ಬರ್‌ದ್ವಾನ್, ಪಶ್ಚಿಮ ಬಂಗಾಲ : ಬರ್‌ದ್ವಾನ್ ಜಿಲ್ಲೆಯ ಕೇತುಗ್ರಾಮ 1 ಪಂಚಾಯತ್ ಸಮಿತಿಯ ಅಧ್ಯಕ್ಷನನ್ನು ದುಷ್ಕರ್ಮಿಗಳು ಇರಿದು ಕೊಂದ ಘಟನೆಯನ್ನು ಅನುಸರಿಸಿ ರೈಫಾ ಗ್ರಾಮದಲ್ಲಿ ಹಿಂಸೆ ಸ್ಫೋಟಿಸಿದೆ.
ನಿನ್ನೆ ಬುಧವಾರ ತಡರಾತ್ರಿ ಸಂಭವಿಸಿದ ಘಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಹೀರ್ ಶೇಖ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಸಾಯಿಸಿದರು. ಶೇಖ್ ಅವರು ಸಲೂನ್‌ನಿಂದ ಮನೆಗೆ ಮರಳುತ್ತಿದ್ದ ವೇಳೆ ಈ ಕೊಲೆ ಕೃತ್ಯ ನಡೆದಿದೆ.
ಶೇಖ್ ಅವರನ್ನು ಹಿಂಬದಿಯಿಂದ ಸಮೀಪಿಸಿದ ದುಷ್ಕರ್ಮಿಗಳು ಹೊಡೆದ ಗುಂಡಿಗೆ ಶೇಖ್ ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಜಹೀರ್ ಶೇಖ್ ಅವರ ಪತ್ನಿ ಜೂಲಿ ಬೀಬಿ ಹೇಳಿರುವ ಪ್ರಕಾರ ತನ್ನ ಪತಿಯನ್ನು ಕೇತುಗ್ರಾಮ 1 ಪಂಚಾಯತ್ ಸಮಿತಿಯ ಪಿಡಬ್ಲ್ಯುಡಿ ಮುಖ್ಯಸ್ಥ ಜಹಾಂಗೀರ್ ಶೇಖ್ ಎಂಬಾತ ಕೊಂದಿದ್ದಾನೆ.
ಜಹೀರ್ ಅವರ ಸಾವಿನಿಂದ ಕೋಪೋದ್ರಿಕ್ತರಾದ ಅವರ ಬೆಂಬಲಿಗರು, ಜಹಾಂಗೀರ್ ಶೇಖ್ ಅವರ ಮನೆಯ ಪಕ್ಕದ ಗೋದಾಮಿನ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದರು. ಮಾತ್ರವಲ್ಲದೆ ಜಹಾಂಗೀರ್‌ನ ಚಿಕ್ಕಪ್ಪನ ಮನೆಗೂ ಅವರು ಬೆಂಕಿ ಹಚ್ಚಿದರು.
“ನಾವು ಈ ಘಟನೆಗಳಿಗೆ ಸಂಬಂಧಿಸಿ ಹಲವಾರು ವ್ಯಕ್ತಿಗಳನ್ನು ಬಂಧಿಸಿ ಪ್ರಶ್ನಿಸುತ್ತಿದ್ದೇವೆ ಎಂದು ಕೇತುಗ್ರಾಮ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.