Advertisement

ಬಹುಮಹಡಿ ಕಟ್ಟಡ ಸುರಕ್ಷಿತವೇ?

02:42 PM Sep 27, 2021 | Team Udayavani |

ದಶಕದ ಅಂತರದಲ್ಲಿ ಮತ್ತೂಂದು ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅನಾಹುತದಲ್ಲಿ ಎರಡು ಜೀವಗಳು ಸಜೀವ ದಹನ ಆಗಿವೆ. 2010ರಲ್ಲಿ ಇಂತಹದ್ದೇ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ದುರಂತ ಸಂಭವಿಸಿದೆ. ಈ ಮಧ್ಯೆ ಹಲವಾರು ಕಟ್ಟಡ ಕುಸಿತ ಮತ್ತಿತರ ಅವಘಡಗಳಲ್ಲಿ ಹತ್ತಾರು ಜನ ಬಲಿಯಾಗಿದ್ದಾರೆ. ಹಾಗಿದ್ದರೆ, ಬಹುಮಹಡಿ ಕಟ್ಟಡಗಳು ಎಷ್ಟು ಸುರಕ್ಷಿತ? ಇದಕ್ಕೆ ಇರುವ ಕ್ರಮಗಳು ಏನು? ನಿಯಮ ಏನು ಹೇಳುತ್ತದೆ? ಇದೆಲ್ಲದರ ಸುತ್ತ ಈ ಬಾರಿಯ ಸುದ್ದಿ ಸುತ್ತಾಟ…

Advertisement

ದಿನದಿಂದ ದಿನಕ್ಕೆ ರಾಜಧಾನಿ ವಿಸ್ತಾರಗೊಳ್ಳುತ್ತಿದೆ. ಅದರ ವಿಸ್ತಾರಕ್ಕೆ ಜಾಗ ಸಾಕಾಗುತ್ತಿಲ್ಲ. ಇದಕ್ಕಾಗಿ ನಗರ ವರ್ಟಿಕಲ್‌ (ಲಂಬ) ಆಗಿ ಬೆಳೆಯುತ್ತಿದೆ. ಪರಿಣಾಮಒಂದಕ್ಕಿಂತ ಮತ್ತೂಂದು ಕಟ್ಟಡಗಳು ಗಗನವನ್ನು ಚುಂಬಿಸಲು ಹೊರಟಿವೆ. ಆದರೆ, ಹೀಗೆ ಸ್ಪರ್ಧೆಗಿಳಿದ ಕಟ್ಟಡಗಳು ಅದರಲ್ಲೂ ವಸತಿ ಸಮುತ್ಛಯಗಳು ಸುರಕ್ಷಿತವಾಗಿವೆಯೇ? – ಈ ಪ್ರಶ್ನೆಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಘಟನೆಗಳು “ಇಲ್ಲ’ ಎಂದೇ ಹೇಳುತ್ತವೆ.

ಕಾರ್ಲಟನ್‌ ಟವರ್‌ನಲ್ಲಿ 2010ರಲ್ಲಿ ನಡೆದ ಬೆಂಕಿ ದುರಂತ ನಗರವನ್ನು ಬೆಚ್ಚಿಬೀಳಿಸಿತ್ತು. ಇದಾದ ನಂತರದಲ್ಲಿ ಪ್ರತಿ ವರ್ಷ ಒಂದಿಲ್ಲೊಂದು ಅಪಾರ್ಟ್‌ ಮೆಂಟ್‌ ದುರಂತಗಳು ಸಂಭವಿಸುತ್ತಲೇ ಇವೆ. ಕಳೆದಐದು ವರ್ಷಗಳಲ್ಲಿ ನಗರದ ಅಪಾರ್ಟ್‌ಮೆಂಟ್‌ ಗಳಲ್ಲಿ ಹತ್ತಕ್ಕೂ ಹೆಚ್ಚು ಅವಘಡಗಳು ಸಂಭವಿಸಿದ್ದು, ಅದರಲ್ಲಿ ಹತ್ತಾರು ಜನ ಬಲಿಯಾಗಿದ್ದಾರೆ. ಈ ಪೈಕಿಆರು ಘಟನೆಗಳು ಬರೀ ಒಂದೇ ವರ್ಷ ಅಂದರೆ 2018ರಲ್ಲೇ ನಡೆದಿವೆ. ಈ ಮಧ್ಯೆ ಕಳೆದ ವಾರ ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೂಂದು ಅಗ್ನಿ ಅನಾಹುತದಲ್ಲಿ ಇಬ್ಬರು ಸಜೀವ ದಹನ ಆಗಿದ್ದಾರೆ. ಇದು ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಈ “ಅಸುರಕ್ಷತೆಯ ಆತಂಕ’ವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಮಾಡಿದೆ.

