗಳ ಕಳಪೆ ನಿರ್ವಹಣೆಯಿಂದಾಗಿ ಕಾಲುವೆಯಲ್ಲಿ ನೀರಿನ ಹರಿವು ಬಂದಾಗಿದ್ದು ರೈತರು ಸಾಕಷ್ಟು ಪ್ರಯತ್ನ ಪಟ್ಟರೂ ನೀರು ಹರಿಸುವುದು ಕಷ್ಟಕರವಾಗಿದ್ದರಿಂದ ಕೃಷಿಯನ್ನೇ ನಂಬಿರುವ ಅನೇಕ ಕುಟುಂಬಗಳು ಇಂದು ಕೇವಲ ಮಳೆಗಾಲದಲ್ಲಿ ಮಾತ್ರ ಕೃಷಿ ಮಾಡುತ್ತಿವೆ.

ಕೃಷಿಕರಿಗೆ ನಿರಾಸೆ: ಕಡವಿನಕಟ್ಟೆ ಡ್ಯಾಂ ಕೃಷಿಕರಿಗೆಂದು ನಿರ್ಮಾಣವಾಗಿ ಶಿರಾಲಿ, ಸಾರದಹೊಳೆ, ಬೇಂಗ್ರೆ ಇತ್ಯಾದಿ ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾ ರೈತರ ಪಾಲಿಗೆ ಸಂಜೀನಿಯಾಗಿದ್ದರೆ ಕಳೆದ ದಶಕದಿಂದ ಕೃಷಿಕರಿಗೆ ನೀರು ದೊರೆಯದೇ ಕೇವಲ ಕುಡಿಯುವ ನೀರಿಗೆ ಉಪಯೋಗವಾಗುತ್ತಿದೆ. ಮತ್ತೆ ಕೃಷಿಗೆ ನೀರು ಪಡೆಯಲು ರೈತರು ಮಾಡಿದ ಪ್ರಯತ್ನವೂ ವಿಫಲವಾಗಿದೆ. ಇದಕ್ಕೆ ಕಾರಣ ರೈತರಿಗೆ ನೀರು ಸರಬರಾಜು ಮಾಡಬೇಕಾಗಿದ್ದ ನೀರಿನ ಚಾನೆಲ್ ಸಂಪೂರ್ಣ ಕುಸಿದಿರುವುದು. ಡ್ಯಾಂನಲ್ಲಿನ ನೀರನ್ನು ಹೆಚ್ಚು ಹೆಚ್ಚು ಕುಡಿಯುವ ನೀರಿಗಾಗಿ ಬಳಸುತ್ತಿರುವುದು.

ಕುಡಿಯಲು ಬಳಕೆ: ಕಡವಿನಕಟ್ಟೆ ಡ್ಯಾಂನಿಂದ ಪ್ರತಿನಿತ್ಯ ಸಾವಿರಾರು ಗ್ಯಾಲನ್‌ ನೀರನ್ನು ಕುಡಿಯುವ ನೀರು ಸರಬರಾಜಿಗಾಗಿ ಬಳಸಲಾಗುತ್ತಿದೆ. ಮೊದಲು ಭಟ್ಕಳ ನಗರಕ್ಕೆ ನೀರು ಸರಬರಾಜು ಮಾಡಲು ರೈತರ ವಿರೋಧದ ನಡುವೆಯೂ ಪಂಪ್‌ ಹಾಕಲಾಗಿದ್ದು ನಂತರ ನಿಧಾನವಾಗಿ ಶಿರಾಲಿ ಗ್ರಾಪಂ ಪಂಪ್‌ ಅಳವಡಿಸಿ ಕುಡಿಯಲು ನೀರು ಬಳಸಿಕೊಂಡರೆ, ಕಳೆದೆರಡು ವರ್ಷಗಳ ಹಿಂದೆ ಮಾವಿನಕುರ್ವೆ ಗ್ರಾಪಂಗೆ ಕುಡಿಯುವ ನೀರು ಸರಬರಾಜು ಮಂಜೂರಿ ಮಾಡಿಸಿದ ಅಂದಿನ ಶಾಸಕ ಮಂಕಾಳ ವೈದ್ಯ ಇದೇ ಡ್ಯಾಂನಿಂದ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.

