ಚೆನ್ನೈ: ವೆಸ್ಟ್ ಇಂಡೀಸ್ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಭಾರತ, ರವಿವಾರದ 3ನೇ ಹಾಗೂ ಅಂತಿಮ ಪಂದ್ಯಕ್ಕಾಗಿ ಮೂವರು ಆಟಗಾರರಿಗೆ ವಿಶ್ರಾಂತಿ ನೀಡಿದೆ. ಪಂಜಾಬ್ ಸೀಮರ್ ಸಿದ್ಧಾರ್ಥ್ ಕೌಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ವಿಶ್ರಾಂತಿ ಪಡೆದ ಆಟಗಾರರರೆಂದರೆ ಉಮೇಶ್ ಯಾದವ್, ಜಸ್‌ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್. ಮುಂಬರುವ ಆಸ್ಟ್ರೇಲಿಯ ಪ್ರವಾಸದ ಹಿನ್ನೆಲೆಯಲ್ಲಿ “ಉತ್ತಮ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಸಲುವಾಗಿ’ ಇವರಿಗೆ ವಿಶ್ರಾಂತಿ ನೀಡಲಾಯಿತು ಎಂದು ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ 5 ವಿಕೆಟ್ ಉರುಳಿಸಿದ್ದರು. ಕೋಲ್ಕತಾದ ಮೊದಲ ಪಂದ್ಯದಲ್ಲಿ 13 ರನ್ನಿಗೆ 3 ವಿಕೆಟ್ ಕಿತ್ತ ಸಾಹಸ ಇವರದಾಗಿತ್ತು. ಬುಮ್ರಾ ಒಟ್ಟು 3 ವಿಕೆಟ್ ಕೆಡವಿದ್ದರು. ಭುವನೇಶ್ವರ್ ಅನಾರೋಗ್ಯದಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಾಗ ಉಮೇಶ್ ಯಾದವ್ ಅವಕಾಶ ಪಡೆದಿದ್ದರು. ದ್ವಿತೀಯ ಟಿ20 ಮುಖಾಮುಖೀಗೆ ಭುವನೇಶ್ವರ್ ಮರಳಿದಾಗ ಉಮೇಶ್ ಯಾದವ್ ಆಡುವ ಬಳಗದಿಂದ ಹೊರಗುಳಿಯಬೇಕಾಯಿತು.
ಸಿದ್ಧಾರ್ಥ್ ಕೌಲ್ ಕಳೆದ ಜೂನ್‌ನಲ್ಲಿ ಅಯರ್‌ಲ್ಯಾಂಡ್ ವಿರುದ್ಧ ಡಬ್ಲಿನ್‌ನಲ್ಲಿ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದು, 2 ಪಂದ್ಯಗಳನ್ನಾಡಿದ್ದಾರೆ.
ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದ್ದು, ಭಾರತ ತಂಡದ ಸದಸ್ಯರು ಶನಿವಾರ ಇಲ್ಲಿಗೆ ಆಗಮಿಸಲಿದ್ದಾರೆ.
ಆಸ್ಟ್ರೇಲಿಯ ವಿರುದ್ಧದ ಮೊದಲ ಟಿ20 ಪಂದ್ಯ ನ. 21ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ದಿನೇಶ್ ಕಾರ್ತಿಕ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೃಣಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ಶಾಬಾಜ್ ನದೀಂ, ಸಿದ್ಧಾರ್ಥ್ ಕೌಲ್.