Advertisement

ಕಟ್ಟಡ ಕಾರ್ಮಿಕರಿಗೆ ಶೀಘ್ರವೇ ಕೌಶಲ್ಯ ತರಬೇತಿ

06:15 AM Jan 05, 2018 | Team Udayavani |

ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ಕಾಲಕ್ಕೆ ತಕ್ಕ ಹಾಗೂ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ತರಬೇತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಇದಕ್ಕಾಗಿ “ಶ್ರಮ ಸಾಮರ್ಥಯ ಯೋಜನೆ’ ಅನುಷ್ಠಾನಕ್ಕೆ ತರುತ್ತಿದೆ.
ಶ್ರಮ ಸಾಮರ್ಥಯ ಯೋಜನೆಯಡಿ ಪ್ರಸಕ್ತ ವರ್ಷ 37,400 ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡಲು ಗುರಿ ಇಟ್ಟುಕೊಳ್ಳಲಾಗಿದ್ದು, ಒಂದೆರಡು ವಾರಗಳಲ್ಲಿ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ.

Advertisement

ಪ್ರತಿ ವರ್ಷ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗುವ ಸುಂಕದ ಶೇ.20ರಷ್ಟು ಮೊತ್ತವನ್ನು ನೊಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಮತ್ತು ಅವರ ಅವಲಂಬಿತರ ಕೌಶಲ್ಯ ಅಭಿವೃದ್ಧಿಗೆ ಬಳಸಬಹುದಾಗಿದೆ. ಇದರಲ್ಲಿ ಪ್ರತಿ ವರ್ಷ ಶೇ.10ರಷ್ಟು ನೊಂದಾಯಿತ ಕಾರ್ಮಿಕರಿಗೆ ತರಬೇತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿಂದ ಶ್ರಮ ಸಾಮರ್ಥಯ ಯೋಜನೆ ಜಾರಿಗೆ ತರಲಾಗಿದೆ.

ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದ್ಯ ಒಟ್ಟು 11 ಲಕ್ಷ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ. ಅದರಲ್ಲಿ 2017-18ನೇ ಆರ್ಥಿಕ ವರ್ಷದಲ್ಲಿ 99.88 ಕೋಟಿ ರೂ. ವೆಚ್ಚದಲ್ಲಿ 18ರಿಂದ 45 ವರ್ಷದೊಳಗಿನ 37.400 ಕಾರ್ಮಿಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಕಾರ್‌ಪೆಂಟರಿಂಗ್‌, ಬಾರ್‌ಬೈಂಡಿಂಗ್‌, ಪೇಂಟರ್‌, ಪ್ಲಂಬರ್‌ ಸೇರಿದಂತೆ ನಿರ್ಮಾಣ ಕ್ಷೇತ್ರದ 21 ಟ್ರೇಡ್‌ಗಳನ್ನು ಗುರುತಿಸಲಾಗಿದೆ. ಈಗಾಗಲೇ ಫ‌ಲಾನುಭವಿಗಳ ಆಯ್ಕೆ ಮುಗಿದಿದೆ. ಎಲ್ಲ ಸಿದ್ದತೆಗಳು ಪೂರ್ಣಗೊಂಡಿದ್ದು, ಜನೆವರಿ ಎರಡನೇ ವಾರದಿಂದ ಯೋಜನೆಗೆ ಚಾಲನೆ ಸಿಗಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತರಬೇತಿ ಹೇಗೆ:
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ವಸತಿ ಶಾಲೆಯ ಕೌಶಲ್ಯ ಶಾಲೆ, ಕಾರ್ನಿಕ್‌ ಸಂಸ್ಥೆ, ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರಗಳುನ್ನು ಗುರುತಿಸಿ ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 20 ಜಿಲ್ಲಾ ನಿರ್ಮಿತಿ ಕೇಂದ್ರಗಳನ್ನು ಕೈಗೆತ್ತಿಕೊಳ್ಳಲು ಮುಂದೆ ಬಂದಿವೆ. ಕಾರ್ಮಿಕರಿಗೆ ತರಬೇತಿ ನೀಡಲು ಸ್ಥಳೀಯವಾಗಿ ಆಯ್ಕೆ ಮಾಡಿಕೊಂಡ ತರಬೇತುದಾರರಿಗೆ ಸರ್ಕಾರಿ ಐಟಿಐ,, ಸೊಸೈಟಿ ಫಾರ್‌ ಭಾರತರತ್ನ ಸರ್‌ ಎಂ. ವಿಶ್ವೇಶ್ವರಯ್ಯ ನ್ಯಾಷನಲ್‌, ಟ್ರೈನಿಂಗ್‌ ಫೆಸಿಲಿಟಿ ಫಾರ್‌ ಸ್ಕಿಲ್‌ ಫಾರ್‌ ಆಲ್‌ ಹಾಗೂ ಕಾರ್ಪೋರೇಟ್‌ ಸಂಸ್ಥೆಗಳ ಸಹಯೋಗದಲ್ಲಿ ವೃತ್ತಿವಾರು ತರಬೇತಿ ನೀಡಲಾಗುತ್ತದೆ. ಪ್ರತಿ ದಿನ 8 ಗಂಟೆ ತರಬೇತಿ ಅವಧಿ ಇದ್ದು ಗರಿಷ್ಠ 30 ದಿನಗಳ ತರಬೇತಿ ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಕಾರ್ಮಿಕರಿಗೆ ವೃತ್ತಿಗನುಗುಣವಾಗಿ ಸಮವಸ್ತ್ರ, ರಕ್ಷಣಾ ಸಲಕರಣೆಗಳಾದ ಹೆಲ್ಮೆಟ್‌, ಕಣ್ಣು ಮತ್ತು ಕವಿ ರಕ್ಷಣಾ ಕವಚ, ಬೂಟ್ಸ್‌ ಸೇಫ್ಟಿ ಬೆಲ್ಟ್, ಡಸ್ಟ್‌, ಮಾಸ್ಕ್, ಹ್ಯಾಂಡ್‌ ಗ್ಲೌಸ್‌, ರಿಪ್ಲೆಕ್ಟರ್‌ ಜಾಕೆಟ್‌, ಎಲೆಕ್ಟ್ರಿಕಲ್‌ ಗ್ಲೌಸ್‌, ಮ್ಯಾಟ್‌, ರಬ್ಬರ್‌ ಶೂ ಇತ್ಯಾದಿಗಳನ್ನು ಕೊಡಲಾಗುತ್ತದೆ.