ಡ್ಯಾಂ ರಿಪೇರಿ: ದಶಕದ ಹಿಂದೆ ಕಡವಿನಕಟ್ಟೆ ಡ್ಯಾಂ ರಿಪೇರಿಗೆ ಗುತ್ತಿಗೆ ನೀಡಲಾಯಿತು. ಡ್ಯಾಂ ಸೈಟ್ ರಿಪೇರಿ ಮಾಡಲಾಯಿತಾದರೂ ಸಹ ಅಲ್ಲಿನ ಗೇಟ್ವಾಲ್ ಮಾತ್ರ ರಿಪೇರಿ ಮಾಡಲಾಗಿಲ್ಲ. ರಿಪೇರಿಗಾಗಿ ಸುಮಾರು 200-300 ಲಾರಿಗಷ್ಟು ಮಣ್ಣನ್ನು ಸುರಿದಿದ್ದು ರಿಪೇರಿ ಮುಗಿಯುವಾಗ ಮಳೆಗಾಲ ಆರಂಭವಾಗಿದ್ದರಿಂದ ಆ ಮಣ್ಣನ್ನು ತೆಗೆಯಲು ಸಾಧ್ಯವಾಗದೇ ಅಲ್ಲಿಯೇ ಉಳಿಯಿತು. ನಂತರ ಡ್ಯಾಂ ಸೈಟ್‌ನಲ್ಲಿರುವ ಮಣ್ಣನ್ನು ತೆಗೆಯಲು ಜನಾಗ್ರಹ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ತಲುಪಲು ಸಾಧ್ಯವಾಗೇ ಇಲ್ಲ.

ಇನ್ನೊಂದು ಡ್ಯಾಂಗೆ ಬೇಡಿಕೆ

ಕಡವಿನಕಟ್ಟೆ ಡ್ಯಾಂ ಎತ್ತರಿಸಬೇಕೆನ್ನುವ ಬೇಡಿಕೆ ಇದೆಯಾದರೂ ಇದರಿಂದ ಡ್ಯಾಂ ಮೇಲುಗಡೆಯಲ್ಲಿರುವ ಹಲವರ ಜಮೀನು ಮುಳುಗಡೆಯಾಗುವುದರಿಂದ ಎತ್ತರಿಸಲಿಲ್ಲ. ಆದರೆ ಕುಡಿಯುವ ನೀರಿನ ಬವಣೆ ತಪ್ಪಿಸಲು ಈಗಿರುವ ಕಡವಿನಕಟ್ಟೆ ಡ್ಯಾಂ ಕೆಳಗಡೆಯಲ್ಲಿ ಇನ್ನೊಂದು ಡ್ಯಾಂ ನಿರ್ಮಾಣ ಮಾಡಬೇಕು ಎನ್ನುವ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತಾದರು ನಮ್ಮ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಇನ್ನೂ ಕೂಡಾ ಈ ಕುರಿತು ಚಿಂತಿಸಲು ಸಮಯವೇ ದೊರೆತಿಲ್ಲ ಎನ್ನಬಹುದು. ಅನಾವಶ್ಯಕವಾಗಿ ನೀರು ಹರಿದು ಹೋಗುವುದನ್ನು ತಪ್ಪಿಸಿ, ಉಪಯೋಗ ಮಾಡಿಕೊಳ್ಳಬಹುದು ಎನ್ನುವುದು ಜನರ ಅಳಲಾಗಿದೆ.
ಮಾರ್ಗ ಕಂಡು ಹಿಡಿಯಲಿ

ಕಡವಿನಕಟ್ಟೆ ಡ್ಯಾಂನಿಂದ ಭಟ್ಕಳ ನಗರ, ಶಿರಾಲಿ, ಮಾವಿನಕುರ್ವೆಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಆದರೆ ಎಂದೂ ಡ್ಯಾಂನಲ್ಲಿನ ನೀರಿನ ಸಾಮರ್ಥ್ಯ ಮಾತ್ರ ಅಳತೆ ಮಾಡಿಲ್ಲ. ವರ್ಷ ಕಳೆದಂತೆಲ್ಲಾ ನೀರಿನ ಒಳಹರಿವು ಕಡಿಮೆಯಾಗುತ್ತಿದ್ದು ಮೊದಲು ಎಪ್ರಿಲ್ ಮೇ ತನಕ ನೀರು ಹರಿಯುತ್ತಿದ್ದರೆ, ಇಂದು ಮಾರ್ಚ್‌ ಎಪ್ರಿಲ್ನಲ್ಲಿಯೇ ನೀರಿನ ಒಳಹರಿವು ಬಂದ್‌ ಆಗಿದೆ. ಮುಂದಿನ ದಿನಗಳಲ್ಲಿ ಎಷ್ಟು ನೀರು ಅಗತ್ಯವಿದೆ. ನೀರಿನ ಒಳಹರಿವು ಇನ್ನೂ ಕೂಡಾ ಕಡಿಮೆಯಾದರೆ ನೀರನ್ನು ಹಿಡಿದಿಟ್ಟುಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮ ಏನು ಎಂದು ಯೋಚಿಸಬೇಕಾಗಿದೆ.
ಆರ್ಕೆ, ಭಟ್ಕಳ
Advertisement
Advertisement

Udayavani is now on Telegram. Click here to join our channel and stay updated with the latest news.

Next