ರಾಷ್ಟ್ರೀಯ ಕಟ್ಟಡ ನೀತಿ ಪ್ರಕಾರ 15 ಮೀಟರ್‌ ಎತ್ತರವಿರುವ ಕಟ್ಟಡವನ್ನು “ಬಹುಮಹಡಿ ಕಟ್ಟಡ’ ಎಂದು ಹೇಳಲಾಗುತ್ತದೆ. ಈ ರೀತಿ ನಗರದಲ್ಲಿ 23 ಸಾವಿರಕ್ಕೂ ಅಧಿಕ ಕಟ್ಟಡಗಳು ಬೆಂಗಳೂರಿನಲ್ಲಿವೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಶೇ.7-8ರಷ್ಟು ಕಟ್ಟಡಗಳು ಮಾತ್ರ ನಿರಾಕ್ಷೇಪಣಾ ಪತ್ರ (ಎನ್‌ಒಸಿ)ದನಿಯಾವಳಿಗಳನ್ನು ಪಾಲಿಸುತ್ತಿವೆ ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ನಿರಾಕ್ಷೇಪಣಾ ಪತ್ರ ಪಡೆಯುವ ಸಂದರ್ಭದಲ್ಲಿಉಲ್ಲೇಖೀಸಿದ ವಿನ್ಯಾಸಕ್ಕೂ ಕಟ್ಟಡ ಪೂರ್ತಿಗೊಳಿಸಿದ ಬಳಿಕ ಇರುವ ವಿನ್ಯಾಸಕ್ಕೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ರಾಷ್ಟ್ರೀಯ ಕಟ್ಟಡ ನೀತಿ ಪ್ರಕಾರ ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಅಥವಾ 15 ಮೀಟರ್‌ಗಿಂತ ಎತ್ತರದ ಕಟ್ಟಡಗಳಲ್ಲಿ ಕಡ್ಡಾಯವಾಗಿ ಅಗ್ನಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ನಿಯಮದ ಅನ್ವಯ ಅರ್ಜಿ ಸಲ್ಲಿಸಿ ಎನ್‌ಒಸಿ ಪಡೆಯಬೇಕು. ಆದರೆ, ಅದನ್ನು ಯಾರು ಪಾಲನೆ ಮಾಡುತ್ತಿಲ್ಲ. ಮತ್ತೂಂದೆಡೆ ಈ ಬಗ್ಗೆ ನಿರಂತರವಾಗಿ ಸಂಬಂಧಿಸಿದ ಇಲಾಖೆಗಳು ತಪಾಸಣೆ ಕೂಡ ನಡೆಸುತ್ತಿಲ್ಲ. ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಇಲಾಖೆಗೆ ಕೇವಲ ಎನ್‌ಒಸಿ ಕೊಡಲು ಮಾತ್ರ ಅಧಿಕಾರವಿದೆ. ಕಟ್ಟಡಗಳ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಬಿಬಿಎಂಪಿ ಮತ್ತು ಇತರೆ ಇಲಾಖೆಗಳು ಈ ಕುರಿತು ಸರಿಯಾಗಿ ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿಬಂದಿದೆ.

Advertisement

ಇನ್ನು 2015ರ ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ 13,214 ಕಟ್ಟಡಗಳಲ್ಲಿ ಬೆಂಕಿ ಸುರಕ್ಷತೆ ವ್ಯವಸ್ಥೆ ಇಲ್ಲ ಎಂಬ ಅಂಶ ಬೆಳಕಿಗೆಬಂದಿದೆ. 2015ರಲ್ಲಿ ನಡೆದ ಆಡಿಟಿಂಗ್‌ ಪ್ರಕಾರ ರಾಜ್ಯದ 14 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬೆಂಕಿ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಇವುಗಳಲ್ಲಿ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಬೆಂಗಳೂರಿನಲ್ಲಿವೆ. ಈ ಸಂಬಂಧ ಹೊಸದಾಗಿ ಸಮೀಕ್ಷೆ ನಡೆದರೆ, ಈ ಸಂಖ್ಯೆ ಇನ್ನೂ ಹೆಚ್ಚಾಗುವಲ್ಲಿ ಅನುಮಾನವಿಲ್ಲ.

