ನವದೆಹಲಿ : ನೋಯ್ಡಾದಲ್ಲಿ ಬಿಜೆಪಿ ಮುಖಂಡನ ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಿರುವುದು ಕೇವಲ ಪ್ರದರ್ಶನಕ್ಕಾಗಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
ನೋಯ್ಡಾದ ಹೌಸಿಂಗ್ ಸೊಸೈಟಿಯ ಮಹಿಳೆಯೊಬ್ಬರ ಹಲ್ಲೆ ನಡೆಸಿದ್ದ ಆರೋಪದ ಮೇಲೆ ಬಿಜೆಪಿಯ ಕಿಸಾನ್ ಮೋರ್ಚಾದ ಸದಸ್ಯ ಶ್ರೀಕಾಂತ್ ತ್ಯಾಗಿಯ ಕಾನೂನು ಬಾಹಿರ ಆಸ್ತಿಗಳನ್ನು ಗುರುತಿಸಿ, ಅದರಲ್ಲಿ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಅತಿಕ್ರಮಣದ ಸ್ಥಳದಲ್ಲಿದ್ದ ನಿವಾಸವನ್ನು ಬುಲ್ಡೋಜರ್ ಬಳಸಿ ಸೋಮವಾರ ನೆಲಸಮ ಮಾಡಲಾಗಿದೆ . ಈ ವಿಚಾರ ಭಾರಿ ಸುದ್ದಿಯಾಗಿ ಉತ್ತರಪ್ರದೇಶದಲ್ಲಿ ಪಕ್ಷ ಭೇದವಿಲ್ಲದೆ ಯಾವುದೇ ಅಕ್ರಮಕ್ಕೆ ಅವಕಾಶವಿಲ್ಲ ಎಂದು ಭಾರಿ ಚರ್ಚೆಯಾಗಿತ್ತು.
ತೀವ್ರ ಆಕ್ರೋಶ ಹೊರ ಹಾಕಿರುವ ಪ್ರಿಯಾಂಕಾ, ಸರಕಾರಕ್ಕೆ ಹಲವು ವರ್ಷಗಳಿಂದ ಆತ ಅಕ್ರಮವಾಗಿ ನಿರ್ಮಾಣ ಮಾಡಿದ್ದುದು ತಿಳಿದಿರಲಿಲ್ಲವೇ? ಸರಕಾರ ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದರಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಮತ್ತು 10-15 ಗೂಂಡಾಗಳನ್ನು ಕಳುಹಿಸುವ ಮೂಲಕ ಮಹಿಳೆಯರಿಗೆ ಬಹಿರಂಗವಾಗಿ ಬೆದರಿಕೆ ಹಾಕಲು ಅವನಿಗೆ ಯಾರು ಧೈರ್ಯ ನೀಡುತ್ತಿದ್ದಾರೆ? ಅವರನ್ನು ಉಳಿಸಿದವರು ಯಾರು,” ಎಂದು ಪ್ರಶ್ನಿಸಿದ್ದಾರೆ.
ಯಾರ ರಕ್ಷಣೆಯಲ್ಲಿ ತ್ಯಾಗಿಯ ಗೂಂಡಾಗಿರಿ ಮತ್ತು ಅಕ್ರಮ ವ್ಯವಹಾರಗಳು ಪ್ರವರ್ಧಮಾನಕ್ಕೆ ಬಂದವು ಎಂದು ಪ್ರಶ್ನಿಸಿರುವ ಪ್ರಿಯಾಂಕಾ ಗಾಂಧಿ ಜೆಪಿ ನಡ್ಡಾ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ತ್ಯಾಗಿ ಅವರ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ. ಸದ್ಯ ತ್ಯಾಗಿ ತಲೆ ಮರೆಸಿಕೊಂಡಿದ್ದಾನೆ.