ಬೆಂಗಳೂರು: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಮನೆ ಕಳವು ಮಾಡುತ್ತಿದ್ದ ರೌಡಿಶೀಟರ್ ಸೇರಿ ಇಬ್ಬರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಯಶವಂತಪುರದ ನಿವಾಸಿ ರೌಡಿಶೀಟರ್ ಶ್ರೀನಿವಾಸ ಅಲಿಯಾಸ್ ಸೀನಾ (35) ಮತ್ತು ಮಾದನಾಯಕನಹಳ್ಳಿ ನಿವಾಸಿ ವೆಂಕಟೇಶ್(22) ಬಂಧಿತರು.
ಆರೋಪಿಗಳಿಂದ 15 ಲಕ್ಷ ರೂ.ನ 205 ಗ್ರಾಂ ಚಿನ್ನಾಭರಣ, ಬೈಕ್ ವಶಕ್ಕೆ ಪಡೆಯಲಾಗಿದೆ. ಬಂಧಿತರು ಮಾ.23 ರಂದು ರಾಮಮೂರ್ತಿನಗರದ ಮದಕರಿನಾಯಕ ರಸ್ತೆಯಲ್ಲಿರುವ ಮನೆಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳವು ಮಾಡಲು ಯತ್ನಿಸಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆರಳಚ್ಚು ಕೊಟ್ಟ ಸುಳಿವು: ಕೃತ್ಯ ನಡೆದ ಸ್ಥಳದಲ್ಲಿ ತಜ್ಞರು ಸಂಗ್ರಹಿಸಿದ್ದ ಬೆರಳಚ್ಚು ಮುದ್ರೆ ಆಧರಿಸಿ ದಾವಣಗೆರೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಕೃತ್ಯದ ಪ್ರಮುಖ ಆರೋಪಿ ಶ್ರೀನಿವಾಸ್ ಯಶವಂತಪುರ ಠಾಣೆಯ ರೌಡಿಶೀಟರ್ ಎಂಬುವುದು ಗೊತ್ತಾಗಿದೆ. ಶ್ರೀನಿವಾಸ್ ವಿರುದ್ಧ 20ಕ್ಕೂ ಹೆಚ್ಚು ಕಳವು ಕೇಸು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಮತ್ತೂಬ್ಬ ಆರೋಪಿ ವೆಂಕಟೇಶ್ ಈತನ ಸಹಚರನಾಗಿದ್ದಾನೆ. ಆರೋಪಿಗಳ ಬಂಧನದಿಂದ ರಾಮಮೂರ್ತಿ ನಗರ, ಕೆ.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 3 ಕಳವು ಸೇರಿ ಒಟ್ಟು 4 ಪ್ರಕರಣ ಪತ್ತೆಯಾಗಿದೆ. ಪ್ರಕರಣ ಭೇದಿಸಿದ ಬೆರಳಚ್ಚು ತಜ್ಞರು, ಪೊಲೀಸರಿಗೆ ತಲಾ 25 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದು ದಯಾನಂದ್ ಹೇಳಿದರು.