ಹುಬ್ಬಳ್ಳಿ: ಬಂಡವಾಳ ಹೂಡಿಕೆಯಲ್ಲಿ ರಾಜ್ಯ ದೇಶಕ್ಕೆ ನಂಬರ್ ಒನ್ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರಕಾರ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹಸಿ ಸುಳ್ಳು ಹೇಳಿದ್ದು, ವಾಸ್ತವದ ಸ್ಥಿತಿ ಬೇರೆಯೇ ಇದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಅವರು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಬಂಡವಾಳ ಹೂಡಿಕೆಯಲ್ಲಿ ನಾವೇ ನಂಬರ್ ಒನ್ ಎಂದು ಹೇಳಿಕೆ ನೀಡಿದ್ದು, ಅವರದ್ದೇ ಇಲಾಖೆ ನೀಡಿದ ಅಂಕಿ-ಅಂಶ ಇದಕ್ಕೆ ವ್ಯತಿರಿಕ್ತವಾಗಿದೆ. ಸಚಿವರು ಸುಳ್ಳುಗಳ ಮೂಲಕ ರಾಜ್ಯದ ಜನತೆಯ ದಾರಿ ತಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಶೆಟ್ಟರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2016ರಲ್ಲಿ ನಡೆದ ಇನ್‌ವೆಸ್ಟ್ ಕರ್ನಾಟಕದಲ್ಲಿ 2.45 ಲಕ್ಷ ಕೋಟಿ ರೂ.ಗಳ ಹೂಡಿಕೆಯಡಿ 1080 ಯೋಜನೆ ಹಾಗೂ 122 ಪರಸ್ಪರ ಒಡಂಬಡಿಕೆಯೊಂದಿಗೆ 6.52 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಲಾಗಿತ್ತು. ಆದರೆ ವಾಸ್ತವ ಎಂದರೆ ಇದುವರೆಗೆ ಕೇವಲ 11,158 ಕೋಟಿ ರೂ. ಮಾತ್ರ ಹೂಡಿಕೆಯಾಗಿದೆ.
62 ಯೋಜನೆ ಹಾಗೂ 5 ಎಂಒಯು ಅನುಷ್ಠಾನಗೊಂಡಿದ್ದು, 1.10 ಲಕ್ಷ ಉದ್ಯೋಗ ಮಾತ್ರ ದೊರೆತಿದೆ ಎಂದರು. ಕಾಂಗ್ರೆಸ್ ಆಡಳಿತದ ನಾಲ್ಕು ವರ್ಷಗಳಲ್ಲಿ ಒಟ್ಟು 3.34 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂದು ಸಚಿವರು ಹೇಳಿದ್ದು, ಅವರದ್ದೇ ಇಲಾಖೆ ಅಂಕಿ-ಅಂಶದ ಪ್ರಕಾರ ಹೂಡಿಕೆಯಾಗಿದ್ದು 2.41 ಲಕ್ಷ ಕೋಟಿ ರೂ. ಮಾತ್ರ.
ಏಕಗವಾಕ್ಷಿ ಸಮಿತಿಯಲ್ಲಿ 1,823 ಯೋಜನೆಗಳಿಗೆ ಅನುಮೋದನೆ ನೀಡಿದ್ದಾಗಿ ಹೇಳಿದ್ದು, ಕೇವಲ 980 ಯೋಜನೆಗೆ ಅನುಮೋದನೆ ನೀಡಿದ್ದು, ಇದರಲ್ಲಿ ಕೇವಲ 125 ಯೋಜನೆಗಳು ಮಾತ್ರ ಅನುಷ್ಠಾನಗೊಂಡಿವೆ. ಸುಮಾರು 14.19 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ಸಚಿವರು ಹೇಳಿದ್ದು, ನಾಲ್ಕು ವರ್ಷದಲ್ಲಿ ಇದ್ದುದ್ದೇ 6.55 ಲಕ್ಷ ಉದ್ಯೋಗ ಸೃಷ್ಟಿ ಗುರಿ, ಕೇವಲ 2.60 ಲಕ್ಷ ಮಾತ್ರ ಉದ್ಯೋಗ ದೊರೆತಿದೆ ಎಂದರು.
ಜನ ಜಾಗೃತಿ: ಕೇಂದ್ರ ಸರಕಾರದ ನೆರವು ಪಡೆದ ಹಲವು ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರ ತಮ್ಮದೆಂದು ಪ್ರಚಾರ ಪಡೆಯುತ್ತಿದೆ. ಅನ್ನಭಾಗ್ಯ ಯೋಜನೆಗೆ ಬಹುತೇಕ ನೆರವು ಕೇಂದ್ರ ಸರಕಾರದ್ದಿದ್ದರೂ ಮುಖ್ಯಮಂತ್ರಿ ಭಾವಚಿತ್ರದೊಂದಿಗೆ ತಮ್ಮದೆಂಬಂತೆ ಬಿಂಬಿಸಲಾಗುತ್ತಿದೆ. ಇಂತಹದ್ದರ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ ಕೈಗೊಳ್ಳಲಿದೆ ಎಂದರು.