ಬೆಳ್ಮಣ್: ಬಂಟರು ಹುಟ್ಟಿನಿಂದ ನಾಯಕತ್ವದ ಗುಣವನ್ನು ಮೈಗೂಡಿಸಿಕೊಂಡವರಾಗಿದ್ದು ಪ್ರತಿಯೊಂದು ಕ್ಷೇತ್ರಗಳಲ್ಲಿ ಘನತೆ ಗೌರವ ಯುತ ಸ್ಥಾನಗಳನ್ನು ಹೊಂದಿದ್ದಾರೆ.ಇದೀಗ ನಾವು ಹಲವಾರು ಕಾರಣಗಳಿಗಾಗಿ ಸಂಘಟಿತರಾಗಬೇಕಾದ ಅನಿವಾರ್ಯತೆಯೊದಗಿದೆಯೆಂದು ಕಾರ್ಕಳ ತಾಲೂಕು ಬಂಟರ ಸಂಘಗಳ ಸಂಚಾಲಕ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಹೇಳಿದರು.
ಅವರು ರವಿವಾರ ಕಾರ್ಕಳ ಸ್ವಾಗತ್ ಹೋಟೆಲ್‌ನ ಸಭಾಗೃಹದಲ್ಲಿ ನಡೆದ ಕಾರ್ಕಳ ತಾಲೂಕಿನ ಬಂಟ ಮುಖಂಡರ ಸಮಾಲೋಚನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ನಾಯಕ ನೀರೆ ಕೃಷ್ಣ ಶೆಟ್ಟಿ ಮಾತನಾಡಿ,ಬಂಟ ಸಮಾಜದ ಹಿರಿಯರು ನಮ್ಮ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಬೇಕಾದ ಅನಿವಾರ್ಯತೆಯ ಜತೆಗೆ ಅದನ್ನು ಮುಂದುವರಿಸುವ ಅಗತ್ಯವಿದೆಯೆಂದರಲ್ಲದೆ ಇತರರಿಗೆ ಆದರ್ಶ ಹಾಗೂ ಮಾದರಿಯಾಗಿರುವ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಬೇಕಾದ ಕರ್ತವ್ಯವೂ ನಮ್ಮದಾಗಿದೆಯೆಂದರು.
ಕಾರ್ಕಳ ಬಂಟರ ಸಂಘದ ಮಹಿಳಾ ವಿಭಾಗದ ಆಧ್ಯಕ್ಷೆ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ,ಕಾರ್ಕಳ ತಾಲೂಕಿನ ಇತರ ವಲಯಗಳ ನಾಯಕರುಗಳಾದ ಮಣಿರಾಜ ಶೆಟ್ಟಿ,ಸುನಿಲ್ ಕುಮಾರ್ ಶೆಟ್ಟಿ, ಮುನಿಯಾಲು ಉದಯ ಶೆಟ್ಟಿ, ಮಿಯ್ನಾರು ಶ್ಯಾಮ ಎಂ.ಶೆಟ್ಟಿ,ದಿವಾಕರ ಶೆಟ್ಟಿ, ಕೃಷ್ಣರಾಜ ಶೆಟ್ಟಿ,, ಭೂತಗುಂಡಿ ಕರುಣಾಕರ ಶೆಟ್ಟಿ,ಚೇತನ್ ಶೆಟ್ಟಿ, ಬೈಲೂರು ಮಂಜುನಾಥ ಶೆಟ್ಟಿ, ಪ್ರಶಾಂತ ಶೆಟ್ಟಿ ಮತ್ತಿತರರಿದ್ದರು. ಕಾರ್ಕಳ ತಾಲೂಕಿನ ವಿವಿಧೆಡೆಗಳಿಂದ ಆಹ್ವಾನಿತ ಬಂಟ ಪ್ರಮುಖರು ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜಿನ ಉಪನ್ಯಾಸಕ ಕಾರ್ಕಳ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.