Advertisement

ಬತ್ತಿದ ಅಂರ್ತಜಲ: 136ಕ್ಕೆ 96 ಕೊಳವೆ ಬಾವಿ ಫೇಲ್‌

06:50 AM May 16, 2019 | Team Udayavani |

ಚಿಕ್ಕಬಳ್ಳಾಪುರ: ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಯಲು ಸೀಮೆ ಚಿಕ್ಕಬಳ್ಳಾಪುರದಲ್ಲಿ ಬರದ ಛಾಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಳೆಗಾಲ ಆರಂಭಗೊಂಡರೂ ಕುಡಿಯುವ ನೀರಿನ ಬವಣೆ ಮಾತ್ರ ಜಿಲ್ಲೆಯಲ್ಲಿ ನೀಗುತ್ತಿಲ್ಲ. ಜಿಲ್ಲಾದ್ಯಂತ 297 ಗ್ರಾಮಗಳಲ್ಲಿ ಹನಿ ನೀರಿಗಾಗಿ ಹಾಹಾಕಾರ ಎದುರಾಗಿದ್ದು, ಜನ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಜಿಲ್ಲೆಯ ಚಿಂತಾಮಣಿಯಲ್ಲಿ 93, ಶಿಡ್ಲಘಟ್ಟ, ಬಾಗೇಪಲ್ಲಿ ತಾಲೂಕಿನಲ್ಲಿ ತಲಾ 53, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 56, ಗೌರಿಬಿದನೂರಲ್ಲಿ 27, ಗುಡಿಬಂಡೆಯಲ್ಲಿ 15 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.

Advertisement

ಜಿಲ್ಲಾಡಳಿತಕ್ಕೆ ತಲೆನೋವು: ಜಿಲ್ಲೆಯಲ್ಲಿ ಒಟ್ಟು 120 ಗ್ರಾಮಗಳಿಗೆ ನಿತ್ಯ 287 ಟ್ಯಾಂಕರ್‌ಗಳಷ್ಟು ನೀರು ಪೂರೈಕೆ ಮಾಡಲಾಗುತ್ತಿದೆ. ಆ ಪೈಕಿ ಚಿಂತಾಮಣಿ ತಾಲೂಕಿನ ಒಂದಕ್ಕೆ ನಿತ್ಯ 119, ಶಿಡ್ಲಘಟ್ಟಗೆ 61, ಚಿಕ್ಕಬಳ್ಳಾಪುರ 50, ಬಾಗೇಪಲ್ಲಿ 36 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುತ್ತಿದೆ. ಇನ್ನೂ ಪ್ರತಿ ನಿತ್ಯ ಜಿಲ್ಲೆಯ ಒಟ್ಟು 177 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಆದರೂ ದಿನದಿಂದ ದಿನಕ್ಕೆ ನೀರಿನ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿ ನಿತ್ಯ ಅಲ್ಲಲ್ಲಿ ಕುಡಿಯುವ ನೀರಿಗಾಗಿ ಜನ ಖಾಲಿ ಬಿಂದಿಗೆಗಳನ್ನು ಕೈಯಲ್ಲಿ ಹಿಡಿದು ಧರಣಿ, ಪ್ರತಿಭಟನೆ, ಗ್ರಾಪಂಗಳಿಗೆ ಮುತ್ತಿಗೆ ಹಾಕುವುದು, ರಸ್ತೆ ತಡೆ ನಡೆಸುವುದು ಮಾಮೂಲಿಯಾಗಿದ್ದು ನೀರಿನ ಸಂಕಷ್ಟ ಅನಾವರಣಗೊಳಿಸುತ್ತಿವೆ. ಜಿಲ್ಲೆಯಲ್ಲಿ ಯಾವುದೇ ಶಾಶ್ವತವಾದ ನದಿ, ನಾಲೆಗಳು ಇಲ್ಲದ ಪರಿಣಾಮ ಮಳೆಯನ್ನು ಆಶ್ರಯಿಸಬೇಕಿದ್ದು, ಕೆರೆ, ಕುಂಟೆಗಳು ಸಹ ಬತ್ತಿ ಹೋಗಿವೆ. ಹೀಗಾಗಿ ಮಳೆ ಕೊರತೆಯಿಂದ ಜಿಲ್ಲೆಯ ಅಂರ್ತಜಲ ಮಟ್ಟ ಕೂಡ ಪಾತಳಕ್ಕೆ ಕುಸಿದು ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆದರೂ ನೀರು ದಕ್ಕುತ್ತಿಲ್ಲ.

