Advertisement

ಕಟ್ಟಡ ಪರವಾನಿಗೆ ತಡೆ: ಸ್ಪಷ್ಟನೆಗೆ ಆಗ್ರಹ

08:16 PM Jul 15, 2019 | sudhir |

ವಿಟ್ಲ: ಮಂದಿರ ನಿರ್ಮಾಣದ ಉದ್ದೇಶದಿಂದ ಸರಕಾರದಿಂದ ಅನುದಾನ ಮಂಜೂರಾಗಿದ್ದು, ಸಮರ್ಪಕ ದಾಖಲೆ ನೀಡಿದರೂ ಗ್ರಾ.ಪಂ. ವತಿಯಿಂದ ಕಟ್ಟಡ ಪರವಾನಿಗೆ ನೀಡಲು ಸದಸ್ಯನೋರ್ವನ ಕುಮ್ಮಕ್ಕಿನಿಂದ ಉದ್ದೇಶಪೂರ್ವಕವಾಗಿ ತಡೆವೊಡುತ್ತಿರುವ ವಿಚಾರದ ಬಗ್ಗೆ ಸ್ಪಷ್ಟನೆ ನೀಡದೆ ಗ್ರಾಮಸಭೆ ನಡೆಸಲು ಬಿಡೆವು ವಿಟ್ಲಮುಟ್ನೂರು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ವಿಟ್ಲ ಮುಟ್ನೂರು ಗ್ರಾ.ಪಂ. ಗ್ರಾಮಸಭೆಯಲ್ಲಿ ಜರಗಿತು.

Advertisement

ವಿಟ್ಲ ಮುಟ್ನೂರು ಗ್ರಾ.ಪಂ. ಸಭಾಭವನದಲ್ಲಿ ಸೋಮವಾರ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ನೋಡಲ್‌ ಅಧಿಕಾರಿಯಾಗಿದ್ದ ತಾ| ಕಾರ್ಯ ನಿರ್ವ ಹಣಾಧಿಕಾರಿ ರಾಜಣ್ಣ, ಗ್ರಾಮಸಭೆ ನಡೆಸಲು ಸಹಕರಿಸಬೇಕೆಂದು ಹಲವು ಬಾರಿ ಮನವಿ ಮಾಡಿಕೊಂಡರು. ಬಳಿಕ ತಮ್ಮ ಪಟ್ಟನ್ನು ಸಡಿಲಗೊಳಿಸಿ ಸಭೆ ನಡೆಸಲು ಅನುವು ಮಾಡಿಕೊಟ್ಟರು.

ಆಡಳಿತ ಪಕ್ಷದ ಒಬ್ಬ ವಾರ್ಡ್‌ ಸದಸ್ಯರು ಪಿಡಿಒ, ಕಾರ್ಯದರ್ಶಿ, ಗ್ರಾಮ ಲೆಕ್ಕಿಗರನ್ನು ಹಾದಿ ತಪ್ಪಿಸುತ್ತಿದ್ದಾರೆ. ಪಂಚಾಯತ್‌ರಾಜ್‌ ಕಾನೂನಿನಂತೆ ಪೂರಕ ಭೂ ದಾಖಲೆಗಳನ್ನು ಸಲ್ಲಿಸಲಾಗಿದೆ. ಕಾನೂನು ಸಲಹೆಗಾರರ ಮೂಲಕ ಸ್ಪಷ್ಟ ಸೂಚನೆ ನೀಡ ಲಾಗಿದೆ. ಈ ಬಗ್ಗೆ ಎರಡು ಬಾರಿ ತುರ್ತು ಸಭೆ ಕರೆಯಲಾಗಿದ್ದರೂ ಸದಸ್ಯರು ಗೈರು ರಾಗಿ ಕೋರಂ ಕೊರತೆ ತಂದೊಡ್ಡಿದ್ದರು ಎಂದು ಆರೋಪಿಸಿದ ಗ್ರಾಮಸ್ಥರು, ಸದಸ್ಯನ ವಿರುದ್ಧ ಧಿಕ್ಕಾರ ಕೂಗಿ
ಆತನನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಎಂದು ಆಗ್ರಹಿಸಿದರು.

