Advertisement
ಕೇರಳ ರಾಜ್ಯ ಲಾಟರಿ ಸಮ್ಮರ್ ಬಂಪರ್ ಡ್ರಾದಲ್ಲಿ ಸುಳ್ಯದ “ನಿತೀಶ್’ ಹೊಟೇಲ್ ಮಾಲಕ ಸುಧಾಮ ಬಿ. ಅವರಿಗೆ ಬರೋಬ್ಬರಿ 4 ಕೋ.ರೂ. ಒಲಿದು ಬಂದಿದೆ!ಲಾಟರಿಯಲ್ಲಿ ಸುಳ್ಯ ಮೂಲದ ವ್ಯಕ್ತಿಗೆ ಬಂಪರ್ ಬಹುಮಾನ ಲಭಿಸಿದೆ ಎಂಬ ಸುದ್ದಿ ಟಿಕೆಟ್ ವಿತರಿಸಿದ ಏಜೆನ್ಸಿ ಮೂಲಕ ದೊರೆತು, ಆ ವ್ಯಕ್ತಿ ಯಾರು ಎಂಬ ಬಗ್ಗೆ ಸಾಮಾಜಿಕ ಜಾಲ ತಾಣ ದಲ್ಲಿ ಪ್ರಚಾರ ಆರಂಭಗೊಂಡಿತ್ತು. ಟಿಕೆಟ್ ಖರೀದಿಸಿದ್ದ ಬಿ. ಸುಧಾಮ ಮಣಿಯಾಣಿ ಇದನ್ನು ತಿಳಿದು ಇಂಟರ್‌ನೆಟ್ ಮೂಲಕ ತನ್ನ ನಂಬರ್ ಪರಿಶೀಲಿಸಿದರು. ಆಗ ಬಹುಮಾನ ಒಲಿದಿ ರುವುದು ಖಚಿತವಾಯಿತು.
ಮಾ.1ರಂದು ಸುಧಾಮ ಅವರು ಮಲ್ಲ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಕಾಸರಗೋಡಿನ ಮಧು ಲಾಟರಿ ಏಜೆನ್ಸಿಯ ಸಬ್ ಏಜೆಂಟ್ ಆಗಿರುವ ಮುಳ್ಳೇರಿಯಾ ಕುಂಞಿಕಣ್ಣನ್ ಅವರಿಂದ 150 ರೂ. ಬೆಲೆಯ 3 ಟಿಕೆಟ್ ಖರೀದಿಸಿದ್ದರು. ಅವುಗಳಲ್ಲಿ ಕೇರಳ ರಾಜ್ಯ ಲಾಟರಿ ಸಮ್ಮರ್ ಬಂಪರ್ ಡ್ರಾದಲ್ಲಿ ಖಆ 131399 ನಂಬರ್ 4 ಕೋ.ರೂ. ಬಹುಮಾನಕ್ಕೆ ಆಯ್ಕೆಯಾಗಿದೆ. “ನಾಲ್ಕು ವರ್ಷಗಳಿಂದ ಅಪರೂಪ ಕ್ಕೊಮ್ಮೆ ಲಾಟರಿ ಟಿಕೆಟ್ ಖರೀದಿಸುತ್ತಿದ್ದೆ. ಈ ತನಕ ಬಹುಮಾನ ಸಿಕ್ಕಿರಲಿಲ್ಲ. ಈ ಬಾರಿಯೂ ಬಹುಮಾನದ ನಿರೀಕ್ಷೆ ಇಲ್ಲದೆ ಫಲಿತಾಂಶ ನೋಡಿರಲಿಲ್ಲ. ಸುಳ್ಯ ಮೂಲದ ವ್ಯಕ್ತಿಯ ಟಿಕೆಟಿಗೆ ಬಹುಮಾನ ಸಿಕ್ಕಿದೆ ಎಂಬ ಮಾಹಿತಿ ಸಿಕ್ಕಿದಾಗ ಅನುಮಾನಗೊಂಡು ಪರಿಶೀ ಲಿಸಿದರೆ ನಾನು ಖರೀದಿಸಿದ ಲಾಟರಿ ಟಿಕೆಟ್‌ಗೆ ಅದೃಷ್ಟ ಒಲಿದಿರುವ ಶುಭ ಸುದ್ದಿ ಕಾದಿತ್ತು ಅನ್ನುತ್ತಾರೆ ಸುಧಾಮ.
Related Articles
24 ವರ್ಷಗಳಿಂದ ಸಣ್ಣ ಹೊಟೇಲ್ ನಡೆಸುತ್ತಿರುವ ಸುಧಾಮ ಅವರು ಸುಳ್ಯ ನಗರದ ಕಾಂತಮಂಗಲ ಸಮೀಪದ ಬೂಡುಮಕ್ಕಿ ನಿವಾಸಿ. 1995ರಿಂದ 2000ನೇ ಇಸವಿಯ ತನಕ ಅಡ್ಯನಡ್ಕದಲ್ಲಿ ಹೊಟೇಲ್ ವ್ಯವಹಾರ ನಡೆಸಿದ್ದರು. 2001ರಿಂದ ಸುಳ್ಯ ನಗರದ ಮುಖ್ಯ ರಸ್ತೆಯ ಶ್ರೀ ಕೃಷ್ಣ ಬಿಲ್ಡಿಂಗ್‌ನಲ್ಲಿ “ನಿತೀಶ್ ಹೊಟೇಲ್’ ನಡೆಸುತ್ತಿದ್ದಾರೆ. ಇದು ಸಣ್ಣ ಹೊಟೇಲ್; ಆದರೆ ಈಗ ಒದಗಿ ರುವ ಅದೃಷ್ಟ ದೊಡ್ಡದು.
Advertisement
ಪತ್ನಿ ಪ್ರಭಾವತಿ, ಮೂವರು ಪುತ್ರರಾದ ನಿತೀಶ್, ಶರತ್, ಮನ್ವಿತ್ ಅವರನ್ನೊಳಗೊಂಡ ಸಂಸಾರ. ಪುತ್ರರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮನೆಯಲ್ಲಿ ಸಣ್ಣ ಮಟ್ಟಿನ ಕೃಷಿಯೂ ಅವರಿಗಿದೆ.
“ನಾಲ್ಕು ಕೋ. ರೂ. ಬಹುಮಾನ ಬಂದಿರುವುದು ಅನಿರೀಕ್ಷಿತ. ಈ ಹಣವನ್ನು ನಿರ್ದಿಷ್ಟವಾಗಿ ಇಂತಹುದಕ್ಕೇ ಬಳಸಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಮಕ್ಕಳ ವಿದ್ಯಾಭ್ಯಾಸವೂ ನಮ್ಮ ಮುಂದಿರುವುದರಿಂದ ದೊರೆತ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ’ ಅಂದಿದ್ದಾರೆ ಸುಧಾಮ.
– ಕಿರಣ್ ಪ್ರಸಾದ್ ಕುಂಡಡ್ಕ