ತರಬೇತಿಯ ಸಂದರ್ಭದಲ್ಲಿ ಫ‌ಲಾನುಭವಿಗಳಿಗೆ ಪ್ರತಿ ದಿನದ 250ರಿಂದ 300 ರೂ. ಭತ್ಯೆ ಸಹ ನೀಡಲಾಗುತ್ತದೆ. ಅಲ್ಲದೇ ತರಬೇತಿ ಅವಧಿಯಲ್ಲಿ ಕಾರ್ಮಿಕರು ಕೆಲಸಕ್ಕೆ ಹೋಗಲು ಸಾಧ್ಯವಿಲ್ಲದ ಕಾರಣ ಅವರ ಒಂದು ದಿನದ ವೇತನಕ್ಕೆ ಪರಿಹಾರ ಸಹ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ಕಾರ್ಮಿಕರಿಗೆ ವೃತ್ತಿಗೆ ಅನುಗುಣವಾಗಿ 2 ಸಾವಿರದಿಂದ 5 ಸಾವಿರದವರೆಗಿನ ಮೊತ್ತದ ಉಪಕರಣಗಳ ಕಿಟ್‌ ಹಾಗೂ ಪ್ರಮಾಣಪತ್ರ ಸಹ ನೀಡಲಾಗುತ್ತದೆ. ಮೊದಲ ಹಂತದಲ್ಲಿ 37 ಸಾವಿರ ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ಹಂತಗಳಲ್ಲಿ ಉಳಿದ ಕಾರ್ಮಿಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು ಎಂದು ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

“ಬದಲಾದ ಕಾಲ ಮತ್ತು ತಂತ್ರಜ್ಞಾನಕ್ಕೆ ತಕ್ಕಂತೆ ಕಟ್ಟಡ ಕಾರ್ಮಿಕರಿಗೆ ತರಬೇತಿ ಅವಶ್ಯಕವಾಗಿದೆ. ಶ್ರಮ ಸಾಮರ್ಥಯ ಯೋಜನೆಯಡಿ ಕಟ್ಟಡ ಕಾರ್ಮಿಕರಿಗೆ ತರಬೇತಿ ನೀಡುವ ಸರ್ಕಾರದ ಕ್ರಮ ಸ್ವಾಗತಾರ್ಹ. ಆದರೆ, ಇದು ಎಷ್ಟೊಂದು ಪರಿಣಾಮಕಾರಿಯಾಗು ಅನುಷ್ಠಾನಗೊಳ್ಳುತ್ತದೆ ಎಂಬುದುರ ಮೇಲೆ ಇದರ ಯಶಸ್ಸು ಅವಲಂಬಿತವಾಗಿದೆ’.
– ಎನ್‌.ಪಿ. ಸಾಮಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕೇಂದ್ರ ಒಕ್ಕೂಟ.

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next