Advertisement

ಬುಜ್ಜಿ ಭೀಮ; ರೈತ ಸಾಕಿದ ಅಜಾನುಬಾಹು ಕೋಣಕ್ಕೆ ಭಾರೀ ಬೇಡಿಕೆ

09:49 PM Jul 30, 2023 | Team Udayavani |

ಮಹಾಲಿಂಗಪುರ : ಜಾನುವಾರುಗಳು ನಮ್ಮ ರೈತರ ನಿಜವಾದ ಮಿತ್ರರು ಹಾಗೂ ಜಾನುವಾರು ಸಾಕಾಣಿಕೆಯು ಕೃಷಿಯ ಒಂದು ಭಾಗವಾಗಿದೆ. ಜಾನುವಾರುಗಳು ಇದ್ದರೇ ಮಾತ್ರ ರೈತ, ಇಲ್ಲದಿದ್ದರೇ ಅವನು ನಿಜವಾದ ರೈತನೇ ಅಲ್ಲ ಎಂಬ ಮಾತುಗಳು ನಮ್ಮ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೇಳಿಬರುತ್ತವೆ. ಹಾಲು ಕೊಡುವ ಎಮ್ಮೆಗಳ ಜೊತೆಗೆ ಕೋಣವನ್ನು ಬೆಳೆಸಿ ಎಲ್ಲ ರೈತರ ಗಮನ ಸೆಳೆಯುತ್ತಿರುವ ಅಪರೂಪದ ಯುವ ರೈತನೊಬ್ಬನ ಮಾದರಿ ಜಾನುವಾರು ಸಾಕಾಣಿಕೆಯ ಪ್ರೀತಿಯನ್ನು ಇಲ್ಲಿ ಕಾಣಬಹುದಾಗಿದೆ.

Advertisement

ಜಾನುವಾರು ಪ್ರೀತಿ
ಮಹಾಲಿಂಗಪುರ ಪಟ್ಟಣದ ಹೊರವಲಯದಲ್ಲಿನ ರನ್ನಬೆಳಗಲಿ ಸರಹದ್ದಿನಲ್ಲಿರುವ ಸಿದ್ದು ಮಹಾದೇವ ಧರಿಗೌಡರ ಕೇವಲ ಎರಡುವರೆ ಎಕರೆ ಜಮೀನು ಹೊಂದಿದ ರೈತನಾಗಿದ್ದು. ಇವರು ಎರಡು ಸಾಮಾನ್ಯ ಎಮ್ಮೆಗಳು, ಕರುಗಳು, ಆಡುಗಳ ಜೊತೆಗೆ ಮನೆಯಲ್ಲಿಯೇ ಹುಟ್ಟಿದ ಗುಜರಾತಿನ ಮರ‍್ರಾ ತಳಿಯ ಕೋಣವನ್ನು ಮನೆಯ ಮಗನಂತೆ ಕಾಳಜಿವಹಿಸಿ ಬೆಳೆಸಿ ಸಾಕುತ್ತಿರುವದು ವಿಶೇಷ. ಇವರ ಸಹೋದರ, ಖಾಸಗಿ ಬ್ಯಾಂಕ್ ಉದ್ಯೋಗಿ ಶ್ರೀಶೈಲ ಧರಿಗೌಡರ ಇವರ ಜಾನುವಾರು ಪ್ರೀತಿಗೆ ಬೆಂಬಲವಾಗಿ ನಿಂತಿದ್ದಾರೆ.

ಕೋಣಕ್ಕೂ ಹುಟ್ಟುಹಬ್ಬದ ಸಂಭ್ರಮ
ಸಿದ್ದು ಅವರು ಸಾಕಿದ ಕೋಣಕ್ಕೆ ರವಿವಾರ ಎರಡನೇ ವರ್ಷದ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮನೆಯ ಎಮ್ಮೆ ಹಾಕಿದ ಗಂಡು ಕರುವನ್ನು ಪ್ರೀತಿಯಿಂದ ಮನೆಯ ಸದಸ್ಯನಂತೆ ಸಾಕಿದ್ದಾರೆ. ಅದಕ್ಕೆ ಬುಜ್ಜಿ ಮತ್ತು ಭೀಮ ಎಂಬ ಹೆಸರಿಟ್ಟಿದ್ದಾರೆ. ರವಿವಾರಕ್ಕೆ ಎರಡು ವರ್ಷ ತುಂಬಿದ ಬುಜ್ಜಿಗೆ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸಿದರು.

