Advertisement

ಉದ್ಘಾಟನೆ ಮುನ್ನ ದುರಸ್ತಿಗೆ ಕಾದಿದೆ ಕಟ್ಟಡ

03:57 PM Dec 08, 2018 | |

ಗದಗ: ನಗರದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾರ್ಮಿಕ ಇಲಾಖೆ ಕಚೇರಿ ಹಾಗೂ ಸಮುದಾಯ ಭವನ ಸಿದ್ಧಗೊಂಡು ವರ್ಷ ಕಳೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಘಾಟನೆ ಭಾಗ್ಯ ಕಂಡಿಲ್ಲ. ಪರಿಣಾಮ ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಒಳಗಾಗಿರುವ ನೂತನ ಕಟ್ಟಡ ಬಳಕೆಗೂ ಮುನ್ನವೇ ದುರಸ್ತಿಗೆ ಕಾದು ನಿಂತಿದೆ!

Advertisement

ಹೌದು. ಜಿಲ್ಲೆಯ ಹಲವು ಇಲಾಖೆಗಳಿಗೆ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಬೆಟಗೇರಿಯ ಸೆಟ್ಲಮೆಂಟ್‌ನಲ್ಲಿರುವ ಕಾರ್ಮಿಕ ಸಮುದಾಯ ಭವನ ಮತ್ತು ಕಚೇರಿಯ ನೂತನ ಕಟ್ಟಡ ವರ್ಷಗಳಿಂದ ಖಾಲಿ ಬಿದ್ದಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ 1.15 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸುಮಾರು 40ಗಿ80 ಅಡಿ ಅಳತೆಯಲ್ಲಿ ಅಂಡರ್‌ ಗ್ರೌಂಡ್‌ ಹಾಗೂ ಎರಡು ಅಂತಸ್ತಿನ ಭವ್ಯ ಕಟ್ಟಡ ನಿರ್ಮಿಸಲಾಗಿದೆ.

ದುಸ್ತಿಸ್ಥಿಯಲ್ಲಿ ನೂತನ ಕಟ್ಟಡ:
2010ರ ನ. 30ರಂದು ಆರಂಭಗೊಂಡಿದ್ದ ಕಾರ್ಮಿಕ ಕಚೇರಿ ಸಂಕೀರ್ಣ ನಿರ್ಮಾಣ ಕಾರ್ಯ 2012ರಲ್ಲೇ ಪೂರ್ಣಗೊಂಡಿತು. ನೂತನ ಕಚೇರಿಗೆ ಹಸ್ತಾಂತರಕ್ಕೆ ಸಂಬಂಧಿಸಿ ಹಲವು ಬಾರಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪತ್ರ ಬರೆದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಆಸಕ್ತಿ ತೋರಿಲ್ಲ. 2017ರ ಡಿ. 4ರಂದು ಕಾರ್ಮಿಕ ಅಧಿಕಾರಿಗಳು ಕಟ್ಟಡವನ್ನು ಸ್ವೀಕರಿಸಿದರೂ ಬಳಕೆ ಮಾಡುವ ಸ್ಥಿತಿಯಲ್ಲಿರಲಿಲ್ಲ. ವರ್ಷಗಳಿಂದ ನಿರ್ಜನ ಪ್ರದೇಶದಂತಿದ್ದ ಕಾರ್ಮಿಕ ಭವನದಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಕಟ್ಟಡ ಪೋಲಿಗಳ ತಾಣವಾಗಿದ್ದರಿಂದ ಕಟ್ಟಡದ ಎಲ್ಲ ಕಿಡಿಕಿಗಾಜು ಪುಡಿಯಾಗಿವೆ. ಒಂದೆರಡು ಬಾಗಿಲು ಕಿತ್ತು ಹೋಗಿವೆ ಎಂಬುದು ಗಮನಾರ್ಹ. ಅಲ್ಲದೇ, ಕಾರ್ಮಿಕ ಇಲಾಖೆ ಸದ್ಯ ಜಿಲ್ಲಾಡಳಿತ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಖಾಲಿ ಇರುವ ಕಟ್ಟಡವನ್ನು ಬಾಡಿಗೆ ನೀಡುವಂತೆ ಹಿಂದಿನ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಹಲವು ಸಭೆಗಳಲ್ಲಿ ಸಲಹೆ ನೀಡಿದರೂ ಕಾರ್ಮಿಕ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಕಾರ್ಮಿಕ ಭವನಕ್ಕೆ ಇಬ್ಬರು ಕಾವಲುಗಾರರನ್ನು ನೇಮಿಸಿದ್ದು ಬಿಟ್ಟರೆ, ಅದರ ದುರಸ್ತಿ ಹಾಗೂ ಸದ್ಬಳಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಮಿಕ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

