ಮೂಡಿಗೆರೆ: 2019 ರಲ್ಲಿ ನೆರೆ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬಂಕೇನಹಳ್ಳಿ ಸೇತುವೆಯ ನೂತನ ಸೇತುವೆ ಕಾಮಗಾರಿ ಆರಂಭವಾಗಿದೆ.
ಜೆಸಿಬಿ ಯಂತ್ರಗಳ ಮೂಲಕ ಹಳೆಯ ಸೇತುವೆ ತೆರವುಗೊಳಿಸಲಾಗುತ್ತಿದ್ದು ಸೇತುವೆ ಕಾಮಗಾರಿ ಬಿರುಸಿನಿಂದ ಸಾಗಿದೆ.
2019 ರಲ್ಲಿ ಸುರಿದ ಬಾರಿ ಮಳೆಯಿಂದಾಗಿ ಬಂಕೇನಹಳ್ಳಿ ಸೇತುವೆ ಕೊಚ್ಚಿ ಹೋಗಿ ಬಂಕೇನಹಳ್ಳಿ, ಕೂಡಳ್ಳಿ, ಚೇಗು ಸೇರಿದಂತೆ ಹತ್ತಾರು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿತ್ತು.
ಆ ಸಂದರ್ಭದಲ್ಲಿ ಮಳೆ ಕಡಿಮೆಯಾದ ನಂತರ ಗ್ರಾಮಸ್ಥರು ಅಡಿಕೆ ಮರದಿಂದ ಕಾಲುಸಂಕ ನಿರ್ಮಿಸಿಕೊಂಡಿದ್ದರು. ಆದರೆ ಆ ನಂತರ ಸುರಿದ ಮಳೆಯಿಂದ ಅಡಿಕೆ ಮರದ ಕಾಲುಸಂಕ ಕೊಚ್ಚಿ ಹೋಗಿ ಗ್ರಾಮಗಳಿಗೆ ಸಂಪರ್ಕವೇ ಇಲ್ಲದಂತಾಗಿತ್ತು.
ಗ್ರಾಮಕ್ಕೆ ಜನಪ್ರತಿನಿಧಿಗಳು ಆಗಮಿಸಿದಾಗ ಗ್ರಾಮಸ್ಥರು ಸೇತುವೆ ನಿರ್ಮಿಸುವಂತೆ ಪಟ್ಟು ಹಿಡಿದಿದ್ದರು. ಆ ನಂತರದಲ್ಲಿ ತಾತ್ಕಾಲಿಕ ಕಬ್ಬಿಣದ ಸೇತುವೆ ನಿರ್ಮಿಸಲಾಗಿತ್ತು.
ಆದರೆ ಕಾರು ಮುಂತಾದ ವಾಹನಗಳು ಆ ಸೇತುವೆಯಲ್ಲಿ ಸಂಚರಿಸಲು ಸಾದ್ಯವಾಗುತ್ತಿರಲಿಲ್ಲ. ಕೆಲದಿನಗಳ ಹಿಂದೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ನೂತನ ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದು ಸೇತುವೆ ಕಾಮಗಾರಿ ಆರಂಭವಾಗಿದೆ.