ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ವಿಶಿಷ್ಟ ಬೌಲಿಂಗ್ ಶೈಲಿ ಹೊಂದಿದ್ದಾರೆ. ಈ ಶೈಲಿಯೇ ಅವರಿಗೆ ಮಾರಕವಾಗಬಹುದೆಂದು ಆಸ್ಟ್ರೇಲಿಯದ ಪ್ರಸಿದ್ಧ ಶರೀರಶಾಸ್ತ್ರಜ್ಞ ಡಾ| ಸೈಮನ್ ಫೆರೊಸ್ ಮತ್ತು ದೈಹಿಕ ತರಬೇತುದಾರ ಜಾನ್ ಗ್ಲಾಸ್ಟರ್ ಹೇಳಿದ್ದಾರೆ. ಬುಮ್ರಾ ಬೌಲಿಂಗ್ ಶೈಲಿಯನ್ನು ಸಂಪೂರ್ಣ ಅಧ್ಯಯನ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.
ಬೆನ್ನುಮೂಳೆಗೆ ಹಾನಿ
ಆಸ್ಟ್ರೇಲಿಯದ ಡೆಕಿನ್ ವಿಶ್ವವಿದ್ಯಾಲಯದ “ಸ್ಕೂಲ್ ಆಫ್ ಎಕ್ಸರ್‌ಸೈಸಸ್ ಆ್ಯಂಡ್ ನ್ಯೂಟ್ರಿಷನ್ ಸೈನ್ಸಸ್’ ವಿಭಾಗ ಜಗತ್ತಿನ 3ನೇ ಶ್ರೇಷ್ಠ ಕ್ರೀಡಾವಿಜ್ಞಾನ ಶಾಲೆ ಎಂಬ ಖ್ಯಾತಿ ಹೊಂದಿದೆ. ಈ ವಿವಿಯ ಸೈಮನ್ ಹಾಗೂ ಗ್ಲಾಸ್ಟರ್ ಅವರ ಅಭಿಪ್ರಾಯದ ಪ್ರಕಾರ ಬುಮ್ರಾ ಬೌಲಿಂಗ್ ಶೈಲಿಯಿಂದ ಅವರ ಬೆನ್ನುಮೂಳೆಗೆ ಹಾನಿಯಾಗುವ ಸಾಧ್ಯತೆಯಿದೆ.
ಬುಮ್ರಾ ಬೌಲಿಂಗ್ ಮಾಡುವಾಗ ಬಹುತೇಕ ಶರೀರವನ್ನು ಅಡ್ಡಡ್ಡಗೊಳಿಸಿ, ಬಲಗೈಯನ್ನು ಸಂಪೂರ್ಣವಾಗಿ ನೇರವಾಗಿಸಿರುತ್ತಾರೆ. ಇದು ಕ್ರಿಕೆಟ್ ಜಗತ್ತಿನಲ್ಲಿ ಯಾರೂ ಬಳಸದ ಅಪರೂಪದ ಶೈಲಿ. ಹೀಗೆ ಮಾಡುವಾಗ ಅವರಿಗೆ ಹೆಚ್ಚು ಅನುಕೂಲ ಸಿಕ್ಕಿ, ಗರಿಷ್ಠ ಸ್ವಿಂಗ್ ಮಾಡಲು ಸಾಧ್ಯವಾಗುತ್ತದೆ. ಸೈಮನ್ ಇದನ್ನೇ ಅಪಾಯಕಾರಿ ಎಂದಿದ್ದಾರೆ.
ಕಾಲಿನ ಮೇಲೆ ಹೆಚ್ಚು ಒತ್ತಡ
“ಬುಮ್ರಾ ಬೌಲಿಂಗ್ ಮಾಡುವಾಗ ಮುಂದಿಡುವ ಕಾಲಿನ ಹೊರಭಾಗ, ಅಂದರೆ ಎಡಪಾದದ ಎಡಭಾಗದ ತುದಿಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತಾರೆ. ಆಗ ಚೆಂಡಿನ ಮೇಲೆ ಹೆಚ್ಚಿನ ಬಲ ಹಾಕಬೇಕಾಗಿ ಬರುತ್ತದೆ. ಹಾಗೆ ಮಾಡುವಾಗ ಶರೀರದ ಎಡಭಾಗವನ್ನು ನೇರವಾಗಿಯೇ ಹೆಚ್ಚು ಬಾಗಿಸುತ್ತಾರೆ. ಕೆಲವೊಮ್ಮೆ 45 ಡಿಗ್ರಿಗಿಂತಲೂ ಹೆಚ್ಚು ಬಾಗಿಸುತ್ತಾರೆ. ಇದರಿಂದ ಸೊಂಟದ ಬಳಿಯ ಬೆನ್ನುಮೂಳೆಗೆ ಹಾನಿ ಮಾಡುವ ಸಾಧ್ಯತೆ ಜಾಸ್ತಿ’ ಡಾ| ಫೆರೊಸ್ ಹೇಳಿದ್ದಾರೆ.
ಸೊಂಟದ ಭಾಗದಲ್ಲಿರುವ ಬೆನ್ನೆಲುಬು (ಕಶೇರುಕ), ಪಕ್ಕೆಲುಬು ಮತ್ತು ಎದೆಗೂಡಿನ ನಡುವೆ ಬರುವ 5 ಮೂಳೆಗಳ ಗುತ್ಛ. ಇದನ್ನು ಕಾಪಾಡಿಕೊಳ್ಳಬೇಕಾದರೆ ಸರಿ ಯಾದ ದೈಹಿಕ ಕ್ರಮವೂ ಅಗತ್ಯ. ಬುಮ್ರಾ ಬೌಲಿಂಗ್ ಶೈಲಿ ಅಸಹಜ ವಾಗಿರುವುದರಿಂದ ಇದು ಅಪಾಯಕಾರಿ ಎಂದು ಹಲವಾರು ಕ್ರಿಕೆಟಿಗರು ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಸರಿಯಾದ ಕಾರಣಗಳನ್ನು ಫೆರೊಸ್ ಮತ್ತು ಗ್ಲಾಸ್ಟರ್ ನೀಡಿದ್ದಾರೆ.