5 ವರ್ಷದಲ್ಲಿ 243 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ:

ಈ ಮಧ್ಯೆ ಕಳೆದ ಐದು ವರ್ಷಗಳಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 10 ಮಹಡಿಗಳಿಗಿಂತ ಎತ್ತರದ 243 ಬಹುಮಹಡಿ ವಸತಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆ. ಬಹೃತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿಗೆ ಅನುಸರಿಸುತ್ತಿರುವ ಕಟ್ಟಡ ಉಪವಿಧಿಗಳು-2003 ಮತ್ತು ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015ರ ವಲಯ ನಿಯಾಮವಳಿಗಳಲ್ಲಿ 10 ಮಹಡಿಗಳಿಗಿಂತ ಹೆಚ್ಚಿನ ಮಹಡಿಗಳ ವಸತಿ ಕಟ್ಟಡಗಳ ಬಾಲ್ಕನಿಗಳಲ್ಲಿನ ಲೋಹದ ಗ್ರಿಲ್‌ ಗಳ ಕನಿಷ್ಠ ಮತ್ತು ಗರಿಷ್ಠ ಎತ್ತರ ಎಷ್ಟಿರ ಬೇಕು ಎಂಬ ಬಗ್ಗೆ ಉಲ್ಲೇಖವಿಲ್ಲ. ದೇವರಚಿಕ್ಕನ ಹಳ್ಳಿ ಅಪಾರ್ಟ್ ಮೆಂಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತರದಲ್ಲಿ ಮಹಿಳೆಯೊಬ್ಬರು ಜೀವಂತ ದಹನವಾಗಲು ಬಾಲ್ಕನಿಯಲ್ಲಿ ಅಳವಡಿಸಿದ್ದ ಲೋಹದ ಗ್ರಿಲ್‌ಗ‌ಳು ಕಾರಣ ಎಂಬುದು ಗಮನಾರ್ಹ.

ನಿಯಮ ಸ್ಪಷ್ಟವಾಗಿ ನಮೂದಾಗಿಲ್ಲ: ಅಪಾರ್ಟ್‌ ಮೆಂಟ್‌ಗಳ ಬಾಲ್ಕನಿಯಲ್ಲಿ ಕಬ್ಬಿಣದ ಗ್ರಿಲ್‌ ಅಳವಡಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ನಮೂದಿಸಿಲ್ಲ. ಹೀಗಾಗಿ, ಮುಂಜಾಗ್ರತಾ ಕ್ರಮಕ್ಕೆ ಹಲವರು ಕಬ್ಬಿಣದ ಗ್ರಿಲ್‌ ಮೊರೆ ಹೋಗುತ್ತಿದ್ದಾರೆ. ಈ ಬಗ್ಗೆ ನಿಯಮ ಬದಲಾವಣೆ ಮಾಡಿ ಸ್ಪಷ್ಟವಾಗಿ ಉಲ್ಲೇಖೀಸಬೇಕು. ನಿವಾಸಿಗಳು, ಅಸೋಸಿಯೇಷನ್‌ನವರು ಕೂಡಾ ಗಾಜಿನ ಅಥವಾ ಮೂವೆಬಲ್‌ ಬಾಗಿಲು/ಗ್ರಿಲ್‌ಗೆ ಆದ್ಯತೆ ನೀಡಬೇಕು ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ (ಬಿಎಎಫ್) ಸದಸ್ಯರು ಸಲಹೆ ನೀಡಿದ್ದಾರೆ.

ಇವುಗಳಿಗಿಲ್ಲ ನಿಯಮ!: ನಗರದಲ್ಲಿ ದೊಡ್ಡ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಸುರಕ್ಷತಾ ನಿಯಮವಿದೆ. ಆದರೆ, ಐದು ಮತ್ತು ಅದಕ್ಕಿಂತ ಕಡಿಮೆ ಅಂತಸ್ತಿನ ಕಟ್ಟಡಗಳಿಗೆ ಯಾವುದೇ ಸುರಕ್ಷತಾ ನಿಯಮಗಳಿಲ್ಲ. ಈ ಬಗ್ಗೆಯೂ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಇದರಿಂದ ಮುಂದೆ ಸಂಭವಿಸಲಿರುವ ಅನಾಹುತಗಳನ್ನು ತಡೆಗಟ್ಟಬಹುದು ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ (ಬಿಎಎಫ್) ತಿಳಿಸಿದೆ.