ಕೋಣದ ಹುಟ್ಟುಹಬ್ಬದ ದಿನ ರವಿವಾರ ಮುಂಜಾನೆ ಮೈ ತೊಳೆದು, ಬಣ್ಣ ಬಣ್ಣದ ಹಗ್ಗ, ರಿಬ್ಬನ್, ಮತ್ತು ಹೂಮಾಲೆಯೊಂದಿಗೆ ಅಲಂಕರಿಸಿ ಕೋಣದ ಭಾವಚಿತ್ರವಿರುವ ಬ್ಯಾನರ್ ತಯಾರಿಸಿ, ಪೆಂಡಾಲ್ ಹಾಕಿಸಿ, ಕೇಕ್ ಕತ್ತರಿಸಿ ನೂರಾರು ರೈತ ಬಾಂಧವರನ್ನು, ಬೀಗರನ್ನು ಆಹ್ವಾನಿಸಿ ಊಟ ಮಾಡಿಸುವ ಮೂಲಕ ಬುಜ್ಜಿ(ಭೀಮ)ಬರ್ತಡೇ ಮಾಡಿ ಗಮನ ಸೆಳೆದರು. ಫೋಟೋ ಗ್ರಾಫರ್‌ನ ಕರೆಸಿ ಎಲ್ಲ ಗೆಳೆಯರು ಮತ್ತು ಕುಟುಂಬದ ಸದಸ್ಯರನ್ನು ಕರೆದುಕೊಂಡು ಬುಜ್ಜಿ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.

Advertisement

ಆನೆಯಲ್ಲ, ಅಜಾನುಬಾಹು ಕೋಣ
ಕೇವಲ ಎರಡು ವರ್ಷದ ಕೋಣವು ನೋಡಲು 4-5 ವರ್ಷದ ಕೋಣದಂತೆ ಕಾಣಿಸುತ್ತದೆ. ಈ ಕೋಣಕ್ಕೆ ಮೇವಿನೊಂದಿಗೆ ನಿತ್ಯ 6 ಲೀಟರ್ ಹಾಲು, 3 ಕೆಜಿ ಹಿಂಡಿ, 2 ಕೆಜಿ ಹಿಟ್ಟು, ಆಗಾಗ ಆಪಲ್ ಹಣ್ಣುಗಳನ್ನು ತಿನ್ನಿಸುತ್ತಾರೆ. ಜೊತೆಗೆ ನಿತ್ಯ 3 ಕೀಮಿ ವಾಕಿಂಗ್ ಮಾಡಿಸುತ್ತಿರುವದು ವಿಶೇಷ. ಯಾವುದಕ್ಕೂ ಕಡಿಮೆ ಮಾಡದೇ ಕಾಳಜಿಯಿಂದ ಮೇಯಿಸಿದ ಪರಿಣಾಮ ಕೋಣವು ಎರಡು ವರ್ಷದಲ್ಲಿ ದಷ್ಟಪುಷ್ಟವಾಗಿ ಬೆಳೆದು ಆನೆಯಂತೆ ಕಾಣುತ್ತಿದೆ. ಸಾಮಾನ್ಯ ಕೋಣ 4-5 ವರ್ಷದ ನಂತರ ಯಾವ ಗಾತ್ರ ಬೆಳೆಯುತ್ತದೆಯೋ ಆ ಗಾತ್ರದಷ್ಟು ಎರಡೇ ವರ್ಷದಲ್ಲಿ ಬೆಳೆದಿರುವುದು ವಿಶೇಷ. ಇದರ ಗಾತ್ರ, ಅಂದ ಚೆಂದ ನೋಡಿದವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.

3 ಲಕ್ಷಕ್ಕೂ ಅಧಿಕ ಬೇಡಿಕೆ
ಈ ಅಜಾನುಬಾಹು ಕೋಣವನ್ನು ಕೆಲವರು ಈಗಾಗಲೇ 3 ಲಕ್ಷ ರೂ. ಬೆಲೆ ಕಟ್ಟಿ ಖರೀದಿಸಲು ಕೇಳಿದ್ದಾರೆ. ಆದರೂ ಸಿದ್ದು ಇದನ್ನು ಮಾರಿಲ್ಲ. ಕೋಣವು ಹಲ್ಲು ಹಚ್ಚಲು ಇನ್ನು ಒಂದು ವರ್ಷಬೇಕು. ನಮಗೆ ಲಾಭದ ಉದ್ದೇಶವಿಲ್ಲ, ಬಹಳ ಪ್ರೀತಿಯಿಂದ ಸಾಕುತ್ತಿದ್ದೇವೆ. ಸದ್ಯಕ್ಕೆ ಮಾರಾಟ ಮಾಡುವದಿಲ್ಲ ಎನ್ನುತ್ತಾರೆ ಸಿದ್ದು ಧರಿಗೌಡರ.

