ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ 2023-24 ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವ ಮತ್ತು ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೆ ವರ್ಣೋತ್ಸವ ಸಮಾರಂಭಗಳು ಡಿ.27ರಿಂದ 30 ರವರೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನ ಕುಮಾರ್ ಹೇಳಿದರು.
ಅವರು ಡಿ.23ರಂದು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ವಿದ್ಯಾಸಂಸ್ಥೆಯು ಹಂತ ಹಂತವಾಗಿ ಬೆಳವಣಿಗೆ ದಾಖಲಿಸುತ್ತಿದ್ದು, ಮುಂದಿನ 4-5 ವರ್ಷಗಳಲ್ಲಿ ಸೋದೆ ಶ್ರೀಪಾದರ ಮಧ್ವ ವಿಶ್ವ ವಿದ್ಯಾಲಯ ಕನಸನ್ನು ನನಸು ಮಾಡುವತ್ತ ದಾಪುಗಾಲಿಡುತ್ತಿದೆ. ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಗೊಳ್ಳಲಿರುವ ಎಂ.ಬಿ.ಎ ತರಗತಿಗಳಿಗೆ ಬೇಕಾದ ಉತ್ತಮ ಅಧ್ಯಾಪಕ ವೃಂದವು ಪಾಠಗಳ ತಯಾರಿ ಮಾಡಿಕೊಳ್ಳುತ್ತಿದೆ. ಸ್ನಾತಕೋತ್ತರ ಪದವಿಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಸಮರ್ಪಕವಾಗಿ ನೆರವೇರಿದ್ದು, ಕೆಇಎ ಮೂಲಕ ವಿದ್ಯಾರ್ಥಿಗಳ ಸೇರ್ಪಡೆಗೆ ಕಾಯಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮಗಳು
ಡಿ.27ರಂದು ವಿದ್ಯಾರ್ಥಿಗಳಿಗಾಗಿ ತಾಂತ್ರಿಕ-ಸಾಂಸ್ಕೃತಿಕ ಸ್ಪರ್ಧೆ ವರ್ಣೋತ್ಸವ 2023 ಆಯೋಜಿಸಲಾಗಿದ್ದು , ಬೆಳಗ್ಗೆ 10.00ಕ್ಕೆ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ವಿದ್ಯಾಸಂಸ್ಥೆಯ ನಿಯಮಾವಳಿಯಂತೆ ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಶ್ರೀರಕ್ಷಾ ಆಚಾರ್ಯ ಮತ್ತು ಅಭಿನವ ಕರಬ ಅತಿಥಿಗಳಾಗಿ ಭಾಗವಹಿಸಲಿದ್ದು, ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ನಡೆಯುವ ಸ್ಪರ್ಧೆಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆಯ ವಿವಿಧ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪಕ್ಕದ ರಾಜ್ಯ/ಜಿಲ್ಲೆಯ ತಾಂತ್ರಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿವಿಧ ತಾಂತ್ರಿಕ ಸ್ಪರ್ಧೆಗಳ ಜತೆಗೆ ನೃತ್ಯ, ಗಾಯನ, ಫೋಟೋಗ್ರಫಿ, ಚಿತ್ರಕಲೆ, ಮುಖವರ್ಣ ಸ್ಪರ್ಧೆ ನಡೆಯಲಿದ್ದು, ಸಂಜೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಡಿ.28ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರು ಟ್ಯಾಲೆಂಟ್ ಎಕ್ವಿಸಿಶನ್‌ನ ಸಹನಿರ್ದೇಶಕ ವಿನಯ್ ವೈಷ್ಣವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶ್ರೀ ಸೋದೆ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದಾರೆ.ಸಂಜೆ ಕಾಲೇಜಿನ ಯಕ್ಷಗಾನ ಸಂಘಯಕ್ಷಸಿಂಚನದ ವಿದ್ಯಾರ್ಥಿಗಳಿಂದ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿ.29ರಂದು ಮಧ್ಯಾಹ್ನ 3.00ಗಂಟೆಗೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಬೆಂಗಳೂರು ಏಸ್ ಮೈಕ್ರೋಮೆಟಿಕ್ ಮ್ಯಾನುಫ್ಯಾಕ್ಚರಿಂಗ್ ಇಂಟೆಲಿಜೆನ್ಸ್ ಟೆಕ್ನೋಲೊಜೀಸ್‌ನ ನಿರ್ದೇಶಕ ಚಂದ್ರಶೇಖರ್ ಭಾರತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಂಜೆ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಡಿ.30ರಂದು ಬೆಳಗ್ಗೆ 10.00ರಿಂದ ಆಟೋ ಎಕ್ಸ್‌ಪೋ ದುಬಾರಿ ವಾಹನಗಳ ಪ್ರದರ್ಶನ ಮತ್ತು ಹಳೆ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ.ಸಂಜೆ 7ಗಂಟೆಗೆ ಪ್ರತಿಷ್ಠಿತ ಮ್ಯೂಸಿಕಲ್ ಬ್ಯಾಂಡ್ ಸಂಸ್ಥೆ ಮೈಸೂರು ಎಕ್ಸಪ್ರಸ್ ತಂಡದವರಿಂದ ಸಂಗೀತ ರಸಮಂಜರಿ ಮನೋರಂಜನಾ ಕಾರ್ಯಕ್ರಮ ಜರಗಲಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ| ಗಣೇಶ್ ಐತಾಳ್,ಎಂಬಿಎ ವಿಭಾಗದ ನಿರ್ದೆಶಕ ಡಾ| ಸೂರಜ್ ನೊರೊನ್ಹಾ ಹಾಗೂ ಕಾರ್ಯಕ್ರಮ ಸಂಯೋಜಕರಾದ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ| ರವಿಪ್ರಭಾ ಮತ್ತು ರೋಶನ್ ಪತ್ರಿಕಾಗೋಷ್ಠಿಯಲ್ಲಿದ್ದರು.