ಹಾವೇರಿ: ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶರಾದ ಪುಟ್ಟರಾಜು ಭೇಟಿ ನೀಡಿ ಕಟ್ಟಡ ಕಾರ್ಮಿಕರ ಕುಂದುಕೊರತೆಗಳ ಕುರಿತಂತೆ ವಿಚಾರಿಸಿದರು.
ಸ್ಥಳೀಯ ದೇವಗಿರಿಯಲ್ಲಾಪುರದ ಬಳಿ ಅಂದಾಜು 478 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ, ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ಕಲ್ಪಿಸಿರುವ ಸೌಲಭ್ಯಗಳು, ಕಾರ್ಮಿಕರಿಗಾಗಿ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಮಾಹಿತಿ ಪಡೆದುಕೊಂಡರು.
ಈವರೆಗೆ ಇ-ಶ್ರಮ ಕಾರ್ಮಿಕ ಕಾರ್ಡ್ ನೀಡಿದ ಅಸಂಘಟಿತ ಕಾರ್ಮಿಕರಿಗೆ ವಾರದೊಳಗೆ ಕಾರ್ಡ್ ವಿತರಿಸಲು ಕ್ರಮ ವಹಿಸಬೇಕು. ಕಾರ್ಮಿಕ ಸೌಲಭ್ಯಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ತಾವು ಕಾರ್ಯಕ್ರಮ ಆಯೋಜಿಸಿದರೆ ಸಣ್ಣ ಸಣ್ಣ ಕಾರ್ಮಿಕ ಗುಂಪುಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ಮಾಹಿತಿ ಹಾಗೂ ನೆರವು ನೀಡಲಾಗುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೈದ್ಯಕೀಯ ಕಾಲೇಜು ಕಟ್ಟಡದಲ್ಲಿ ಅಂದಾಜು 375 ಕಾರ್ಮಿಕರು ವಿವಿಧ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಮಿಕರಿಗೆ ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡವರಿಗೆ ಇ-ಶ್ರಮ ಕಾರ್ಡ್ ನೀಡಲಾಗುತ್ತಿದೆ. ಬಹುಪಾಲು ಕಾರ್ಮಿಕರು ಆಧಾರ್ ಕಾರ್ಡ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಆದಾಗ್ಯೂ ಅವರ ಮನವೊಲಿಸಿ ದಾಖಲೆ ಪಡೆದು ನೋಂದಾಯಿಸಿಕೊಂಡು ಕಾರ್ಮಿಕ ಕಾರ್ಡ್ ನೀಡಲು ಕ್ರಮ ವಹಿಸಲಾಗಿದೆ. ಈಗಾಗಲೇ 45 ಜನರ ಮಾಹಿತಿ ಪಡೆದು ಕಾರ್ಮಿಕ ಕಾರ್ಡ್ ವಿತರಿಸುವ ಕುರಿತಂತೆ ಕ್ರಮ ವಹಿಸಲಾಗಿದೆ.
75 ಕಾರ್ಮಿಕರ ಮಾಹಿತಿ ಸಂಗ್ರಹಿಸಿ ನೋಂದಣಿಗೆ ಕ್ರಮವಹಿಸಲಾಗಿದೆ. ಪದೇ ಪದೆ ಕಾರ್ಮಿಕರು ಬದಲಾಗುವುದರಿಂದ ದಾಖಲೆ ಪಡೆಯುವುದು ಕಷ್ಟಕರ. ಆದಾಗ್ಯೂ ಆಧಾರ್ ಕಾರ್ಡ್ ಪಡೆದು ಕಾರ್ಮಿಕರಿಗೆ ಕಾರ್ಡ್ ವಿತರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಈ ಸಂಬಂಧ ವೈದ್ಯಕೀಯ ಕಾಲೇಜು ಎಂಜಿನಿಯರ್‌ಗಳೊಂದಿಗೆ ಸಂಪರ್ಕ ಸಾಧಿಸಿ ಕಾರ್ಮಿಕ ಕಾರ್ಡ್ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರಮತ್ತೂರ ಮಾಹಿತಿ ನೀಡಿದರು. ಗುತ್ತಿಗೆದಾರ ಕಂಪನಿಯ ಅಭಿಯಂತರರು ಹಾಗೂ ವಿವಿಧ ಕಾರ್ಮಿಕರು, ಸುರಕ್ಷಾ ಸಾಮಗ್ರಿ, ಕಾರ್ಮಿಕ ಸೌಲಭ್ಯಗಳ ಕುರಿತಂತೆ ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.
ಈವರೆಗೆ ಇ-ಶ್ರಮ ಕಾರ್ಮಿಕ ಕಾರ್ಡ್ ನೀಡಿದ ಅಸಂಘಟಿತ ಕಾರ್ಮಿಕರಿಗೆ ವಾರದೊಳಗೆ ಕಾರ್ಡ್ ವಿತರಿಸಲು ಕ್ರಮ ವಹಿಸಬೇಕು. ಕಾರ್ಮಿಕ ಸೌಲಭ್ಯಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ ತಾವು ಕಾರ್ಯಕ್ರಮ ಆಯೋಜಿಸಿದರೆ ಸಣ್ಣ ಸಣ್ಣ ಕಾರ್ಮಿಕ ಗುಂಪುಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಅಗತ್ಯ ಮಾಹಿತಿ ಹಾಗೂ ನೆರವು ನೀಡಲಾಗುವುದು.
-ಪುಟ್ಟರಾಜು, ಹಿರಿಯ ನ್ಯಾಯಾಧೀಶರು