ಕೋಣ ಎಂಬುದು ದಡ್ಡನಿಗೆ ಬಳಸುವ ಬೈಗುಳ ಮತ್ತು ಯಮನ ವಾಹನ ಎಂಬ ನಕಾರಾತ್ಮಕ ಸಂಬೋಧನೆ ಎಂಬ ಅಭಿಪ್ರಾಯವಿದೆ. ಎಮ್ಮೆ ಸಾಕಿದರೆ ಹೈನು, ಕೋಣ ಸಾಕಿದರೆ ಏನು? ಎಂಬ ತಾತ್ಸಾರವೂ ಜನರಲ್ಲಿದೆ. ಎಮ್ಮೆ ಗಂಡು ಕರುವಿಗೆ ಜನ್ಮವಿತ್ತರೆ ಅಯ್ಯೋ ಕೋಣ ಹುಟ್ಟಿತು ಎಂದು ಮೂಗು ಮುರಿಯುವವರೂ ಇದ್ದಾರೆ. ಈ ಎಲ್ಲ ಉದ್ಗಾರಗಳ ಮಧ್ಯೆ ಕೋಣವನ್ನು ಪ್ರೀತಿಯಿಂದ ಸಾಕಿ, ಮಮತೆಯಿಂದ ಮೇಯಿಸಿ ಕುಟುಂಬ ಸದಸ್ಯರಂತೆ ಆರೈಕೆ ಮಾಡುತ್ತಿರುವ ರೈತ ಸಿದ್ದು ಧರಿಗೌಡರ ಅವರ ಜಾನುವಾರು ಪ್ರೀತಿ ಕಾರ್ಯ ಇತರರಿಗೆ ಮಾದರಿಯಾಗಿದೆ.
– ಗಿರೀಶ ಶಿರೋಳ. ಪ್ರಗತಿಪರ ರೈತರು. ರನ್ನಬೆಳಗಲಿ.

ಮೊದಲಿನಿಂದಲೂ ಜಾನುವಾರುಗಳೆಂದರೆ ಹೆಚ್ಚು ಪ್ರೀತಿ, ನಾವು ಅವುಗಳನ್ನು ಸಾಕುತ್ತೇವೆ ಎನ್ನುವುದಕ್ಕಿಂತ ಅವುಗಳೇ ನಮಗೆ ಲಾಭದಾಯಕ ಜೀವಿಗಳು. ಆದ್ದರಿಂದ ಈ ಕೋಣಕ್ಕೆ ಸಾತ್ವಿಕ ಆಹಾರ ತಿನ್ನಿಸಿ ಅಜಾನುಬಾಹುವಾಗಿ ಬೆಳೆಸಿದ್ದೇನೆ. ನೋಡಲು ದೊಡ್ಡ ಗಾತ್ರವಿದ್ದರೂ ಯಾರನ್ನೂ ಹಾಯಿವುದಿಲ್ಲ, ಮಕ್ಕಳಾದಿಯಾಗಿ ಎಲ್ಲರೊಂದಿಗೆ ಆಪ್ತವಾಗಿ ಸ್ಪಂದಿಸುತ್ತದೆ. ಅದರ ಮಾನವೀಯ ಗುಣ ನೋಡಿ ನಮಗೂ ಪ್ರೀತಿ ಹೆಚ್ಚಾಗಿ ನಮ್ಮಂತೆ ಅದಕ್ಕೂ ಬರ್ತಡೇ ಮಾಡಿ ಕೇಕ್ ತಿನ್ನಿಸಿ, ಸಂಭ್ರಮಿಸಿದ್ದೇವೆ. ಮುಂಬರುವ ದಿನಗಳಲ್ಲಿ ಕೋಣವನ್ನು ಕೃಷಿಮೇಳಗಳಲ್ಲಿ ನಡೆಯುವ ಜಾನುವಾರು ಪ್ರದರ್ಶನಕ್ಕೆ ಒಯ್ಯಬೇಕೆಂಬ ಇಚ್ಛೆ ಇದೆ.
– ಸಿದ್ದು ಮಹಾದೇವ ಧರಿಗೌಡರ ಕೋಣದ ಮಾಲೀಕ, ರನ್ನಬೆಳಗಲಿ.

ವರದಿ : ಚಂದ್ರಶೇಖರ ಮೋರೆ. ಮಹಾಲಿಂಗಪುರ.

Advertisement

Udayavani is now on Telegram. Click here to join our channel and stay updated with the latest news.

Next