ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಸ್ನೇಹ ಸಮ್ಮಿಲನ ಸಮಾರಂಭವು ಎ. 14ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿತು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಂಬಯಿಯ ಹೆಸರಾಂತ ಹೊಟೇಲ್ ಉದ್ಯಮಿ ರಮಾನಾಥ ಎಸ್. ಪಯ್ಯಡೆ ಸ್ಮರಣಾರ್ಥ ಡಾ| ಪಿ. ವಿ. ಶೆಟ್ಟಿ ಮತ್ತು ದಿವಂಗತರ ಕುಟುಂಬಸ್ಥರ ಪ್ರಾಯೋಜಕತ್ವದ ಅತ್ಯುತ್ತುಮ ಬಂಟ ಸಾಧಕ -2017 ಪ್ರಶಸ್ತಿಯನ್ನು ಈ ಬಾರಿ ಎಂ. ಆರ್. ಜಿ. ಹಾಸ್ಪಿಟಾಲಿಟಿ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ, ಸಮಾಜ ಸೇವಕ ಕೆ. ಪ್ರಕಾಶ್ ಶೆಟ್ಟಿ ಅವರಿಗೆ ಡಾ| ಪಿ. ವಿ. ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಹಾಗೂ ಶೇಫಾಲಿ ಹೆಗ್ಡೆ ರೈ ಸ್ಮರಣಾರ್ಥ ಅವರ ಮಾತಾಪಿತರಾದ ಡಾ| ಮನೋಹರ್ ಹೆಗ್ಡೆ, ಆಶಾ ಮನೋಹರ್ ಹೆಗ್ಡೆ ಅವರ ಪ್ರಾಯೋಜಕತ್ವದ “ಅತ್ಯುತ್ತಮ ಬಂಟ ಸಾಧಕಿ -2017 ಪ್ರಶಸ್ತಿ’ಯನ್ನು ಈ ಬಾರಿ ಮೇಜರ್ ಪ್ರಮೀಳಾ ಆಳ್ವ ಅವರಿಗೆ ಪ್ರದಾನಿಸಲಾಯಿತು. ಪ್ರಶಸ್ತಿಯು ಶಾಲು, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನೊಳಗೊಂಡಿತ್ತು. ಸಂಘದ ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಆಶಾ ಎಸ್. ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿಸಿದರು.
ಪ್ರಶಸ್ತಿ ಪುರಸ್ಕೃತ ಕೆ. ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, ನನ್ನ ಜೀವನದಲ್ಲಿ ಸದಾ ನೆನಪಿಡುವಂತಹ ಅವಿಸ್ಮರಣೀಯ ಸಮ್ಮಾನ ಹಾಗೂ ಪ್ರಶಸ್ತಿ ಇದಾಗಿದೆ. ಇದರಿಂದಾಗಿ ನನ್ನ ಜೀವನ ಸಾರ್ಥಕವೆನಿಸಿದೆ. ಮಗುವಿಗೆ ತಾಯಿಯ ಎದೆ ಹಾಲಿಗಿಂತ ಮಿಗಿಲಾದ ಅಮೃತ ಇನ್ನೊಂದಿಲ್ಲ. ತಾಯಿ ಮಗುವಿನ ಕರುಳಿನ ಸಂಬಂಧ, ಪ್ರೀತಿ ಅತೀ ಪ್ರಮುಖವಾದುದು. ಅಂತೆಯೇ ಬಂಟ ಸಮುದಾಯ ಅದರಲ್ಲೂ ಬಂಟರ ಸಂಘ ಮುಂಬಯಿ ನನ್ನನ್ನು ಮಗುವಿನಂತೆ ಪ್ರೀತಿಯಿಂದ ಎತ್ತಿ ಮುದ್ದಾಡಿ, ಅಮೃತಪಾನ ನೀಡಿದೆ. ನನ್ನ ಬದುಕಿನಲ್ಲಿ ದೊರೆತ ಎಲ್ಲಾ ಪ್ರಶಸ್ತಿ-ಸಮ್ಮಾನಗಳಿಗಿಂತ ನೀವು ನೀಡಿದ ಸಮ್ಮಾನಕ್ಕೆ ಹೆಚ್ಚಿನ ಮಹತ್ವವಿದೆ. ಪರದೇಶಕ್ಕೆ ಹೋದರೂ ಅಮ್ಮನ ಊಟಕ್ಕಿಂತ ರುಚಿಕರವಾದುದು ಬೇರೊಂದಿಲ್ಲ. ನನ್ನ ಸಾಧನೆಗಿಂತಲೂ ನಿಮ್ಮ ಸೌಜನ್ಯ, ದೊಡ್ಡತನವನ್ನು ನಾನೆಂದಿಗೂ ಮರೆಯಲಾರೆ. ನಮ್ಮ ಪರಿಶ್ರಮ, ಪ್ರಾಮಾಣಿಕತೆ ಇಂದು ನಮ್ಮನ್ನು ಉಳಿಸಿ-ಬೆಳೆಸಿದೆ. ಊರಿನಿಂದ ಪರವೂರಿಗೆ ಬಂದಿರುವುದರಿಂದಲೇ ನಾವು ಬಂಟರೆಂದು ತಲೆ ಎತ್ತಲು ಸಾಧ್ಯವಾಯಿತು. ಪರಿಶ್ರಮ, ಛಲ, ವಿಧೇಯತೆಗಳನ್ನು ಮೈಗೂಡಿಸಿಕೊಂಡು ಯುವಜನತೆ ಸಮಾಜ ಸೇವೆಯಲ್ಲಿ ತೊಡಗಬೇಕು ಎಂದರು.
