ಮುಂಬಯಿ: ವಸಾಯಿ-ಡಹಾಣೂ ಪರಿಸರದಲ್ಲಿರುವ ಸಮಾಜ ಬಾಂಧವರು ಸಂಘದ ಕಾರ್ಯಾಲಯಕ್ಕೆ ಬರುವುದು ಕಷ್ಟಕರವಾಗಿದ್ದರೂ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ. ವಿದ್ಯಾರ್ಥಿ ವೇತನದ ಫಲಾನುಭವ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಂಘದ ಸೇವಾ ಕಾರ್ಯಗಳಲ್ಲಿ ಪಾಲು ಪಡೆಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸಿ ಅವರನ್ನು ಆದರ್ಶ ಪ್ರಜೆಗಳಾಗಿ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಬಂಟರ ಸಂಘ ಮುಂಬಯಿ ಇದರ ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ ಅವರು ಅಭಿಪ್ರಾಯಿಸಿದರು.
ಜೂ. 11 ರಂದು ನಲಸೋಪರ ಪಶ್ಚಿಮದ ಗ್ಯಾಲಕ್ಸಿ ಹೊಟೇಲ್‌ನ ಸಭಾಂಗಣದಲ್ಲಿ ನಡೆದ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯು ಪ್ರತೀ ವರ್ಷ ನೀಡುತ್ತಿರುವ ವಿದ್ಯಾರ್ಥಿ ವೇತನ ಕಾರ್ಯಕ್ರಮ ಸಂಘದ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ವತಿಯಿಂದ ನಡೆದಿದ್ದು, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತಿಥಿ-ಗಣ್ಯರುಗಳನ್ನು ಗೌರವಿಸಿ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಕೆ. ಶೆಟ್ಟಿ ಅವರು, ನಲಸೋಪರ ಸಮಾಜ ಬಾಂಧವರು ಸಂಘ ಮತ್ತು ಸಮಾಜದ ಮೇಲೆ ಅಭಿಮಾನ ಹೊಂದಬೇಕು. ಪ್ರತೀ ವರ್ಷ ಸಂಘ ನೀಡುತ್ತಿರುವ ಕೋಟ್ಯಾಂತರ ರೂ. ವಿದ್ಯಾರ್ಥಿ ವೇತನ, ಶಿಕ್ಷಣದ ನೆರವುಗಳನ್ನು ಸಮಾಜದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಈ ಪರಿಸರದ ಸಮಾಜ ಬಾಂಧವರಿಗೆ ಸಂಘ ಎಲ್ಲಾ ರೀತಿಯ ಯೋಜನೆಗಳು ತಲುಪುವಂತಾಗಲು ಪ್ರಾದೇಶಿಕ ಸಮಿತಿಯು ಪ್ರಾರಂಭದಿಂದಲೂ ಶ್ರಮಿಸುತ್ತಿದೆ. ಸಂಘದ ಸದಸ್ಯತನ ನೋಂದಾಯಿಸಿಕೊಂಡು ಸಹಕರಿಸಬೇಕು ಎಂದು ಹೇಳಿದರು.
ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಮಾತನಾಡಿ, ನಮ್ಮ ಶಾಲಾ ದಿನಗಳಲ್ಲಿ ತಮಗೆ ಎಲ್ಲಾ ರೀತಿಯ ಸೌಲಭ್ಯಗಳು ಅನನುಕೂಲವಾಗುತ್ತಿತ್ತು. ಆದರೆ ಇಂದಿನ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತಿದ್ದರೂ ವಿದ್ಯಾರ್ಜನೆಗೆ ಹೆಚ್ಚು ಸಮಯವನ್ನು ನೀಡುತ್ತಿಲ್ಲ. ಶಿಕ್ಷಣದಿಂದ ವಂಚಿತರಾಗದಂತೆ ಬಂಟರ ಸಂಘ ನೀಡುತ್ತಿರುವ ಸೌಲಭ್ಯಗಳು ಸಮಾಜದ ವಿದ್ಯಾರ್ಥಿಗಳು ಪಡೆದು ಸಂಘದ ಸಮಾಜದ ಗೌರವವನ್ನು ವೃದ್ಧಿಸಬೇಕು ಎಂದು ಹೇಳಿದರು.
ಸಂಘದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ವಿ. ಶೆಟ್ಟಿ ಕಾಪು, ಸಂಚಾಲಕ ಕರ್ನಿರೆ ಶ್ರೀಧರ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಪಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶರ್ಮಿಳಾ ಎಸ್. ಶೆಟ್ಟಿ, ಕೋಶಾಧಿಕಾರಿ ವಿಜಯ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಗ್ರಿಗುತ್ತು ವಿವೇಕ್ ಶೆಟ್ಟಿ ಮತ್ತು ಪ್ರಾದೇಶಿಕ ಸಮಿತಿಯ ಸದಸ್ಯ ನೊಂದಣಿ ಸಮಿತಿಯ ಕಾರ್ಯಾಧ್ಯಕ್ಷ ಜಗನ್ನಾಥ ಡಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಿತರನ್ನು ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅವರು ಪರಿಚಯಿಸಿದರು. ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಬಳಿಕ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.