ರಾಜಧಾನಿಯ ಅಪಾರ್ಟ್‌ಮೆಂಟ್‌ ನಿವಾಸಿಗಳು, ಮಾಲೀಕರು ಕೇವಲ ಬಿಬಿಎಂಪಿ ತೆರಿಗೆ, ಜಲಮಂಡಳಿ ಶುಲ್ಕ ವಿನಾಯ್ತಿ, ಹೊಸ ನಿಯಮ ಅದರಿಂದ ಹೊರಬರುವ ತಂತ್ರಗಳ ಬಗ್ಗೆ ಸಾಕಷ್ಟು ವಿಚಾರ ಮಾಡುತ್ತಾರೆ. ಆದರೆ, ಮುಂಜಾಗ್ರತಾ ಕ್ರಮ ಕೈಗೊಳ್ಳ ಬಗ್ಗೆ ಸಂಪೂಣ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹಘಟನೆಗಳಿಂದ ಎಚ್ಚೆತ್ತುಕೊಳ್ಳಬೇಕು ಎಂದು ಬಿಎಎಫ್ ಸದಸ್ಯ ವಿಷ್ಣ ಗಡಿಪಲ್ಲಿ ತಿಳಿಸಿದರು.

ಸರ್ಕಾರದ ನಿರ್ಲಕ್ಷ್ಯ :

ಬೆಂಗಳೂರು ಸೇರಿ ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ 2010ರಲ್ಲಿ ನಡೆದ ಕಾರ್ಲಟನ್‌ ಟವರ್‌ ಬೆಂಕಿ ದುರಂತ ಹಾಗೂ ಆ ನಂತರದಲ್ಲಿ ನಡೆದ ಕೆಲವೊಂಂದು ಪ್ರತಿ ದುರಂತಗಳ ಬಗ್ಗೆ ಉಲ್ಲೇಖೀಸಿ ಅಗ್ನಿಶಾಮಕ ಇಲಾಖೆ ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರಕ್ಕೆ ಸಮಗ್ರ ವರದಿ ನೀಡಿದೆ. ಆದರೆ, ಇದುವರೆಗೂ ಸರ್ಕಾರದಿಂದಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರೊಂದಿಗೆ ಅಗ್ನಿ ದುರಂತ ನಡೆದಾಗ ಪರಿಶೀಲಿಸಿ ನಿಯಮ ಉಲ್ಲಂಘನೆ ಆರೋಪದಮೇಲೆ ಕಟ್ಟಡ ಮಾಲೀಕರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜ ನವಾಗಿಲ್ಲ. “ನಮಗೆ ಪರಿಶೀಲಿಸಿ ವರದಿ ಕೊಡಲು ಮಾತ್ರ ಅಧಿಕಾರವಿದೆ. ಯಾರ ವಿರುದ್ಧವೂ ಕ್ರಮಕೈಗೊಳ್ಳಲು ಅಧಿಕಾರವಿಲ್ಲ’. ಇದೊಂದು ರೀತಿ ಹಲ್ಲು ಇಲ್ಲದ ಹಾವಿನಂತೆಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನು ಕರ್ನಾಟಕ ನಗರಪಾಲಿಕೆ ಸಾಮಾನ್ಯ ಕಟ್ಟಡಗಳ ಬೈಲಾ-2017 ಕರಡು ಸಿದ್ಧಗೊಂಡು ಮೂರು ವರ್ಷಗಳೇ ಕಳೆಯುತ್ತಿದೆ. ಅದರಲ್ಲಿ ಕಟ್ಟಡ ಕಟ್ಟುವ ಮೊದಲು ನಕ್ಷೆ ಸಿದ್ಧಪಡಿಸಿಕೊಂಡು ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯಬೇಕು. ಲಿಫ್ಟ್ , ಅಗ್ನಿನಂದಕಉಪಕರಣಗಳು, ಮಕ್ಕಳ ಓಡಾಟಕ್ಕೆಅನುಕೂಲದ ಕ್ರಮಗಳು, ಮಳೆನೀರು ಸಂಗ್ರಹ ಘಟಕ ಹಾಗೂ ಕಸಸಂಗ್ರಹಣೆಗೆ ಜಾಗ ಕಲ್ಪಿಸಿಕೊಳ್ಳಬೇಕು ಎಂಬುದು ಸೇರಿ ಸಾಕಷ್ಟು ನಿಯಮಗಳನ್ನುಉಲ್ಲೇಖೀಸಿ ಕರಡು ಸಿದ್ಧಪಡಿಸಲಾಗಿದೆ. ಆದರೆ, ಸರ್ಕಾರ ಯಾವುದೇ ನಿರ್ಧಾರ ಪ್ರಕಟಿಸುತ್ತಿಲ್ಲ ಎಂದೂ ಅವರು ಹೇಳಿದರು.

