ರಬಕವಿ-ಬನಹಟ್ಟಿ: ಕೇವಲ ಇಪ್ಪತ್ತು ಗುಂಟೆ ಭೂ ಪ್ರದೇಶದಲ್ಲಿ ಬೆಳೆದ ಮೆಣಸಿನ ಕಾಯಿಂದಾಗಿ ತಾಲ್ಲೂಕಿನ ಜಗದಾಳ ಗ್ರಾಮದ ರೈತ ಮಲ್ಲಪ್ಪ ಕಚ್ಚು ಒಂದುವರೆ ತಿಂಗಳುಗಳಲ್ಲಿ ಸಾಕಷ್ಟು ಲಾಭವನ್ನು ಮಾಡಿಕೊಂಡಿದ್ದಾರೆ.
ದಿ. 3.11. 2021 ರಂದು ಮೆಣಸಿನ ಕಾಯಿ ಅಗಿಯನ್ನು ನಾಟಿ ಮಾಡಲಾಗಿತ್ತು. ನಂತರ ಆರವತ್ತುಗಳ ದಿನಗಳ ನಂತರ ಕಟಾವು ಆರಂಭಗೊಂಡಿತು. ಇದುವರೆಗೆ ಅಂದಾಜು 7. 50 ಟನ್ನಷ್ಟು ಮೆಣಸಿನಕಾಯಿಗಳನ್ನು ಮಾರಾಟ ಮಾಡಿದ್ದಾರೆ.
ತಮ್ಮ ತೋಟದ ಇಪ್ಪತ್ತು ಗುಂಟೆ ಪ್ರದೇಶದಲ್ಲಿ ಅಂದಾಜು 5200 ಸಸಿಗಳನ್ನು ನಾಟಿ ಮಾಡಿದ್ದರು. ಈಗ ಮೆಣಸಿನಕಾಯಿ ಭಾರಕ್ಕೆ ಗಿಡಗಳು ಬಾಗಿ ನಿಂತಿವೆ.
ಸದ್ಯ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಮಲ್ಲಪ್ಪ ಕಚ್ಚು ಅವರ ತೋಟಕ್ಕೆ ವ್ಯಾಪಾರಸ್ಥರೆ ಬಂದು ಮೆಣಸಿನ ಕಾಯಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಸ್ಥಳದಲ್ಲಿಯೇ ಒಂದು ಕೆ.ಜಿಗೆ ರೂ. 60 ಬೆಲೆ ನೀಡಿ ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ಶ್ರಮ ಮತ್ತು ಸಾರಿಗೆಯ ಖರ್ಚು ಸಂಪೂರ್ಣವಾಗಿ ಉಳಿತಾಯವಾಗಿದೆ. ಬೆಳಗಾವಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ರೂ. 110 ಕ್ಕೆ ಮಾರಾಟವಾದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ರೂ.80 ಕ್ಕೆ ಮೆಣಸಿನ ಕಾಯಿ ಮಾರಾಟವಾಗುತ್ತಿದೆ. ಸದ್ಯ ಸ್ಥಳೀಯ ಮಾರುಕಟ್ಟೆ ಹಾಗೂ ಮುಧೋಳ ಮಾರುಕಟ್ಟೆಗೆ ಮೆಣಸಿನಕಾಯಿಗಳನ್ನು ಕಳುಹಿಸುತ್ತಿದ್ದಾರೆ.
ಭೂಮಿಯನ್ನು ಹದ ಮಾಡಿ, ಮಲ್ಚಿಂಗ್ ಪೇಪರ್ ಹೊದಿಕೆ, ಕೊಟ್ಟಿಗೆ ಗೊಬ್ಬರ, ಸಸಿಗಳ ನಾಟಿ, ಇನ್ನೀತರ ಗೊಬ್ಬರ, ಔಷಧಿ ಹಾಗೂ ಕೂಲಿ ಕಾರ್ಮಿಕರ ಕೂಲಿ ಸೇರಿದಂತೆ ಇದುವರೆಗೆ ಅಂದಾಜು ರೂ. 1 ರಿಂದ 1.25 ಲಕ್ಷ ಖರ್ಚಾಗಿದೆ. ಈಗಾಗಲೇ ನಾವು ಮಾಡಿದ ಖರ್ಚಗಿಂತ ನಮಗೆ ಹೆಚ್ಚಿನ ಲಾಭ ಉಂಟಾಗಿದೆ ಎನ್ನುತ್ತಾರೆ ಮಲ್ಲಪ್ಪ ಕಚ್ಚು.
ಜಗದಾಳ ಗ್ರಾಮದ ಪ್ರವಿರಾಜ ಶ್ರೀನಾಥ ಆಗ್ರಿ ಮಾಲ್ ಮಾರ್ಗದರ್ಶನದಲ್ಲಿ ಮೆಣಸಿನ ಕಾಯಿ ಗಳನ್ನು ಬೆಳೆಯಲಾಗಿದೆ. ಈ ಸಂಸ್ಥೆಯವರು ಪ್ರತಿ ಐದು ದಿನಗಳಿಗೆ ಒಂದು ಬಾರಿ ತೋಟಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿದ್ದರು. ಎನ್ನುತ್ತಾರೆ ಮಲ್ಲಪ್ಪ ಕಚ್ಚು. ( ಹೆಚ್ಚಿನ ಮಾಹಿತಿಗಾಗಿ 99028 15731)
-ಕಿರಣ ಶ್ರೀಶೈಲ ಆಳಗಿ