ಜಲಾಗಾರವಾದ ಅಂಡರ್‌ಗ್ರೌಂಡ್‌
ಕಾರ್ಮಿಕ ಕಚೇರಿ ಸಂಕೀರ್ಣದಲ್ಲಿ ನೆಲ ಮತ್ತು ಮೊದಲ ಮಹಡಿಯನ್ನು ಕಾರ್ಮಿಕ ಇಲಾಖೆ ಕಚೇರಿಗೆ ಹಾಗೂ ಮೂರನೇ ಸಭಾಂಗಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಅಂತಸ್ಥಿನಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸುಸಜ್ಜಿತ ತಲಾವೊಂದು ಶೌಚಾಲಯವನ್ನೂ ನಿರ್ಮಿಸಲಾಗಿತ್ತು. ಆದರೆ ಕಿಡಿಗಳೇಡಿಗಳ ಕೃತ್ಯದಿಂದ ವಿದ್ಯುತ್‌ ಪರಿಕರಗಳು ಹಾಗೂ ಶೌಚಾಲಯ ಜಖಂಗೊಂಡಿವೆ. ಅಲ್ಪಸ್ವಲ್ಪ ಮಳೆಯಾದರೂ ಅಂಡರ್‌ಗ್ರೌಂಡ್‌ನ‌ ಡೈನಿಂಗ್‌ ಹಾಲ್‌ನಲ್ಲಿ ಆಳೆತ್ತರಕ್ಕೆ ನೀರು ನಿಲ್ಲುತ್ತಿದ್ದು, ಜಲಾಗಾರದಂತೆ ಭಾಸವಾಗುತ್ತದೆ ಎಂಬುದು ಕಟ್ಟಡದ ಕಾವಲುಗಾರರ ಮಾತು.

ಕಾರ್ಮಿಕ ಭವನ ಹಸ್ತಾಂತರಿಸಲಾಗಿದ್ದು, ಅದು ಬಳಕೆಯಾಗಿಲ್ಲ. ನಿರ್ವಹಣೆ ಕೊರತೆಯಿಂದ ದುರಸ್ತಿಗೀಡಾಗಿದ್ದು, ಕಾರ್ಮಿಕ ಇಲಾಖೆ ಕೋರಿಕೆ ಮೇರೆಗೆ 25 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಪ್ರಸ್ತಾವನೆ ಪಡೆದು ಒಂದು ವರ್ಷ ಕಳೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ದೇವರಾಜ ಹಿರೇಮಠ,
ಪಿಡಬ್ಲ್ಯೂಡಿ ಅಭಿಯಂತರ

Advertisement

ನಾನು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಾವೇರಿ ಮತ್ತು ಗದುಗಿನಲ್ಲಿ ಪ್ರಭಾರಿ ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಗದಗಿನಲ್ಲಿ ಕಾರ್ಮಿಕ ಕಚೇರಿ ಕಟ್ಟಡ ಇದೆ ಅನ್ನೋದನ್ನು ಬಿಟ್ಟರೆ, ಅದರ ಸ್ಥಿತಿಗತಿ ಕುರಿತು ಮಾಹಿತಿಯಿಲ್ಲ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
ಶ್ರೀಕಾಂತ ಬಿ. ಪಾಟೀಲ,
ಪ್ರಭಾರಿ ಜಿಲ್ಲಾ ಕಾರ್ಮಿಕ ಅಧಿಕಾರಿ

ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next