ಪೂರ್ವಾನುಮತಿ ಕಡ್ಡಾಯ: ಗೌರವ್‌ಗುಪ್ತ :

ಅವಘಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಬಿಬಿಎಂಪಿ, ನಿಯಮಾನುಸಾರ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ, ಪ್ರಾರಂಭಿಕ ಪ್ರಮಾಣ ಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ವಸತಿ ಸಮುಚ್ಚಯಗಳಲ್ಲಿ ಸುರಕ್ಷತಾ ದೃಷ್ಟಿಯಿಂದ ಬಾಲ್ಕನಿಯಲ್ಲಿ ಬದಲಾವಣೆಗಳು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ನಿರ್ಬಂಧಿಸಿದೆ. ಒಂದು ವೇಳೆ ವಸತಿ ಸಮುತ್ಛಯಗಳಲ್ಲಿ ಮಾರ್ಪಾಡು ಅವಶ್ಯವಿದ್ದಲ್ಲಿ ಪಾಲಿಕೆಯ ಸಕ್ಷಮ ಪ್ರಾಧಿಕಾರಗಳಿಂದಕಡ್ಡಾಯವಾಗಿ ಪೂರ್ವಾನುಮತಿಗಳನ್ನು ಪಡೆಯಲು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸ್ಪಷ್ಟಪಡಿಸಿದ್ದಾರೆ.

ಕಟ್ಟಡ ಉಪವಿಧಿ – 2003ರ ಪರಿಷ್ಕೃತ ವಲಯ ನಿಯಮಾವಳಿಗಳು ನಕ್ಷೆ ಮಂಜೂರಾತಿ, ಪ್ರಾರಂಭಿಕಪ್ರಮಾಣ ಪತ್ರ ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರಗಳನ್ನು ಪಡೆದ ನಂತರ ಕಟ್ಟಡಗಳ ಬಾಲ್ಕನಿಗಳನ್ನುಸಂಪೂರ್ಣವಾಗಿ ಮುಚ್ಚುವುದು ಹಾಗೂ ಇನ್ನಿತರೆ ಅಸುರಕ್ಷತಾ ಕಟ್ಟಡ ಮಾರ್ಪಾಡುಗಳನ್ನು ನಿರ್ವಹಿಸಲು ನಿಯಮಾನುಸಾರಅವಕಾಶವಿರುವುದಿಲ್ಲ. ಆದಾಗ್ಯೂ ಕಟ್ಟಡಮಾಲೀಕರು ನಿಯಮಬಾಹಿರವಾಗಿ ಅಸುರಕ್ಷತೆಗೆ ಕಾರಣವಾಗುವಂತೆ ಕಟ್ಟಡ ಮಾರ್ಪಾಡು ಮಾಡುತ್ತಿರುವುದನ್ನು ಗಮನಿಸಲಾಗಿರುತ್ತದೆ.

