ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಸರಕಾರ ಬುಲೆಟ್ ಟ್ರೈನ್ ಯೋಜನೆಯನ್ನು ಹೊಸದಿಲ್ಲಿ – ಕೋಲ್ಕತಾ ಮಾರ್ಗದಲ್ಲಿ ಆರಂಭಿಸಬೇಕಿತ್ತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್ ಯಾದವ್ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಇಂದು ಗುರುವಾರ ಅಹ್ಮದಾಬಾದ್ – ಮುಂಬಯಿ ಮಾರ್ಗದಲ್ಲಿ ದೇಶದ ಮೊತ್ತ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಚಾಲನೆ ನೀಡಿದ್ದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ ಅಖೀಲೇಶ್ ಯಾದವ್ ಮಾಧ್ಯಮದ ಜತೆಗೆ ಮಾತನಾಡುತ್ತಾ, “ನಾವು ಕೂಡ ಬುಲಟ್ ಟ್ರೈನ್ ಯೋಜನೆಯನ್ನು ಆರಂಭಿಸಿದ್ದೆವು; ಆದರೆ ಅದು ಬಲು ದುಬಾರಿ ಖರ್ಚಿನ ಯೋಜನೆ. ಅದು ಕೊನೆಗೊಂಡಾಗಲೇ ಅದರ ಮಾರ್ಗ ಶುಲ್ಕ ಎಷ್ಟಾಗುವುದೆಂದು ಗೊತ್ತಾಗುವುದು’ ಎಂದು ಹೇಳಿದರು.
“ಗರಿಷ್ಠ ಬಡವರು ಮತ್ತು ನಿರುದ್ಯೋಗಿಗಳನ್ನು ಹೊಂದಿರುವ ಬಿಹಾರ ಮತ್ತು ಉತ್ತರ ಪ್ರದೇಶದ ಮೂಲಕವಾಗಿ ದಿಲ್ಲಿ ಮತ್ತು ಕೋಲ್ಕತ ನಡುವೆ ಬುಲೆಟ್ ಟ್ರೈನ್ ಯೋಜನೆಯನ್ನು ಆರಂಭಿಸಿದರೆ ನಿಜಕ್ಕೂ ಅಸಂಖ್ಯಾತ ಯುವ ಜನರಿಗೆ ಅದರಿಂದ ಲಾಭವಾಗುತ್ತದೆ’ ಎಂದು ಅಖೀಲೇಶ್ ಹೇಳಿದರು.
ಅಹ್ಮದಾಬಾದ್ – ಮುಂಬಯಿ ಪ್ರಯಾಣದ ಈಗಿನ ಏಳು ತಾಸುಗಳ ಅವಧಿಯು 1.10 ಲಕ್ಷ ಕೋಟಿ ರೂ. ವೆಚ್ಚದ ಬುಲೆಟ್ ಟ್ರೈನ್ ಯೋಜನೆಯಿಂದಾಗಿ ಕೇವಲ ಮೂರು ತಾಸಿಗೂ ಕಡಿಮೆ ಅವಧಿಗೆ ಇಳಿಯಲಿದ್ದು ಮೋದಿ ಸರಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಾದ ದಿನವೇ ಅಖೀಲೇಶ್ ಯಾದವ್ ಅದನ್ನು ಟೀಕಿಸಿ ಮಾತನಾಡಿರುವುದು ಗಮನಾರ್ಹವಾಗಿದೆ.
ಅಹ್ಮದಾಬಾದ್ -ಮುಂಬಯಿ 508 ಕಿ.ಮೀ. ಉದ್ದದ ಬುಲೆಟ್ ಟ್ರೈನ್ ಯೋಜನೆಯು 2022ರೊಳಗೆ ಮುಗಿಯುವ ನಿರೀಕ್ಷೆ ಇದೆ.