ಇನ್ನೋರ್ವ ಪ್ರಶಸ್ತಿ ವಿಜೇತೆ, ಮೇಜರ್ ಪ್ರಮೀಳಾ ಆಳ್ವ ಅವರು ಮಾತನಾಡಿ, ಬಾಲ್ಯದಿಂದಲೂ ನನಗೆ ಏನಾದರೂ ವಿಶೇಷ ಸಾಧನೆ ಮಾಡಬೇಕೆನ್ನುವ ಆಶಯವಿತ್ತು. ಕೃಷಿಕ ಕುಟುಂಬದಲ್ಲಿ ಜನಿಸಿದ ನಾನು ಕನ್ನಡ ಮಾಧ್ಯಮದಲ್ಲಿ ಓದು ಮುಂದುವರಿಸಿದೆ. ಮಾವ ಜಯರಾಮ ನೋಂಡ ಮಿಲಿಟರಿಯಲ್ಲಿದ್ದುದರಿಂದ ಅವರ ಸಲಹೆ ಪಡೆದು ಆರ್ಮಿಯನ್ನು ಸೇರಿಕೊಂಡು ಮೇಜರ್ ಆದೆ. ಬಂಟರು ಈ ಸೇವೆಯಲ್ಲಿ ಕೇವಲ ಬೆರಳೆಣಿಕೆಯಷ್ಟಿರುವುದು ವಿಷಾದನೀಯ. ಸೈನಿಕರಾಗಿ ಸೇರುವುದಕ್ಕೆ ಭಯಪಡುವ ಅಗತ್ಯವಿಲ್ಲ. ಮಾನಸಿಕ ಸ್ಥಿರತೆ ಈ ಸೇವೆಗೆ ಅತೀ ಅಗತ್ಯ ಎಂದರು.
ಸಮ್ಮಾನ ಕಾರ್ಯಕ್ರಮದಲ್ಲಿ ಮೇಜರ್ ಪ್ರಮೀಳಾ ಆಳ್ವ ಅವರ ತಾಯಿ, ಪುತ್ರಿ ಉಪಸ್ಥಿತರಿದ್ದರು. ಪ್ರಶಸ್ತಿಯ ಬಗ್ಗೆ ಆಶಾ ಮನೋಹರ್ ಹೆಗ್ಡೆ ಮಾತನಾಡಿದರು. ಸಮಾರಂಭದಲ್ಲಿ ಸಂಘದ ಹಿರಿಯ ಮುತ್ಸದ್ದಿ, ಸಂಘದ ವಿಶ್ವಸ್ತ, ಮಾಜಿ ಅಧ್ಯಕ್ಷ ಎಂ. ಡಿ. ಶೆಟ್ಟಿ, ಮುಂಬಯಿ ಹೈಕೋರ್ಟ್ ನ ನ್ಯಾಯವಾದಿ ಎಂ. ಸಿ. ಹೆಗ್ಡೆ, ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮಾಜಿ ಕಾರ್ಯಾಧ್ಯಕ್ಷ ಸೀತಾರಾಮ ಎಂ. ಶೆಟ್ಟಿ ಕಡಂದಲೆ, ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಎಂ. ಶೆಟ್ಟಿ, ಮೀರಾರೋಡ್ ದೀಪಕ್ ಆಸ್ಪತ್ರೆಯ ಆಥೋì ಸರ್ಜನ್ ಡಾ| ಕೆ. ಭಾಸ್ಕರ ಶೆಟ್ಟಿ, ಇಂಡಿಗೋ ಏರ್‌ಲೈನ್ಸ್‌ನ ಕಮಾಂಡರ್ ಕೃತಿ ಶೆಟ್ಟಿ, ಪ್ರಶಸ್ತಿ ಪುರಸ್ಕೃತರಾದ ಎಂ. ಆರ್. ಜಿ. ಹಾಸ್ಪಿಟಾಲಿಟಿ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಇಂಡಿಯನ್ ಆರ್ಮ್ಡ್ ಫೋರ್ಸ್ ಸದಸ್ಯೆ ಮೇಜರ್ ಪ್ರಮೀಳಾ ಆಳ್ವ, ಸಂಘದ ಉಪಾಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಗೌರವ ಪ್ರಧಾನ ಕಾರ್ಯದರ್ಶಿ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಐ. ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಜತೆ ಕೋಶಾಧಿಕಾರಿ ಮಹೇಶ್ ಎಸ್. ಶೆಟ್ಟಿ, ಪೊವಾಯಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಯರಾಮ ಎನ್. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿವೇಕ್ ವಿ. ಶೆಟ್ಟಿ, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.