ಮುಂಬಯಿ, ಜ. 8: ಬಂಟರ ಸಂಘ ಮುಂಬಯಿ ಇದರ ಯುವ ವಿಭಾಗವು ಸಂಘದ ಕುರ್ಲಾ – ಭಾಂಡೂಪ್ ಪ್ರಾದೇಶಿಕ ಸಮಿತಿಯ ಸಹಭಾಗಿತ್ವದೊಂದಿಗೆ ಆಯೋಜಿಸಿದ ಬಂಟ್ಸ್ ಪ್ರೀಮಿಯರ್ ಲೀಗ್-2021 ಟರ್ಪ್ ಕ್ರಿಕೆಟ್ ಪಂದ್ಯಾಟವು ಜ. 3ರಂದು ಬೆಳಗ್ಗೆ 8.30ರಿಂದ ಚೆಂಬೂರು ಸಂಭಾಜಿ ನಗರ ಶ್ರೀ ಸರಸ್ವತಿ ಸೊಸೈಟಿಯಲ್ಲಿರುವ ಚೆಂಬೂರು ಕರ್ನಾಟಕ\ ಹೈಸ್ಕೂಲ್ ಮೈದಾನದಲ್ಲಿ ಜರಗಿತು.
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮತ್ತು ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ, ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಈ ಪಂದ್ಯಾಟವನ್ನು ಬಂಟರ ಸಂಘ ಮುಂಬಯಿ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಜತೆ ಕೋಶಾಧಿಕಾರಿ ರತ್ನಾ ಪಿ. ಶೆಟ್ಟಿ, ಸಂಘದ ನೂತನ ಶಿಕ್ಷಣ ಯೋಜನ ಸಮಿತಿಯ ಕಾರ್ಯದರ್ಶಿ, ಶಿವಛತ್ರಪತಿ ಪ್ರಶಸ್ತಿ ಪುರಸ್ಕೃತ ಜಯ ಎ. ಶೆಟ್ಟಿ ಅವರು ಉದ್ಘಾಟಿಸಿದರು.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು. ಬಂಟ್ಸ್ ಪ್ರೀಮಿಯರ್ ಲೀಗ್ -2021 ಟರ್ಫ್ ಕ್ರಿಕೆಟ್ ಪಂದ್ಯಾಟದಲ್ಲಿ ಥಾಣೆ ಬಂಟ್ಸ್ ವಿನ್ನರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಬಂಟರ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ ದ್ವಿತೀಯ ಮತ್ತು ಬಂಟರ ಸಂಘದ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯು ತೃತೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಅತ್ಯುತ್ತಮ ಆಟಗಾರನಾಗಿ ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿಯ ಶ್ರೇಯಾಸ್ ಶೆಟ್ಟಿ, ಅತ್ಯುತ್ತಮ ಬೌಲರ್ ಆಗಿ ಥಾಣೆ ಬಂಟ್ಸ್‌ನ ಹರ್ಷಿತ್ ಶೆಟ್ಟಿ, ಬೆಸ್ಟ್ ವಿಕೆಟ್ ಕೀಪರ್ ಆಗಿ ಥಾಣೆ ಬಂಟ್ಸ್‌ನ ವಿನಿತ್ ಶೆಟ್ಟಿ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮೀರಾ-ಭಾಯಂದರ್ ತಂಡದ ವಿನಯ್ ಶೆಟ್ಟಿ ಅವರು ಪಡೆದರು.
ಪಂದ್ಯಾಟದಲ್ಲಿ ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿ, ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ಭಿವಂಡಿ – ಕಲ್ಯಾಣ್ – ಬದ್ಲಾಪುರ ಪ್ರಾದೇಶಿಕ ಸಮಿತಿ, ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿ, ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಸಿಟಿ ಪ್ರಾದೇಶಿಕ ಸಮಿತಿ, ಕುರ್ಲಾ-ಭಾಂಡೂಪ್ ಪ್ರಾದೇಶಿಕ ಸಮಿತಿ, ಮುಲುಂಡ್ ಬಂಟ್ಸ್, ಥಾಣೆ ಬಂಟ್ಸ್, ಬೋಂಬೆ ಬಂಟ್ಸ್ ಅಸೋಸಿಯೇಶನ್, ಜವಾಬ್ ಹಾಗೂ ಸಂಘದ ಯುವ ವಿಭಾಗದ ಸದಸ್ಯರ ತಂಡಗಳು ಭಾಗವಹಿಸಿದ್ದವು.
ಪಂದ್ಯಾಟವು ಕೋವಿಡ್ ಮಾರ್ಗಸೂಚಿಗಳ ನಿಯಮಗಳೊಂದಿಗೆ ನಡೆಯಿತು. ತುಳು, ಕನ್ನಡಿ ಗರು, ಸಮಾಜ ಬಾಂಧವರು ಪಾಲ್ಗೊಂಡು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು. ಬಂಟರ ಸಂಘ ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸಾಗರ್ ದಿವಾಕರ್ ಶೆಟ್ಟಿ, ಕಾರ್ಯದರ್ಶಿ ಅನುಶ್ರೀ ಶೆಟ್ಟಿ, ಕೋಶಾಧಿಕಾರಿ ನೀಲೇಶ್ ಸದಾನಂದ ಶೆಟ್ಟಿ, ಜತೆ ಕಾರ್ಯದರ್ಶಿ ವಿಕಾಸ್ ವಾಮನ್ ಶೆಟ್ಟಿ, ಜತೆ ಕೋಶಾಧಿಕಾರಿ ಸವಿನ್ ಜೆ. ಶೆಟ್ಟಿ ಮತ್ತು ಸದಸ್ಯರು ಪಾಲ್ಗೊಂಡು ಪಂದ್ಯಾಟದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು