Advertisement

ಬಂಟ್ಸ್‌ ಸೆಂಟರ್‌: ಇಂಡಸ್ಟ್ರೀಸ್‌ &ಪ್ರೊಫೆಶನಲ್‌ ಮೀಟ್‌ 

03:50 PM Oct 12, 2017 | |

 ನವಿಮುಂಬಯಿ: ಬಂಟ್ಸ್‌ ಸಮಾಜ ಬಂಧುಗಳು ಯಾವ ಕ್ಷೇತ್ರದಲ್ಲಿದ್ದರೂ ಕೂಡಾ ಆಯಾಯ ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿ ಅದರಲ್ಲಿ ಯಶಸ್ವಿಯಾಗುತ್ತಾರೆ. ಇಂತಹ ಗುಣ ಅವರ ರಕ್ತದಲ್ಲಿ ಅಡಗಿದೆ. ಪ್ರತಿಯೊಂದು ಉದ್ದಿಮೆ ಮತ್ತು ಉದ್ಯೋಗದಲ್ಲಿ ಬಂಟರಿದ್ದು, ಅವರಿಗೆ ಅವರದೇ ಆದ ಗೌರವವಿದೆ. ಇದನ್ನು ಬಂಟರು ಸರಿಯಾಗಿ ಅರ್ಥೈಯಿಸಿಕೊಂಡು ಕಾರ್ಯನಿರ್ವಹಿಸುತ್ತಾರೆ. 35 ವರ್ಷಗಳ ಇತಿಹಾಸವನ್ನು ಹೊಂದಿರುವ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನನ್ನು ಉತ್ತಮ ಸ್ಥಾನಮಾನವಿರುವ ನಮ್ಮ ಹಿರಿಯರು ಸದುದ್ಧೇಶವನ್ನಿಟ್ಟುಕೊಂಡು ಸ್ಥಾಪಿಸಿದ್ದಾರೆ. ಅವರ ಉದ್ಧೇಶ ಸಮಾಜದ ಪ್ರಗತಿಯಾಗಿದೆ. ಇವರ ಮುಂದಾಲೋಚನೆ ಪ್ರಶಂಸನೀಯ. ಇಂದು ಈ ಸಂಸ್ಥೆ ಬೆಳೆದು ಸಮಾಜಪರ ಕಾರ್ಯದಲ್ಲಿ ತೊಡಗಿರುವುದು ಅಭಿನಂದನೀಯವಾಗಿದೆ ಎಂದು ಕರ್ನಾಟಕ ಲೋಕಾಯುಕ್ತ ಜಸ್ಟೀಸ್‌ ಪಿ. ವಿಶ್ವನಾಥ ಶೆಟ್ಟಿ ಅವರು ಹೇಳಿದರು.

Advertisement

ಅ.8 ರಂದು ನವಿಮುಂಬಯಿ ಸಾನಾ³ಡಾ ಬಂಟ್ಸ್‌ ಸೆಂಟರ್‌ನಲ್ಲಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಆಯೋಜಿಸಿದ್ದ ಬಂಟ್ಸ್‌ ಇಂಡಸ್ಟ್ರೀಸ್‌ ಆ್ಯಂಡ್‌ ಪ್ರೊಫೆಶನಲ್‌ ಮೀಟ್‌ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಬಂಟ್ಸ್‌ ಸಮಾಜವು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದೆ. ಆದರೆ ಐಎಎಸ್‌, ಐಪಿಎಸ್‌ನಂತಹ ಸರಕಾರದ ಉನ್ನತ ಉದ್ಯೋಗಗಳಲ್ಲಿ ನಮ್ಮ ಸಮಾಜದವರ ಸಂಖ್ಯೆ ಕಡಿಮೆಯಿದೆ. ಸರಕಾರದ ಉನ್ನತ ಉದ್ಯೋಗದಲ್ಲಿ ಸಮಾಜ ಬಾಂಧವರು ಇದ್ದರೆ ಅದರ ಪ್ರಯೋಜನವು ಸಮಾಜಕ್ಕೆ ದೊರೆಯುತ್ತದೆ. ಸಮಾಜದ ಏಳ್ಗೆಗೆ ಪೂರಕವಾಗುತ್ತದೆ. ಸಮಾಜದ ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಹಾಗೂ ಉನ್ನತ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡ ಮಂಗಳೂರಿನ ಪ್ರಸಿದ್ಧ ವೈದ್ಯ ಡಾ| ಹಂಸರಾಜ್‌ ಆಳ್ವ ಅವರು ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಯಶಸ್ಸು ದೊರೆಯುತ್ತದೆ. ನಮ್ಮ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅವರಿಗೆ ವೈದ್ಯಕೀಯ ನೆರವು ಸಿಗುವುದು ತುಂಬಾ ಕಷ್ಟವಾಗುತ್ತಿದೆ. ಸಂಘ-ಸಂಸ್ಥೆಗಳು ಶ್ರಮಿಸಿ ಸಮಾಜದ ಕೆಲವೊಂದು ದೊಡ್ಡ ಆಸ್ಪತ್ರೆಗಳ ಸಂಯೋಗದಿಂದ ಸಾಮೂಹಿಕ ವಿಮಾ ಯೋಜನೆಗಳಂತಹ ಯೋಜನೆಗಳನ್ನು ರೂಪಿಸಿ ಆ ಮೂಲಕ ಅವರಿಗೆ ವೈದ್ಯಕೀಯ ನೆರವನ್ನು ನೀಡಬಹುದು. ಇದಕ್ಕೆ ನಾನು ಸಹಕರಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.

ಶೈಕ್ಷಣಿಕ ಕ್ಷೇತ್ರದ ಸಾಧಕ ಡಾ| ಡಿ. ಜಿ. ಶೆಟ್ಟಿ ಅವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಮಾಜದ ಮಕ್ಕಳು ಉನ್ನತ ವಿದ್ಯೆಯನ್ನು ಪಡೆಯುವಂತೆ ನೋಡಿಕೊಳ್ಳಬೇಕು. ಉತ್ತಮ ವಿದ್ಯೆ ಹಾಗೂ ಮಾರ್ಗದರ್ಶನ ದೊರೆತರೆ ಮುಂದೆ ಅವರು ಯಶಸ್ವಿಯಾಗುತ್ತಾರೆ. ಮಕ್ಕಳು ಯಶಸ್ವಿಯಾದರೆ ಸಮಾಜ ಬೆಳೆಯುತ್ತದೆ ಎಂದರು.

ಮುಂಬಯಿ ಉದ್ಯಮಿ ಕೆ. ಎಂ. ಶೆಟ್ಟಿ ಅವರು ಮಾತನಾಡಿ, ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ನಾವೆಷ್ಟು ಕಲಿತರೂ ನಮ್ಮ ಕಠಿನ ಪರಿಶ್ರಮವೇ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಸಾಧಿಸುವ ಛಲ ಹಾಗೂ ಗುರಿಮುಟ್ಟುವ ಪ್ರಯತ್ನವಿದ್ದರೆ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಮೂರು ರೂ. ದಿನ ಸಂಬಳಕ್ಕೆ ದುಡಿದ ನಾನು ಇಂದು ಒಂದು ಯಶಸ್ವಿ ಉದ್ಯಮಿಯಾಗಿ ಉದ್ಯಮಕ್ಷೇತ್ರದಲ್ಲಿ ಮಿಂಚುವಂತಾಗಲು ನನ್ನ ಕಠಿನ ಪರಿಶ್ರಮವೆ ಕಾರಣವಾಗಿದೆ ಎಂದರು.

Advertisement

ಮುಂಬಯಿ ಹೊಟೇಲ್‌ ಉದ್ಯಮಿ ವಿರಾರ್‌ ಶಂಕರ್‌ ಶೆಟ್ಟಿ ಅವರು ಮಾತನಾಡಿ, ಬಂಟರು ಆರ್ಥಿಕವಾಗಿ ಬಲಗೊಳ್ಳಲು ಹೊಟೇಲ್‌ ಉದ್ಯಮದ ಕೊಡುಗೆ ಅಪಾರವಾಗಿದೆ. ಪ್ರಾರಂಭದಲ್ಲಿ ಬಂಟರು ಹೊಟೇಲ್‌ ಉದ್ಯಮದಲ್ಲಿ ತೊಡಗಿಸಿಕೊಂಡು ಆನಂತರ ಇತರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಹೊಟೇಲ್‌ ಉದ್ಯಮಿಗಳು ದಾನಿಗಳಾಗಿದ್ದಾರೆ. ಮಕ್ಕಳನ್ನು ಹೊಟೇಲ್‌ ಉದ್ಯಮದತ್ತ ತೊಡಗಿಸಿಕೊಳ್ಳಲು ಹಿಂಜರಿಯುವುದು ಸರಿಯಲ್ಲ. ಹೊಟೇಲ್‌ ಉದ್ಯಮಕ್ಕೆ  ಭವಿಷ್ಯವಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಉಪ್ಪೂರು ಶೇಖರ್‌ ಶೆಟ್ಟಿ ಅವರು ಮಾತನಾಡಿ, ತನ್ನ ಹಲವು ದಿನಗಳ ಕನಸು ಇದಾಗಿತ್ತು. ಬಂಟ್ಸ್‌ ಸಮಾಜದಲ್ಲಿ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ವಿಯಾದ ಗಣ್ಯರು ಇದ್ದಾರೆ. ಅವರನ್ನೆಲ್ಲಾ ಒಂದೇ ವೇದಿಕೆಗೆ ತಂದು ಅವರ ಅನುಭವದ ಮಾತುಗಳನ್ನು ಸಮಾಜದ ಇತರರಿಗೆ ತಿಳಿಸಬೇಕು. ಇದರಿಂದ ಸಮಾಜಕ್ಕೆ ಪ್ರಯೋಜನವಾಗಬೇಕು. ಇಂದಿನ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಸ್ವಾಮೀಜಿ ಅವರ ಉಪಸ್ಥಿತಿಯಿಂದ ಉತ್ತಮ ಸಂದೇಶಗಳನ್ನು ಒದಗಿಸಿದಂತಾಗಿದೆ ಎಂದರು.

ಪ್ರಾರಂಭದಲ್ಲಿ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ವಂದಿಸಿದರು. ಅತಿಥಿಯಾಗಿ ಪಾಲ್ಗೊಂಡು ಉದ್ಯಮಿ ರಘುರಾಮ ಕೆ ಶೆಟ್ಟಿ ಅವರು ಅವೆನ್ಯೂ ಉಪಸ್ಥಿತರಿದ್ದರು. ಪತ್ರಕರ್ತ ದಯಾಸಾಗರ್‌ ಚೌಟ ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಸತೀಶ್‌ ಶೆಟ್ಟಿ ಪ್ರಾರ್ಥನೆಗೈದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ಸ್ಪರ್ಧೆ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಜತೆ ಕಾರ್ಯದರ್ಶಿ ಕರುಣಾಕರ ಎಂ. ಶೆಟ್ಟಿ, ಸಂಚಾಲಕ ಸುರೇಶ್‌ ಶೆಟ್ಟಿ ಯೆಯ್ನಾಡಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಜೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವೈಶಾಲಿ ಎ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ದಯಾನಂದ ಕತ್ತಲ್‌ಸಾರ್‌ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. 

ನಮ್ಮ ಪುರಾಣ ಹಾಗೂ ಭಾರತೀಯ ಸಂಸ್ಕೃತಿಯು ವಿಜ್ಞಾನದ ಮೂಲವಾಗಿದೆ. ಇಂದು ಸಂಶೋಧನೆಗಳ ಮೂಲಕ ವಿದೇಶಿಯರು ತಿಳಿಸುವ ವಿಜ್ಞಾನವನ್ನು ಸಾವಿರಾರು ವರ್ಷಗಳ ಹಿಂದೆಯೇ ಭಾರತೀಯ ಪುರಾಣಗಳಲ್ಲಿ ಉಲ್ಲೇಖೀಸಲಾಗಿದೆ. ಬಂಟರು ಪ್ರತಿಭಾವಂತರು. ಪ್ರತಿಯೊಂದು ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡಿದವರು. ಅವರ ಕಠಿನ ಪರಿಶ್ರಮವೇ ಇದಕ್ಕೆ ಕಾರಣ. ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸವನ್ನು ನೀಡುವಲ್ಲಿ ಅವರು ಯಶಸ್ಸಾಗಿದ್ದಾರೆ. ಆದರೆ ನಮ್ಮ ಮಕ್ಕಳಿಗೆ ನಮ್ಮ ಸಮಾಜ ಹಾಗೂ ಮೂಲಸ್ಥಾನಗಳ ಬಗ್ಗೆ ಅರಿವನ್ನು ಮೂಡಿಸಬೇಕು. ಇದಕ್ಕಾಗಿ ಬಾಕೂìರಿನಲ್ಲಿ ನಾವು ನಮ್ಮ ಮೂಲ ದೈವಗಳಿರುವ ದೈವಸ್ಥಾನಗಳನ್ನು ನಿರ್ಮಿಸಿದ್ದೇವೆ. ಮುಂದಿನ ಮಕ್ಕಳಿಗೆ ಇದನ್ನು ತಿಳಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಇಲ್ಲಿಗೆ ಭೇಟಿ ನೀಡಬೇಕು. 
– ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಗಳು, ಬಾಕೂìರು ಸಂಸ್ಥಾನ.
ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next