ರಾಷ್ಟ್ರೀಯ ಕಟ್ಟಡ ನೀತಿ ಪಾರ್ಟ್‌ 3 ಮತ್ತು 4 ಏನು ಹೇಳುತ್ತೆ?:

  • ಕಟ್ಟಡದಲ್ಲಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು
  • ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್‌ ಅಂತರ ಇರಬೇಕು
  • ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗಇರಬೇಕು
  • ಛಾವಣಿಯಲ್ಲಿ ಮತ್ತು ನೆಲ ಅಂತಸ್ತಿ ನಲ್ಲಿ ನೀರಿನ ಟ್ಯಾಂಕ್‌ ಇರಬೇಕು
  • ನೆಲ ಅಂತಸ್ತು ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು
  • ಪ್ರತಿ ಮಹಡಿಯಲ್ಲಿ ನೀರಿನ ಕೊಳವೆ, ಎಲೆಕ್ಟ್ರೀಕಲ್‌ ಅಲಾರಾಂ ಹಾಗೂ ಅಗ್ನಿ ನಂದಕ ಸಲಕರಣೆಗಳು ಕಡ್ಡಾಯವಾಗಿ ಇರಬೇಕು.
  • ಕನಿಷ್ಠ 2 ಕಡೆ ಮೆಟ್ಟಿಲು, ಲಿಫ್ಟ್ ಇರಬೇಕು.
  • ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು
  • ತುರ್ತು ನಿರ್ಗಮನ ಅಥವಾ ಸಾಮಾನ್ಯ
  • ನಿರ್ಗಮನ ದ್ವಾರಗಳಲ್ಲಿ ಸದಾ ಬೆಳಕು ಇರುವಂತೆ ನೋಡಿಕೊಳ್ಳಬೇಕು.

ಪ್ರಮುಖ ದುರಂತಗಳು:

  • 2015: ಡಿ. 15ರಂದು ಚಿಕ್ಕಬೇಗೂರಿನಲ್ಲಿಅಪಾರ್ಟ್‌ಮೆಂಟ್‌ ಶೌಚಾಲಯ ಗುಂಡಿ ಸ್ವಚ್ಚಗೊಳಿಸುವಾಗ ಮೂವರು ಕಾರ್ಮಿಕರ ಸಾವು.
  • 2016ರ ಅ. 6ರಂದು ಬೆಳ್ಳಂದೂರು ಗೇಟ್‌ ಬಳಿ ನಿರ್ಮಾಣ ಹಂತದ ಕಟ್ಟಡ ಕುಸಿದು ಆರು ಮಂದಿ ಮೃತಪಟ್ಟಿದ್ದರು.
  • 2017ರ ಅ. 16ರಂದು ಈಜಿಪುರ ಗುಂಡಪ್ಪ ಲೇಔಟ್‌ನಲ್ಲಿ ಕಟ್ಟಡ ಕುಸಿದು ಎಂಟು ಮಂದಿ ಮೃತಪಟ್ಟಿದ್ದರು.
  • 2018ರ ಜ. 18ರಲ್ಲಿ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಕಾರ್ಮಿಕರೊಬ್ಬರು ಸಾವು.
  • 2018ರ ಫೆ. 15ರಲ್ಲಿ ಸರ್ಜಾಪುರ ರಸ್ತೆಯ ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‌ ನಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವು
  • 2018ರ ಅ. 24ರಲ್ಲಿ ಜಕ್ಕೂರು ಲೇಔಟ್‌ನಲ್ಲಿ ಕಟ್ಟಡದ ಗುತ್ತಿಗೆದಾರ ಸಾವು
  • 2018ರ ನ. 10ರಲ್ಲಿ ತ್ಯಾಗರಾಜನಗರದಲ್ಲಿ
  • ನಿರ್ಮಾಣ ಹಂತದ ಸಾಯಿ ಗ್ರ್ಯಾಂಡ್‌ ಅಪಾರ್ಟ್‌ಮೆಂಟ್‌ನಲ್ಲಿ ಕಟ್ಟಡ ಕುಸಿದು ಒಬ್ಬರು ಸಾವು.
  • 2018ರ ಡಿ. 6ರಲ್ಲಿ ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದಲ್ಲಿ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸಾವು
  • 2018ರ ಡಿ. 13ರಲ್ಲಿ ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಆಶ್ರಮ ರಸ್ತೆಯಲ್ಲಿರುವ ಹೋಲಿಸೋಲ್ ಕಂಪನಿ ಕಟ್ಟಡದಲ್ಲಿ ಮೂವರು ಸಾವು.
  • 2021ರ ಸೆ. 21ರಂದು ದೇವರಚಿಕ್ಕನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ತಾಯಿ, ಮಗಳು ಸಜೀವ ದಹನ.
Advertisement

Udayavani is now on Telegram. Click here to join our channel and stay updated with the latest news.

Next