ಕೆಲ ದಿನಗಳ ಹಿಂದಷ್ಟೇ ಕಿರುತೆರೆಯ “ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ನಟ ರಕ್Ò ರಾಮ್ “ಬರ್ಮ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ಈಗ ಈ ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ.
“ಶ್ರೀಸಾಯಿ ಆಂಜನೇಯ ಕಂಪೆನಿ’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ “ಬರ್ಮ’ ಸಿನಿಮಾಕ್ಕೆ ಚೇತನ್ ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ನಡೆದ ಮುಹೂರ್ತ ಸಮಾರಂಭದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ “ಬರ್ಮ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಸಿನಿಮಾದ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
ನಟರಾದ ಧ್ರುವ ಸರ್ಜಾ, ನಿರ್ದೇಶಕ ಎ. ಪಿ ಅರ್ಜುನ್, ನಿರ್ಮಾಪಕ ಕೆ. ಪಿ. ಶ್ರೀಕಾಂತ್, ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಭಾ. ಮ. ಹರೀಶ್ ಸೇರಿದಂತೆ ಚಿತ್ರರಂಗದ ಅನೇಕರು ಮುಹೂರ್ತದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಚೇತನ್ ಕುಮಾರ್, “ಇದೊಂದು ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಎಂಟರ್‌ಟೈನ್ಮೆಂಟ್ ಸಿನಿಮಾ. “ಬಹದ್ದೂರ್’, “ಭರ್ಜರಿ’, “ಭರಾಟೆ’, “ಜೇಮ್ಸ್’ನಂತರ ನಾನು ನಿರ್ದೇಶನ ಮಾಡುತ್ತಿರುವ ಐದನೇ ಸಿನಿಮಾ ಇದಾಗಿದೆ. ಸಂಸ್ಕೃತದಲ್ಲಿ “ಬರ್ಮ’ ಎಂದರೆ ಬ್ರಹ್ಮ ವಾಸಿಸುವ ಜಾಗ ಎಂಬ ಅರ್ಥವಿದೆ. ದೇಶವೊಂದಕ್ಕೂ ಇದೇ ಹೆಸರಿದೆ. ಫ್ಯಾಮಿಲಿ ಕಂಟೆಂಟ್ ಮತ್ತು ಆ್ಯಕ್ಷನ್ ಎಲಿಮೆಂಟ್ ಎರಡೂ “ಬರ್ಮ’ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಐದು ಭಾಷೆಗಳಲ್ಲಿ ಸಿನಿಮಾ ತರುವ ಯೋಜನೆ. ನಾಯಕ ರಕ್ಷ್ ರಾಮ್ ಅವರಿಗೆ ನಾಯಕಿಯ ಹುಡುಕಾಟ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಹೀರೋಯಿನ್ಸ್ ಹೆಸರು ಅನೌನ್ಸ್ ಮಾಡಲಿದ್ದೇವೆ’ ಎಂದು ವಿವರಣೆ ನೀಡಿದರು.
“ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಫ್ಯಾಮಿಲಿ ಮತ್ತು ಆ್ಯಕ್ಷನ್ಸ್ ಎರಡೂ ಥರದ ಲುಕ್ ಇರುವಂಥ ಪಾತ್ರ ಇದಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ನಿರ್ದೇಶಕ ಚೇತನ್ ಅವರೊಂದಿಗೆ ಒಡನಾಟವಿದ್ದರೂ, ಸಿನಿಮಾ ಮಾಡಲಾಗಿರಲಿಲ್ಲ. ಈ ಸಿನಿಮಾದ ಮೂಲಕ ತುಂಬ ವರ್ಷಗಳ ಕನಸು ನನಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲಿದ್ದೇವೆ’ ಎಂಬುದು ನಾಯಕ ನಟ ರಕ್ಷ್ ರಾಮ್ ಮಾತು.
ಮುಹೂರ್ತದ ವೇಳೆ ಹಾಜರಿದ್ದ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ನಟರಾದ ರಾಜ್ ದೀಪಕ್ ಶೆಟ್ಟಿ, ಪೆಟ್ರೊಲ್ ಪ್ರಸನ್ನ, ಶೈಲಜಾ ನಾಗ್, ಛಾಯಾಗ್ರಹಕ ಸಂಕೇತ್, ಸಂಕಲನಕಾರ ಮಹೇಶ್ ಮೊದಲಾದವರು ಸಿನಿಮಾದ ಬಗ್ಗೆ ಮಾತನಾಡಿದರು.
ಇದೇ ಅಕ್ಟೋಬರ್ ಅ. 3 ರಿಂದ “ಬರ್ಮ’ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯಲಿದೆ.