Advertisement

ಅನಧಿಕೃತ ಮರಳುಗಾರಿಕೆ ವಿರುಧ್ಧ  ಕಟ್ಟು ನಿಟ್ಟಿನ ಕ್ರಮ: ತಹಶೀಲ್ದಾರ್‌

11:36 AM Nov 24, 2017 | Team Udayavani |

ಉರ್ವಸ್ಟೋರ್‌ : ಪರವಾನಿಗೆ ದುರುಪಯೋಗಿಸಿ ಅನಧಿಕೃತವಾಗಿ ಮರಳುಗಾರಿಕೆ ನಡೆಸುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರಗಿಸಲಾಗುವುದು. ಇದಕ್ಕಾಗಿ ಪೊಲೀಸ್‌, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಿತ ನಾಲ್ಕು ಇಲಾಖೆಗಳ ತಂಡ ರಚಿಸಲಾಗಿದೆ ಎಂದು ತಹಶೀಲ್ದಾರ್‌ ಗುರುಪ್ರಸಾದ್‌ ತಿಳಿಸಿದ್ದಾರೆ.

Advertisement

ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಗುರುವಾರ ಜರಗಿದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಮಳವೂರು ವೆಂಟೆಡ್‌ ಡ್ಯಾಂ ಬಳಿ ಅಕ್ರಮ ಮರಳುಗಾರಿಕೆ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಕೆಲವೆಡೆ ಲೈಸೆನ್ಸ್‌ ದುರುಪಯೋಗಿಸಿ ಮರಳುಗಾರಿಕೆ ನಡೆಸುತ್ತಿದ್ದು, ಅಂಥವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ತಾಲೂಕಿನಲ್ಲಿ ಮರಳಿನ ಕೊರತೆ ಇಲ್ಲದಿದ್ದರೂ, ಕೆಲವರು ಸಮಸ್ಯೆ ಇರುವಂತೆ ಬಿಂಬಿಸುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮರಳಿನ ಕೊರತೆ ಕಾರಣ ನೀಡಿ ಸರಕಾರಿ ಕಟ್ಟಡಗಳ ಕೆಲಸ ಸ್ಥಗಿತಗೊಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವಂತೆ 22 ಗ್ರಾ.ಪಂ.ಗಳಿಗೆ ಸೂಚಿಸಲಾಗಿತ್ತಾದರೂ, ಯಾರೂ ಗಂಭೀರ ವಾಗಿ ಪರಿಗಣಿಸಿದಂತಿಲ್ಲ. ಕೇವಲ 5 ಗ್ರಾ.ಪಂ.ಗಳಲ್ಲಿ ಘಟಕ ಆರಂಭವಾಗಿದೆ. ಉಳಿದ ಪಂಚಾಯತ್‌ಗಳು ವಿಳಂಬ ಧೋರಣೆ ಅನುಸರಿಸದೆ ತತ್‌ಕ್ಷಣ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅವರು ಸೂಚಿಸಿದರು. 

ಪಂಚಾಯತ್‌ ವ್ಯಾಪ್ತಿಯಲ್ಲಿ ಘಟಕ ಸ್ಥಾಪನೆಗೆ ಸ್ಥಳಾವಕಾಶದ ಸಮಸ್ಯೆ ಇದೆ ಎಂದು ಜೋಕಟ್ಟೆ ಪಂಚಾಯತ್‌ ಸದಸ್ಯರೋರ್ವರು ಹೇಳಿದಾಗ, ಘಟಕ ಸ್ಥಾಪನೆಗೆ ಜಾಗದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲ ಕಡೆ ಘನತ್ಯಾಜ್ಯ ವಿಲೇವಾರಿಗೆ ಜಾಗ ಕೊಡಲು ಬದ್ಧರಾಗಿದ್ದೇವೆ ಎಂದು ತಹಶೀಲ್ದಾರ್‌ ತಿಳಿಸಿದರು.

Advertisement

ಮರ ಕಡಿಯಲು ಅಡ್ಡಿ
ಬೊಂಡಂತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ನಿವೇಶನ ಒದಗಿಸಲು ಈಗಾಗಲೇ ಜಾಗ ಗುರುತಿಸಲಾಗಿದ್ದು, ಅಲ್ಲಿ ಮರಗಿಡಗಳಿರುವ ಕಾರಣ ಅದನ್ನು ಕಡಿದು ಸಮತಟ್ಟು ಮಾಡುವ ಬಗ್ಗೆ ಪಂಚಾಯತ್‌ ಸಭೆಯಲ್ಲಿ ನಿರ್ಣಯಿಸಲಾಗಿದೆ. ಆದರೆ ಅರಣ್ಯ ಇಲಾಖೆಯವರು ಇದಕ್ಕೆ ತಡೆ ಒಡ್ಡುತ್ತಿದ್ದಾರೆ. ಗಡಿ ಗುರುತು ತೋರಿಸಿದರೂ, ಮರಗಿಡಗಳನ್ನು ಕಡಿಯಲು ಬಿಡುತ್ತಿಲ್ಲ ಎಂದು ಗ್ರಾ.ಪಂ. ಸದಸ್ಯರೋರ್ವರು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಅಧಿಕಾರಿ, ಇಲ್ಲಿ ಗುರುತಿಸಿರುವ ಜಾಗದ ಒಂದು ಭಾಗದಲ್ಲಿ ಸಮಸ್ಯೆ ಇದೆ. ಅದನ್ನು ನಿವಾರಿಸದೆ ಅನುಮತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದರು. ಆಗ, ಸಮಸ್ಯೆ ಇಲ್ಲದ ಜಾಗದಲ್ಲಿ ಗಿಡ ಕಡಿಯಲು ಅವಕಾಶ ನೀಡಿ ಎಂದು ಅಧ್ಯಕ್ಷ ಮಹಮ್ಮದ್‌ ಮೋನು ತಿಳಿಸಿದರು.

ಡಿ. 31ರೊಳಗೆ ಅರ್ಜಿ ವಿಲೇ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 94 ಸಿಸಿಯಲ್ಲಿ ಎಷ್ಟು ಅರ್ಜಿಗಳು ಪ್ರಗತಿಯಲ್ಲಿವೆ ಮತ್ತು ಹಕ್ಕು ಪತ್ರ ವಿತರಣೆ ಯಾವಾಗ ನಡೆಯಲಿದೆ ಎಂದು ಸದಸ್ಯರು ಪ್ರಶ್ನಿಸಿದರು. 94ಸಿಸಿ ಅಡಿ 6632 ಅರ್ಜಿಗಳು ಬಂದಿದ್ದು, ಈ ಪೈಕಿ 837ಕ್ಕೆ ಮಂಜೂರು ಮಾಡಲಾಗಿದೆ. ಉಳಿದವುಗಳನ್ನು ಡಿ. 31ರೊಳಗೆ ವಿಲೇವಾರಿ ಮಾಡಲಾಗುವುದು ಎಂದು ತಹಶೀಲ್ದಾರ್‌ ತಿಳಿಸಿದರು. 

ಮೊಬೈಲ್‌ ಅಪ್‌ಲೋಡ್‌ ತರಬೇತಿ
ರೈತರ ಬೆಳೆಯ ಬಗ್ಗೆ ನಡೆಸುತ್ತಿರುವ ಬೆಳೆ ಸಮೀಕ್ಷಾ ಕಾರ್ಯ ಶೇ. 60ರಷ್ಟು ಪೂರ್ಣಗೊಂಡಿದೆ. ಈಗಾಗಲೇ ರೈತರೇ ತಮ್ಮ ಬೆಳೆಗಳ ಬಗ್ಗೆ ಮೊಬೈಲ್‌ ಮೂಲಕ ಅಪ್‌ಲೋಡ್‌ ಮಾಡಬೇಕು ಎಂದು ಸರಕಾರ ಸೂಚಿಸಿದೆ. ಕೃಷಿಕರು ಹೆಚ್ಚಿರುವ ಕಡೆ ಈ ಬಗ್ಗೆ ಪ್ರಚಾರ ಕೈಗೊಂಡು ತರಬೇತಿ ನೀಡಲಾಗುವುದು. ಬೆಳೆನಷ್ಟ ಪರಿಹಾರ, ಬೆಳೆವಿಮೆಗೆ ಇದು ಅನುಕೂಲವಾಗಲಿದೆ ಎಂದು ತಹಶೀಲ್ದಾರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next