Advertisement

ಗೋವಿನ ಸೆಗಣಿಯಿಂದ ಕಟ್ಟಡ ಪೇಂಟ್‌ ತಯಾರಿ; ಗೋ ಆಧಾರಿತ ಬಣ್ಣದಲ್ಲೇನೇನಿದೆ?

10:55 AM Jan 14, 2022 | Team Udayavani |

ಹುಬ್ಬಳ್ಳಿ: ದೇಸಿ ಗೋವಿನ ಸಗಣಿ ಬಳಸಿ ಪರಿಸರ ಹಾಗೂ ಆರೋಗ್ಯಸ್ನೇಹಿ ಗೋಡೆಗಳಿಗೆ ಬಳಿಯುವ ಮೂಲಬಣ್ಣ (ಬೇಸ್‌ಪೇಂಟ್‌) ತಯಾರಾಗಿದ್ದು, ಮಾರುಕಟ್ಟೆಗೆ ಕಾಲಿಡಲು ಸಜ್ಜಾಗುತ್ತಿದೆ. ಅದೇ ರೀತಿ ಗೋವಿನ ಸಗಣಿ, ಮೂತ್ರ ಬಳಸಿ ವಾಲ್‌ ಪುಟ್ಟಿ, ವಾಲ್‌ ಸೀಲಿಂಗ್‌  (ಪಿಒಪಿ), ಪ್ಲಾಸ್ಟರ್‌ ತಯಾರಿಕೆ ಯತ್ನ ನಡೆದಿದ್ದು, ಮೂಲಬಣ್ಣಕ್ಕೆ ಸೇರಿಸಲು ನೈಸರ್ಗಿಕವಾದ ಐದಾರು ಬಣ್ಣಗಳ ತಯಾರಿಕೆ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆ ಇರಿಸಲಾಗಿದೆ.

Advertisement

ದೇಸಿ ಗೋವಿನ ಸಂತತಿ ಸಂರಕ್ಷಣೆ-ಸಂವರ್ಧನೆ ಕಾಯಕದಲ್ಲಿ ತೊಡಗಿರುವ ಮಹಾರಾಷ್ಟ್ರದ ಕನೇರಿಯ ಶ್ರೀ ಕಾಡಸಿದ್ದೇಶ್ವರ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನ ದಲ್ಲಿ ಇಂತಹ ಯತ್ನಗಳು ಗರಿಗೆದರಿವೆ. ಕೆಲವು ಕಾರ್ಯಗತಗೊಂಡಿವೆ, ಇನ್ನೂ ಕೆಲವು ಪ್ರಯೋಗಾತ್ಮಕ ಹಂತದಲ್ಲಿವೆ. ದೇಸಿ ಗೋವು ಕೇವಲ ಹಾಲು ಕೊಡುವುದಕ್ಕೆ ಮಾತ್ರವಲ್ಲ, ಇತರೆ ಉತ್ಪನ್ನ ಗಳಿಂದಲೂ ರೈತರಿಗೆ ಆದಾಯ ತಂದುಕೊಡ ಬಲ್ಲದು ಎಂಬುದನ್ನು ಸಾಬೀತುಪಡಿಸಿರುವ ಶ್ರೀಮಠ, ಇದೀಗ ಮತ್ತೂಂದು ಹೆಜ್ಜೆ ಮುಂದಿರಿಸಿದೆ.

