ನಾಗ್ಪುರ: ಪಾಟ್ನಾ ಪೈರೇಟ್ಸ್ ವಿರುದ್ಧ 46 -32 ಅಂತರದಿಂದ ಪರಾಭವಗೊಳ್ಳುವುದರೊಂದಿಗೆ ಬೆಂಗಳೂರು ಬುಲ್ಸ್ 5ನೇ ಆವೃತ್ತಿಯಲ್ಲಿ ಸತತ 2ನೇ ಪಂದ್ಯದಲ್ಲಿ ಪರಾಭವಗೊಂಡಿತು.
ಪ್ರೇಕ್ಷಕರಿಂದ ಭರ್ತಿಯಾಗಿದ್ದ ಇಲ್ಲಿನ ಮಂಕಾಪುರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಪಾಟ್ನಾ ಭರ್ಜರಿ ಪ್ರದರ್ಶನ ನೀಡುವ ಮೂಲಕ ಆವೃತ್ತಿಯಲ್ಲಿ ಸತತ 3ನೇ ಜಯ ದಾಖಲಿಸಿತು. ಈ ಆವೃತ್ತಿಯಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಬೆಂಗಳೂರು ಬುಲ್ಸ್ 4 ಬಾರಿ ಆಲೌಟ್
ಆಗುವ ಮೂಲಕ ಮುಜುಗರಕ್ಕೀಡಾಯಿತು. ಮೊದಲ ಅವಧಿಯಲ್ಲಿ 2 ಬಾರಿ ಹಾಗೂ 2ನೇ ಅವಧಿಯಲ್ಲಿ 2 ಬಾರಿ ಆಲೌಟ್ ಆಯಿತು.
ಆರಂಭದ 9ನೇ ನಿಮಿಷದಲ್ಲಿ ಆಲೌಟ್ ಆಗುವುದರೊಂದಿಗೆ ಮೊದಲ ಆಘಾತ ಅನುಭವಿಸಿತು. ಆಗ ಪಾಟ್ನಾ ಪೈರೇಟ್ಸ್ 9-5ರಿಂದ ಮುನ್ನಡೆ ಪಡೆದಿತ್ತು. 13ನೇ ನಿಮಿಷಕ್ಕೆ ಮತ್ತೂಮ್ಮೆ ಆಲೌಟ್ ಅನುಭವಿಸಿದ ಸಂದರ್ಭದಲ್ಲಿ ಪಾಟ್ನಾ 11 ಅಂಕಗಳ (18-8) ಮುನ್ನಡೆ ಗಳಿಸಿಕೊಂಡಿತು. ಪಾಟ್ನಾ ನಾಯಕ ಪ್ರದೀಪ್ ನರ್ವಾಲ್ ಚುರುಕಿನ ದಾಳಿ ಸಂಘಟಿಸುವ ಮೂಲಕ 15 ಅಂಕ ದಾಖಲಿಸಿ ಸ್ಕೋರ್ ಹೆಚ್ಚಳಕ್ಕೆ ಕಾರಣರಾದರು. ಮೋನು ಗೋಯಟ್ ಹಾಗೂ ವಿನೋದ ಕುಮಾರ್ ಕೂಡ ರೈಡಿಂಗ್ ಮೂಲಕ ಪಾಟ್ನಾ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು. ಪಂದ್ಯದ ಮೊದಲ ಅವಧಿಯ ಅಂತ್ಯಕ್ಕೆ ಪಾಟ್ನಾ 22-11ರಿಂದ ಮುನ್ನಡೆ ಪಡೆದುಕೊಂಡಿತ್ತು. 2ನೇ ಅವಧಿಯ 3ನೇ ನಿಮಿಷಕ್ಕೆ ಮತ್ತೂಮ್ಮೆ ಬೆಂಗಳೂರು ಆಲೌಟ್‌ಗೆ ತುತ್ತಾಯಿತು. ಆಗ ಎದುರಾಳಿ ಪಾಟ್ನಾ 29-15 ಮುನ್ನಡೆ ಗಳಿಸಿತು. ಮುಂದೆ ರೋಹಿತ್ ಕುಮಾರ ನಾಯಕತ್ವದ ಬೆಂಗಳೂರು ಚೇತರಿಕೆ ಕಾಣಲೇ ಇಲ್ಲ.
ವಿಶ್ವನಾಥ ಕೋಟಿ