Advertisement

ತವರಿನ ಎಲ್ಲ ಪಂದ್ಯ ಸೋತ ತಮಿಳ್‌

06:45 AM Oct 06, 2017 | |

ಚೆನ್ನೈ: ವಿವೊ ಪ್ರೊ ಕಬಡ್ಡಿ ಲೀಗ್‌ನ ಚೆನ್ನೈ ಚರಣದ ಗುರುವಾರದ ಏಕೈಕ ಹಾಗೂ ಕೊನೆಯ  ಪಂದ್ಯದಲ್ಲಿ ರೋಹಿತ್‌ ಮತ್ತು ಅಜಯ್‌ ಅವರ ಭರ್ಜರಿ ಆಟದಿಂದಾಗಿ ಬೆಂಗಳೂರು ಬುಲ್ಸ್‌ ಆತಿಥೇಯ ತಮಿಳ್‌ ತಲೈವಾಸ್‌ತಂಡಕ್ಕೆ 45-35 ಅಂಕಗಳ ಸೋಲುಣಿಸಿತು. ಇದರೊಂದಿಗೆ ತವರಿನ ಎಲ್ಲ 6 ಪಂದ್ಯಗಳಲ್ಲೂ ತಮಿಳ್‌ ಶರಣಾಗತಿ ಸಾರಿತು. ಚೆನ್ನೈ ಅಭಿಮಾನಿಗಳನ್ನು ನಿರಾಸೆಯಲ್ಲಿ ಕೆಡವಿತು.

Advertisement

ಇಲ್ಲಿನ ಜವಹರ್‌ಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗ ಣದಲ್ಲಿ ನಡೆದ ಬಿ ವಲಯದ ಕೊನೆಯ 2 ಸ್ಥಾನಿಗಳ ನಡುವಿನ ಈ ಪಂದ್ಯದಲ್ಲಿ ಬುಲ್ಸ್‌ ಆರಂಭದಿಂದಲೇ ತಮಿಳರ ಮೇಲೇರಗಿ ಅಂಕ ಪಡೆಯಲು ಆರಂಭಿಸಿತು. 3 ಬಾರಿ ತಮಿಳ್‌ ತಂಡವನ್ನು ಆಲೌಟ್‌ ಮಾಡಿದ ಬುಲ್ಸ್‌ ಗೆಲುವಿನ ನಗೆ ಚೆಲ್ಲಿತು.ದ್ವಿತೀಯ ಅವಧಿಯ ಆಟದಲ್ಲಿ ಬುಲ್ಸ್‌ ತಂಡವನ್ನು ಆಲೌಟ್‌ ಮಾಡಿದರೂ ತಮಿಳ್‌ಗೆ ಗೆಲುವು ಮರೀಚಿಕೆಯೇ ಆಗುಳಿಯಿತು. ಚೆನ್ನೈ ಚರಣದ ಆರೂ ಪಂದ್ಯಗಳಲ್ಲಿ ಮಿಂಚಿನಾಟ ಪ್ರದರ್ಶಿಸಿದ್ದ ಅಜಯ್‌ ಠಾಕುರ್‌ ಈ ಪಂದ್ಯದಲ್ಲೂ ಗರಿಷ್ಠ 15 ಅಂಕ ಗಳಿಸಿ ಗಮನ ಸೆಳೆದರು. ಪ್ರಪಂಜನ್‌ 8 ಅಂಕ ಮತ್ತು ದರ್ಶನ್‌ 6 ಅಂಕ ಗಳಿಸಿದರು.