ಬರಡು ಗೋವು ಬದುಕಿಗೆ ಹೊರೆ ಎಂಬ ಅನಿಸಿಕೆ ಇಂದಿಗೂ ಅನೇಕ ರೈತರ ಮನದಲ್ಲಿದೆ. ಗೋವು ಎಂದಿಗೂ ಬದುಕಿಗೆ ಹೊರೆಯಾಗುವುದಿಲ್ಲ, ಜೀವನಕ್ಕೆ ಆಧಾರವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಶ್ರೀ ಕಾಡಸಿದ್ದೇಶ್ವರ ಮಠ ಈಗಾಗಲೇ ಗೋವಿನ ಮೂತ್ರ, ಸೆಗಣಿ ಬಳಸಿ ಗೋ ಅರ್ಕ್‌, ಪಿನಾಯಿಲ್‌, ವಿವಿಧ ಆಯುರ್ವೇದಿಕ್‌ ಉತ್ಪನ್ನಗಳನ್ನು ತಯಾರಿಸಿದೆ. ಮೃತಪಟ್ಟ ಗೋವು ಸಹ ಸಾವಯವ ಕೃಷಿಗೆ ಮಹತ್ವದ ರಸಾಯನ,
ಪೋಷಕಾಂಶಗಳನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಲಾಗಿದ್ದು, ಇಂದಿಗೂ ಶ್ರೀಮಠದ ಗೋಶಾಲೆ ಆವರಣದಲ್ಲಿ ಇಂತಹ ಹಲವು ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ.

ವಾಲ್‌ ಪುಟ್ಟಿ ತಯಾರಿಕೆ ಯತ್ನ: ಮನೆ ಇಲ್ಲವೆ ಇನ್ನಿತರ ಕಟ್ಟಡಗಳಿಗೆ ಬಣ್ಣ ಬಳಿಯುವ ವೇಳೆ ಬಳಸುವ ವಾಲ್‌ ಪುಟ್ಟಿಯನ್ನು ಗೋವಿನ ಸೆಗಣಿ ಹಾಗೂ ಮೂತ್ರದಿಂದ ತಯಾರಿಸುವ ನಿಟ್ಟಿನಲ್ಲಿ ಶ್ರೀಮಠ ಮುಂದಾಗಿದೆ. ವಾಲ್‌ ಪುಟ್ಟಿ ತಯಾರಿಕೆಗೆ ಬೇಕಾಗುವ ಯಂತ್ರಗಳ ವಿನ್ಯಾಸ ಕಾರ್ಯ ನಡೆದಿದ್ದು, ಇದು ಸಿದ್ಧಗೊಂಡರೆ ವಾಲ್‌ಪುಟ್ಟಿಯನ್ನು ಸಹ ಪರಿಸರ ಸ್ನೇಹಿಯಾಗಿ ತಯಾರಿಸಲಾಗುತ್ತದೆ. ಗೋವಿನ ಸೆಗಣಿ ಬಳಸಿ ಇಟ್ಟಿಗೆ ತಯಾರಿಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಬಣ್ಣ, ವಾಲ್‌ ಪುಟ್ಟಿ, ವಾಲ್‌ಸೀಲಿಂಗ್‌ ಇನ್ನಿತರ ವಸ್ತುಗಳ ತಯಾರಿಕೆಯ ಮಹತ್ವದ ಯತ್ನ ನಡೆದಿದೆ.

ಗೋ ಆಧಾರಿತ ಬಣ್ಣದಲ್ಲೇನೇನಿದೆ?
ಕಟ್ಟಡಗಳಿಗೆ ಬಳಿಯುವ ಬಣ್ಣದ ಬೇಸ್‌ ಪೇಂಟ್‌ ಒಂದೇ ಆಗಿರುತ್ತಿದ್ದು, ಅದನ್ನೇ ಬಳಸಿಕೊಂಡು ವಿವಿಧ ಬಣ್ಣವನ್ನು ತಯಾರಿಸಲಾಗುತ್ತದೆ. ಬೇಸ್‌ಪೇಂಟ್‌ ಆಧಾರದಲ್ಲಿಯೇ ಕಂಪೆನಿಗಳು ತಮ್ಮ ಬ್ರ್ಯಾಂಡ್‌ನ‌ಡಿ ಬಣ್ಣಗಳನ್ನು ತಯಾರಿಸುತ್ತವೆ. ಗೋ ಆಧಾರಿತವಾಗಿ ಬೇಸ್‌ಪೇಂಟ್‌ ತಯಾರಿಸಲಾಗಿದ್ದು, ಇದನ್ನು ಯಾವುದೇ ಬಣ್ಣಕ್ಕೂ ಬೆರೆಸಿಕೊಳ್ಳಬಹುದಾಗಿದೆ. ಇದರ ವಿಶೇಷವೆಂದರೆ ಪರಿಸರ ಸ್ನೇಹಿ. ಗೋ ಆಧಾರಿತ ಬೇಸ್‌ ಪೇಂಟ್‌ನಲ್ಲಿ ಶೇ.30 ದೇಸಿ ಹಸುಗಳ ಸೆಗಣಿ, ಸುಣ್ಣ, ಸೋಡಿಯಂ, ನೀರು ಬಳಕೆ ಮಾಡಲಾಗಿದೆ. ಜತೆಗೆ ಕಡಿಮೆ ಪ್ರಮಾಣದ ಕೆಲ ಕೆಮಿಕಲ್‌ಗ‌ಳನ್ನು ಬಳಕೆ ಮಾಡಲಾಗಿದೆ.