ಹಣ ವ್ಯರ್ಥ: ಜಿಲ್ಲೆಯಲ್ಲಿ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ 136 ಕೊಳವೆ ಬಾವಿಗಳನ್ನು ಕೊರೆಸಿದ್ದು ಆ ಪೈಕಿ 40 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದ್ದರೆ, ಉಳಿದ 96 ಕೊಳವೆ ಬಾವಿಗಳಲ್ಲಿ ಹನಿ ನೀರು ಬಿದ್ದಿಲ್ಲ. ಇದರಿಂದ ಕೊಳಬೆ ಬಾವಿಗಳನ್ನು ಕೊರೆಸಲು ಜಿಲ್ಲಾಡಳಿತ ಲಕ್ಷ ಲಕ್ಷ ಹಣ ಸುರಿದರೂ ಹನಿ ನೀರು ಹೊರ ಬರುತ್ತಿಲ್ಲ.

38 ಕೋಟಿಗೆ 3 ಕೋಟಿ ಬಿಡುಗಡೆ: ಕಳೆದ ವರ್ಷ ಜಿಲ್ಲೆಗೆ ಶಾಸಕರ ಅಧ್ಯಕ್ಷತೆಯಲ್ಲಿರುವ ಟ್ಕಾಸ್‌ಫೋರ್ಸ್‌ಗೆ ಪ್ರತಿ ತಾಲೂಕಿಗೆ ಕುಡಿಯುವ ನೀರಿನ ಕಾಮಗಾರಿಗಳಿಗೆ ತಲಾ 1 ಕೋಟಿಯಂತೆ ಒಟ್ಟು ಜಿಲ್ಲೆಗೆ 6 ಕೋಟಿ ಅನುದಾನ ಕುಡಿಯುವ ನೀರಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಕಳೆದ ಮಾರ್ಚ್‌ನಿಂದ ಈಚೆಗೆ ಇಡೀ ಜಿಲ್ಲೆಗೆ 3 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪ್ರತಿ ತಾಲೂಕಿಗೆ ತಲಾ 50 ಲಕ್ಷ ರೂ. ನೀಡಲಾಗಿದೆ. ಜಿಲ್ಲೆಗೆ ಒಟ್ಟು ವರ್ಷಕ್ಕೆ ಕುಡಿಯುವ ನೀರಿಗಾಗಿ 38 ಕೋಟಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.

Advertisement

ತಾಲೂಕುವಾರು ನೀರಿನ ಸಮಸ್ಯೆ
-ಚಿಂತಾಮಣಿ 93
-ಶಿಡ್ಲಘಟ್ಟ 53
-ಬಾಗೇಪಲ್ಲಿ 53
-ಚಿಕ್ಕಬಳ್ಳಾಪುರ 56
-ಗೌರಿಬಿದನೂರು 27
-ಗುಡಿಬಂಡೆ 15

ಜಿಲ್ಲೆಯಲ್ಲಿ ಒಟ್ಟು 297 ಗ್ರಾಮಗಳು ಕುಡಿಯುವ ನೀರಿನ ತೊಂದರೆ ಎದುರಿಸುತ್ತಿವೆ. ಆ ಪೈಕಿ 120 ಗ್ರಾಮಗಳಿಗೆ ನಿತ್ಯ ಟ್ಯಾಂಕರ್‌ಗಳ ನೀರು ಪೂರೈಕೆ ಮಾಡುತ್ತಿದ್ದು, ಉಳಿದ 177 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಕೊಡಲಾಗುತ್ತಿದೆ. ಈ ವರ್ಷಕ್ಕೆ ಜಿಲ್ಲೆಗೆ ಒಟ್ಟು 38 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು ಸರ್ಕಾರ 3 ಕೋಟಿ ಅನುದಾನ ಬಿಡುಗಡೆ ಮಾಡಿದೆ.
-ಶಿವಕುಮಾರ್‌, ಜಿ.ಲೋಕೂರ್‌, ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next