ಬುಲ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನಾಯಕ ರೋಹಿತ್‌ ಕುಮಾರ್‌ ಗರಿಷ್ಠ 17 ಅಂಕ ಪಡೆದು ಮಿಂಚಿದರು. ಅಜಯ್‌ 6 ಅಂಕ ಮತ್ತು ಸಚಿನ್‌ 5 ಅಂಕ ಗಳಿಸಿದರು.ಈ ಗೆಲುವಿನಿಂದ ಬೆಂಗಳೂರು ಬುಲ್ಸ್‌ ಸತತ 3 ಸೋಲಿನ ಸರಮಾಲೆಗೆ ಅಂತ್ಯ ಹಾಡಿತಲ್ಲದೇ ಸೂಪರ್‌ ಪ್ಲೇ ಆಫ್ಗೆ  ತೇರ್ಗಡೆಯಾಗುವ ಸಾಧ್ಯತೆಯನ್ನು ಹೆಚ್ಚಿಸಿತು. ಬುಲ್ಸ್‌ ಈವರೆಗೆ 18 ಪಂದ್ಯಗಳನ್ನಾಡಿದ್ದು, 39 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಬೆಂಗಳೂರು ಇನ್ನು 4 ಪಂದ್ಯ ಆಡಲಿದ್ದು, ಇವೆಲ್ಲವನ್ನೂ ಗೆದ್ದರೆ ಮುನ್ನಡೆಯಬಹುದು.

ಬೆಂಗಳೂರು ಭರ್ಜರಿ ಪ್ರದರ್ಶನ
ಬೋನಸ್‌ ಅಂಕ ಗಳಿಸುವ ಮೂಲಕ ಖಾತೆ  ತೆರೆದ ಬೆಂಗಳೂರು ಬುಲ್ಸ್‌ ತಂಡ ಮೊದಲ 5 ನಿಮಿಷ ಮುಗಿದಾಗ 6-3 ಮುನ್ನಡೆಯಲ್ಲಿತ್ತು. ಅಂಕ ಸಮಬಲ ಸಾಧಿಸಲು ತಮಿಳ್‌ ಸತತ ಪ್ರಯತ್ನ ನಡೆಸಿದರೂ ಬುಲ್ಸ್‌ ಮುನ್ನಡೆಯನ್ನು ಬಿಟ್ಟುಕೊಡಲೇ ಇಲ್ಲ. 10 ನಿಮಿಷದ ಆಟ ಮುಗಿದಾಗ ಬುಲ್ಸ್‌ 8-6ರಿಂದ ಮುನ್ನಡೆ ಸಾಧಿಸಿತು.

ಆಬಳಿಕ ಬುಲ್ಸ್‌ ಭರ್ಜರಿ ಆಟವಾಡಿತು. ಅಜಯ್‌ ಮತ್ತು ರೋಹಿತ್‌ ಸತತ ರೈಡ್‌ನ‌ಲ್ಲಿ ಅಂಕ ಕಲೆ ಹಾಕಿದರು. ಇದರಿಂದ ಒತ್ತಡಕ್ಕೆ ಒಳಗಾದ ತಮಿಳ್‌ ಮೊದಲ ಅವಧಿ ಮುಗಿಯಲು 2 ನಿಮಿಷವಿರುವಾಗ ಆಲೌಟ್‌ಗೆ ಗುರಿಯಾಯಿತು. ಮೊದಲ ಅವಧಿ ಮುಗಿದಾಗ ಬುಲ್ಸ್‌ 19-10ರಿಂದ ಮುನ್ನಡೆಯಲ್ಲಿತ್ತು.

Advertisement

ಇಂದಿನಿಂದ ಜೈಪುರ ಚರಣ
ಶುಕ್ರವಾರದಿಂದ ಜೈಪುರದಲ್ಲಿ ಪ್ರೊ ಕಬಡ್ಡಿ ಲೀಗ್‌ನ ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ ಆತಿಥೇಯ ಜೈಪುರ ಪಿಂಕ್‌ ಪ್ಯಾಂಥರ್ ಎ ವಲಯದ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್ಸ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ತವರಿನಲ್ಲಿ ಜೈಪುರ ಆರು ಪಂದ್ಯಗಳನ್ನು ಆಡಲಿದ್ದು ಎಲ್ಲ ಪಂದ್ಯಗಳಲ್ಲಿ ಗೆದ್ದರೆ ಸೂಪರ್‌ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವಿದೆ.

– ಶಂಕರನಾರಾಯಣ ಪಿ.

Advertisement

Udayavani is now on Telegram. Click here to join our channel and stay updated with the latest news.