Advertisement

ಬೇಸ್‌ ಪೇಂಟ್‌ ತಯಾರಿಕೆಗೆ ಅಗತ್ಯವಿರುವ ಯಂತ್ರ ವಿನ್ಯಾಸಗೊಳಿಸಲಾಗಿದ್ದು, ತಯಾರಿಕೆ ಕಾರ್ಯ ಆರಂಭಗೊಂಡಿದೆ. ಗೋ ಆಧಾರಿತ ಮೂಲ ಬಣ್ಣವನ್ನು ಯಾವುದೇ ಬಣ್ಣದ ಜತೆಗೆ ಬೆರೆಸಿ ಬೇಕಾದ ಬಣ್ಣ ತಯಾರಿಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಕಟ್ಟಡಗಳಿಗೆ ಬಣ್ಣ ಬಳಿದ ನಂತರ ಸುಮಾರು 15-20 ದಿನಗಳವರೆಗೆ ಬಣ್ಣದ ವಾಸನೆ ಇರುತ್ತದೆ. ಕಟ್ಟಡದ ಒಳಗೆ ಹೋದರೆ ಬಣ್ಣದ ಘಾಟು ರಾಚುತ್ತದೆ. ಆದರೆ, ಗೋವಿನ ಸೆಗಣಿ ಬಳಸಿ ತಯಾರಿಸಲಾದ ಮೂಲಬಣ್ಣ ಬಳಸಿ ತಯಾರಿಸಿದ ಬಣ್ಣವನ್ನು ಕಟ್ಟಡಕ್ಕೆ ಬಳಿಸಿದರೆ ವಾಸನೆ ಇರದು. ಜತೆಗೆ ಉಷ್ಣಾಂಶ ನಿಯಂತ್ರಣ ಶಕ್ತಿಯನ್ನು ಇದು ಹೊಂದಿದೆಯಂತೆ.

ಗೋವಿನ ಸೆಗಣಿ ಬಳಸಿ ಮೂಲಬಣ್ಣ ತಯಾರಿಕೆ ಜತೆಗೆ ವಾಲ್‌ ಪುಟ್ಟಿ, ಪಿಒಪಿಯಂತಹ ವಸ್ತುಗಳನ್ನು ತಯಾರಿಸುವ ಯತ್ನ ನಡೆದಿದೆ. ಮೂಲಬಣ್ಣಕ್ಕೆ ಬೆರೆಸುವ
ವಿವಿಧ ಬಣ್ಣಗಳನ್ನು ನೈಸರ್ಗಿಕವಾಗಿ ತಯಾರಿಸುವ ಚಿಂತನೆ ಇದೆ. ಇದಕ್ಕೆ ಪೂರಕವಾಗಿ ಈಗಾಗಲೇ ಪ್ರಯೋಗಾತ್ಮಕ ಯತ್ನಗಳು ನಡೆಯುತ್ತಿವೆ. ದೇಸಿ ಗೋವು ಏನೆಲ್ಲಾ ಪ್ರಯೋಜನವಾಗಬಲ್ಲದು ಎಂಬುದನ್ನು ತೋರಿಸುವುದಕ್ಕೆ ಇದನ್ನು ಕೈಗೊಳ್ಳಲಾಗುತ್ತಿದೆ.
● ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿ ಮಠ

Advertisement

Udayavani is now on Telegram. Click here to join our channel and stay updated with the latest news.

Next