ನೋಡಲ್‌ ಅಧಿಕಾರಿಯವರು, ಈ ಬಗ್ಗೆ ಪಂಚಾಯತ್‌ರಾಜ್‌ ಕಾನೂನಿನಂತೆ ಎಲ್ಲ ಸಮರ್ಪಕ ದಾಖಲೆ ನೀಡಿದರೂ ಕಟ್ಟಡ ಪರವಾನಿಗೆ ಕೊಡದೇ ಇರಲಾಗದು. ನಿಗದಿಪಡಿಸಿದಂತೆ ಮಂಗಳವಾರವೇ ಸಾಮಾನ್ಯಸಭೆ ಕರೆದು ಪರವಾನಿಗೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಪಿಡಿಒ ಸಭೆಯಲ್ಲಿಯೇ ಈ ಬಗ್ಗೆ ನಿರ್ಣಯ ಕೈಗೊಂಡರು.

ಲೈನ್‌ಮ್ಯಾನ್‌ ನಿರ್ಲಕ್ಷ  ಆರೋಪ
ಮೆಸ್ಕಾಂ ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡುತ್ತಿದ್ದಂತೆ ಆಕ್ರೋಶಿತರಾದ ಗ್ರಾಮಸ್ಥರು, ಮೆಸ್ಕಾಂ ಲೈನ್‌ಮ್ಯಾನ್‌ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಅಪಾಯದ ಸಂದರ್ಭ ಪೋನ್‌ ಮಾಡಿ ದರೂ ಪೋನ್‌ ಸ್ವೀಕರಿಸುವುದಿಲ್ಲ. ವಿದ್ಯುತ್‌ ಬಳಕೆದಾರರ ಯಾವುದೇ ಸಮಸ್ಯೆಗಳಿಗೆ ವಿಭಾಗಾಧಿಕಾರಿಯೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಸಮಸ್ಯೆ ಯಿರುವ ಪ್ರದೇಶಗಳ ಬಗ್ಗೆ ತುರ್ತಾಗಿ ಪರಿಶೀಲನೆ ನಡೆಸಿ, ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಭರವಸೆ ನೀಡಿದರು.

Advertisement

ಮದ್ಯ ಅಕ್ರಮ ಮಾರಾಟ
ಗ್ರಾಮ ವ್ಯಾಪ್ತಿಯಲ್ಲಿ ಮದ್ಯ ಅಕ್ರಮ ಮಾರಾಟವನ್ನು ನಿಲ್ಲಿಸಲು ಅಬಕಾರಿ ಇಲಾಖೆಗೆ ಸೂಚಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು. ಆಧಾರ್‌ಕಾರ್ಡ್‌ ತಿದ್ದುಪಡಿಯನ್ನು ಗ್ರಾ.ಪಂ. ಮಟ್ಟದಲ್ಲಿ ನಿಗದಿತ ದಿನದಂದು ಮಾಡಬೇಕೆಂಬ ಗ್ರಾಮಸ್ಥರ ಬೇಡಿಕೆಯನ್ನು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ವಿವಿಧ ಇಲಾಖೆ ಗಳ ಅಧಿಕಾರಿಗಳು ಮಾಹಿತಿ ನೀಡಿದರು. ತಾ.ಪಂ. ಸದಸ್ಯೆ ವನಜಾಕ್ಷಿ ಭಟ್‌, ಉಪಾಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ, ಗ್ರಾ.ಪಂ. ಸದಸ್ಯರು ಭಾಗವಹಿಸಿದ್ದರು. ಪಿಡಿಒ ರಾಘವೇಂದ್ರ ಹೊರಪೇಟೆ ಸ್ವಾಗತಿಸಿ, ಪಂ. ಕಾರ್ಯದರ್ಶಿ ಅಬ್ದುಲ್‌ ಕರೀಂ ವಂದಿಸಿದರು. ದೇವಕಿ ವರದಿ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next