ಪುಣೆ: ಬಂಟರ ಸಂಘ ನಾಸಿಕ್ ಸಮಾಜ ಬಾಂಧವರಿಗಾಗಿ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟವು ಜ. 21 ರಂದು ನಾಸಿಕ್ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ನಡೆಯಿತು.
ಸಂಘದ ಅಧ್ಯಕ್ಷ ಎಂ. ಕರುಣಾಕರ ಶೆಟ್ಟಿ ಹಾಗೂ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕ್ರೀಡಾಕೂಟಕ್ಕೆ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭ ಸಂಘದ ಸ್ಥಾಪಕಾಧ್ಯಕ್ಷ ಲಿಂಗಪ್ಪ ಶೆಟ್ಟಿ, ಮಾಜಿ ಅಧ್ಯಕ್ಷರಾದ ರಾಜ್ ಗೋಪಾಲ್ ಶೆಟ್ಟಿ, ಉಪಾಧ್ಯಕ್ಷರಾದ ಶಶಿಕಾಂತ ಶೆಟ್ಟಿ ಮತ್ತು ಭಾಸ್ಕರ ಶೆಟ್ಟಿ ಎಡೆ¾àರು, ಗೌರವ ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಜನಸಂಪರ್ಕಾಧಿಕಾರಿ ರಾಮಚಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರೇಮಾ ಜೆ. ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ರಂಗನಾಥ ರೈ, ಕೆ. ಡಿ. ಆಳ್ವ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಎಂ. ಕರುಣಾಕರ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಇಲ್ಲಿನ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾ ಸಂಘದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಸಂಘದ ಒಗ್ಗಟ್ಟು ಹಾಗೂ ಅಭಿವೃದ್ಧಿಯಲ್ಲಿ ಸಮಾಜ ಬಾಂಧವರೆಲ್ಲರೂ ಸಹಕಾರ ನೀಡಬೇಕಾಗಿದೆ. ಆಧುನಕ ಜೀವನ ಶೈಲಿಯಲ್ಲಿ ನಮ್ಮ ಕೆಲಸದ ಒತ್ತಡ, ಸಮಯದ ಅಭಾವದೊಂದಿಗೆ ಮಾನಸಿಕ ಒತ್ತಡ ಹೆಚ್ಚಾಗಿದ್ದು ನಮ್ಮ ಶರೀರದ ಆರೋಗ್ಯದ ಕಡೆಗೆ ನಾವು ಗಮನ ಕೊಡಬೇಕಾಗಿದೆ. ದೈನಂದಿನ ಶಾರೀರಿಕ ವ್ಯಾಯಾಮ ನಮಗೆ ಅಗತ್ಯವಾಗಿದ್ದು ನಮ್ಮ ಸಂಘದ ಮೂಲಕ ಇಂತಹ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ನಾವೆಲ್ಲರೂ ಒಗ್ಗಟ್ಟಿನಿಂದ ಸಂತೋಷದಿಂದ ಬೆರೆತು ಒತ್ತಡ ಮುಕ್ತರಾಗಿ ಮಾನಸಿಕ ತಲ್ಲಣವನ್ನು ಕಡಿಮೆ ಗೊಳಿಸುವ ಮೂಲಕ ಆರೋಗ್ಯದ ನಮ್ಮ ಬಗ್ಗೆ ಜಾಗೃತಿ ಸಂಕಲ್ಪವನ್ನು ಮಾಡಬಹುದಾಗಿದೆ. ಸಂಘದ ಇಂದಿನ ಕ್ರೀಡಾಕೂಟದಲ್ಲಿ ಎಲ್ಲರೂ ಉತ್ಸಾಹದಿಂದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದರು. ನಂತರ ವಿವಿಧ ವಯೋಮಿತಿಗನುಗುಣವಾಗಿ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ವಿವಿಧ ಓಟದ ಸ್ಪರ್ಧೆಗಳು, ವಾಲಿಬಾಲ್, ಥ್ರೋ ಬಾಲ್, ಕ್ರಿಕೆಟ್, ಹಗ್ಗಜಗ್ಗಾಟದಂತಹ ಪಂದ್ಯಾಟಗಳು ರೋಮಾಂಚಕಾರಿಯಾಗಿ ನಡೆದು ಮಕ್ಕಳು, ಮಹಿಳೆಯರು, ಪುರುಷರೆಲ್ಲರೂ ಉತ್ಸಾಹದಿಂದ ಭಾಗವಹಿಸಿದರು.
ಬೆಳಗ್ಗಿನ ಉಪಾಹಾರವನ್ನು ಭಾಸ್ಕರ ಶೆಟ್ಟಿಯವರು ಪ್ರಾಯೋಜಿಸಿದರೆ, ಮಧ್ಯಾಹ್ನದ ಭೋಜನವನ್ನು ರಾಮಚಂದ್ರ ಶೆಟ್ಟಿ, ರವೀಂದ್ರ ಶೆಟ್ಟಿ, ಉಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ರತ್ನಾಕರ ಶೆಟ್ಟಿ ಹಾಗೂ ಪ್ರದೀಪ್ ಶೆಟ್ಟಿ ಅವರುಗಳ ಪ್ರಾಯೋಜಕತ್ವದಲ್ಲಿ ನಡೆಯಿತು. ಸಂಘದ ಪದಾಧಿಕಾರಿಗಳಾದ ಹರೀಶ್ ಆಳ್ವ, ಸುರೇಂದ್ರ ಶೆಟ್ಟಿ, ರವಿ ಶೆಟ್ಟಿ, ಗಣೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಉತ್ತಮ್ ಶೆಟ್ಟಿ, ಮಹಿಳಾ ವಿಭಾಗದ ಸದಸ್ಯರಾದ ಲಲಿತಾ ಕೆ. ಶೆಟ್ಟಿ, ವಿಲಾಸಿನಿ ಪಿ. ಶೆಟ್ಟಿ, ಶರಣ್ಯಾ ಎಂ. ಶೆಟ್ಟಿ, ಪ್ರಭಾ ಆರ್. ಶೆಟ್ಟಿ, ಶೋಭಾ ಎಚ್ ಶೆಟ್ಟಿ, ಸುನೀತಾ ಬಿ. ಶೆಟ್ಟಿ ಕ್ರೀಡಾಕೂಟದ ಯಶಸ್ಸಿಗೆ ಸಹಕರಿಸಿದರು. ಕ್ರೀಡಾಕೂಟದ ಯಶಸ್ವಿಗೆ ಸಂಘದ ಪದಾಧಿಕಾರಿಗಳಿಗೆ, ಮಹಿಳಾ ವಿಭಾಗದ ಸದಸ್ಯರಿಗೆ ಹಾಗೂ ಸೇರಿದ್ದ ನೂರಾರು ಸಂಖ್ಯೆಯ ಸಮಾಜ ಬಾಂಧವರಿಗೆ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಕೃತಜ್ಞತೆ ಸಲ್ಲಿಸಿ ವಂದಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.