ಮುಂಬಯಿ: ಬುಲ್ಲಿ ಬಾಯ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬಯಿ ಪೊಲೀಸರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ, ಉತ್ತರಾಖಂಡದ ಶ್ವೇತಾ ಸಿಂಗ್(18ವರ್ಷ) ಅನ್ನು ಬಂಧಿಸಿದ ಬೆನ್ನಲ್ಲೇ ಬುಧವಾರ ಈಶಾನ್ಯ ರಾಜ್ಯದಲ್ಲಿ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ವೀಕೆಂಡ್ ಕರ್ಪ್ಯೂ ಓಕೆ, ರಾಜ್ಯದೆಲ್ಲೆಡೆ ಯಾಕೆ?: ಸಚಿವ ಈಶ್ವರಪ್ಪ
ಇಂದು ಬೆಳಗ್ಗಿನ ಜಾವ ಮುಂಬಯಿ ಪೊಲೀಸರು ಮಯಾಂಕ್ ರಾವಲ್ (21ವರ್ಷ) ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ಎಂಬಾತನನ್ನು ಬಂಧಿಸಿದ್ದರು.
ಬುಲ್ಲಿ ಬಾಯ್ ಆ್ಯಪ್ ಪ್ರಕರಣದಲ್ಲಿ ಈವರೆಗೆ ಮೂವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನಷ್ಟು ಮಂದಿಯನ್ನು ಬಂಧಿಸಲು ಎದುರು ನೋಡುತ್ತಿರುವುದಾಗಿ ಮುಂಬಯಿ ಪೊಲೀಸ್ ಕಮಿಷನರ್ ಹೇಮಂತ್ ನರ್ಗಾಲೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ವಿದ್ಯಾರ್ಥಿನಿ ಶ್ವೇತಾ ಸಿಂಗ್ ಈ ಆ್ಯಪ್ ನ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಈಕೆ ಕೂಡಾ ಉತ್ತರಾಖಂಡ್ ಮೂಲದವಳಾಗಿದ್ದಾಳೆ. ಹಣಕ್ಕಾಗಿ ಶ್ವೇತಾ ಸಿಂಗ್ ಈ ಕೃತ್ಯ ಎಸಗಿರುವುದಾಗಿ ಉತ್ತರಾಖಂಡ್ ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷ ಕೋವಿಡ್ ಸೋಂಕಿನಿಂದ ಶ್ವೇತಾ ತಂದೆ ತೀರಿಕೊಂಡಿದ್ದು, ತಾಯಿ ಈ ಮೊದಲೇ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು ಎಂದು ವರದಿ ತಿಳಿಸಿದೆ.
ಸೋಮವಾರ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ವಿದ್ಯಾರ್ಥಿ ವಿಶಾಲ್ ಝಾನನ್ನು ಮುಂಬಯಿಯ ನ್ಯಾಯಾಲಯವು ಜ.10ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಅಲ್ಲದೇ ಬೆಂಗಳೂರಿನಲ್ಲಿರುವ ಆತನ ಮನೆ ಶೋಧಿಸಲು ಕೋರ್ಟ್ ಪೊಲೀಸರಿಗೆ ಅನುಮತಿ ನೀಡಿತ್ತು.