ವಾಡಿ: ಸಮೀಪದ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವ ಕಾರಣ ಬಡ ಮಕ್ಕಳ ಅಕ್ಷರ ಭವಿಷ್ಯ ಬೀದಿಗೆ ಬಿದ್ದಿದ್ದು, ಮರದ ಕೆಳಗೆ ಪಾಠ ಬೋಧನೆ ನಡೆಯುತ್ತಿದೆ.
ಬೀಳುವ ಹಂತಕ್ಕೆ ತಲುಪಿ ಸೋರುತ್ತಿರುವ ಸನ್ನತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿಯನ್ನು ಜನರೇ “ಉದಯವಾಣಿ’ ಗಮನಕ್ಕೆ ತಂದಿದ್ದಾರೆ.
ಅಗತ್ಯಕ್ಕಿಂತ ಹೆಚ್ಚು ತರಗತಿ ಕೋಣೆಗಳಿರುವ ಈ ಶಾಲೆಯ ವಿದ್ಯಾರ್ಥಿಗಳ ಪಾಠ ಬೋಧನೆ ಮರದ ಕೆಳಗೆ ನಡೆಯುತ್ತಿದೆ. ಹತ್ತಾರು ಹಳೆ ಕಟ್ಟಡಗಳ ನಡುವೆ ಇತ್ತೀಚೆಗೆ ಎರಡು ಹೊಸ ಕೋಣೆಗಳು ಸೇರ್ಪಡೆಯಾಗಿವೆ. ಮುರುಕು ಮಾಳಿಗೆ, ಹರಕು ಗೋಡೆಗಳ ಆಸರೆಯಲ್ಲಿ ಪಾಠ ಕೇಳಲು ಹೆದರುತ್ತಿರುವ ವಿದ್ಯಾರ್ಥಿಗಳು ಶಾಲಾ ಅಂಗಳದ ಮರದ ನೆರಳಿನಾಸರೆಗೆ ಅಕ್ಷರ ಕಲಿಕೆಗೆ ಮುಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ.
ಒಂದನೇ ತರಗತಿಯಿಂದ ಎಂಟನೇ ತರಗತಿ ವರೆಗೆ ಶಾಲೆ ನಡೆಯುತ್ತಿದ್ದು, ಸುಮಾರು 300 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಿಕ್ಷಕರ ಕೊರತೆಯಿಲ್ಲ. ಶಾಲಾ ಕಚೇರಿ ಮತ್ತು ಬಿಸಿಯೂಟ ಕೋಣೆ ಹೊರತುಪಡಿಸಿ ಒಟ್ಟು 13 ಕೋಣೆಗಳಿವೆ. ಇವುಗಳ ಮೇಲ್ಛಾವಣಿ ಕಳಪೆಯಾಗಿದ್ದು, ಮಳೆಯಾದರೆ ನೀರುಂಡು ಸೋರುತ್ತವೆ. ಮಕ್ಕಳ ಕಲಿಕೆಗೆ ಇದು ಅಡ್ಡಿಯಾಗುತ್ತಿದೆ. ಇನ್ನು ಹೊಸ ಕೋಣೆಗಳ ದುಸ್ಥಿತಿಯೇ ಬೇರೆ. ಗುತ್ತಿಗೆದಾರ ಮೇಲ್ಛಾವಳಿಗೆ ಹಚ್ಚಿದ ಸಿಮೆಂಟ್ ತೇಪೆ ಕಳಚಿ ಬೀಳುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ. ತೀರಾ ಹಳೆಯದಾದ ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದರೂ ಅವುಗಳ ತೆರವು ಕಾರ್ಯಾಚರಣೆ ನಡೆದಿಲ್ಲ. ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಈ ಕುರಿತು ಆಸಕ್ತಿ ವಹಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.
ಶಾಲೆಯ ಕಟ್ಟಡ ಬಹಳ ಹಳೆಯದಾಗಿದ್ದರಿಂದ ಗೋಡೆಗಳಲ್ಲಿ ಬಿರುಕು ಕಾಣಿಸಿವೆ. ಕಾಂಕ್ರೀಟ್ ಮಾಳಿಗೆಯಿಂದ ನೀರು ಸೋರಿಕೆಯಾಗುತ್ತಿದೆ. ಸಿಮೆಂಟ್ ತುಂಡುಗಳು ಕಳಚಿ ಮಕ್ಕಳ ತಲೆಯಮೇಲೆ ಬೀಳುತ್ತಿವೆ. ಹೀಗಾಗಿ ಶಿಕ್ಷಕರು ಮರದ ಕೆಳಗೆ ತರಗತಿಗಳನ್ನು ನಡೆಸುವ ಪರಿಸ್ಥಿತಿ ಬಂದಿದೆ. ಕ್ಷೇತ್ರಕ್ಕೆ ಹರಿದುಬಂದ ಸಾವಿರಾರು ಕೋಟಿ ರೂ. ಅನುದಾನದಲ್ಲಿ ತುಸು ಹಣವಾದರೂ ಶಿಥಿಲ ಸರ್ಕಾರಿ ಶಾಲೆಗಳ ಪ್ರಗತಿಗೆ ಬಳಸಿದ್ದರೆ ಗ್ರಾಮೀಣ ವಿದ್ಯಾರ್ಥಿಗಳ ಗೋಳು ತಪ್ಪಿಸಬಹುದಿತ್ತು.
–ಶಿವುಕುಮಾರ ನಾಟೀಕಾರ, ತಾಲೂಕು ಉಪಾಧ್ಯಕ್ಷ, ಕೋಲಿ ಯುವ ಘಟಕ, ಚಿತ್ತಾಪುರ
ಮಕ್ಕಳ ಪಾಠ ಬೋಧಿಸಲು ಕೋಣೆಗಳ ಕೊರತೆಯಿಲ್ಲ. ಆದರೆ ಕೆಲವು ಹಳೆಯ ಕಟ್ಟಡಗಳಿದ್ದು ಅವು ಬಳಕೆಗೆ ಬಾರದಷ್ಟು ಶಿಥಿಲವಾಗಿವೆ. ಇಂಥಹ ಕೋಣೆಗಳಲ್ಲಿ ಪಾಠ ಬೋಧನೆ ನಿಲ್ಲಿಸಲಾಗಿದ್ದು, ಕಟ್ಟಡ ತೆರವು ಮಾಡಲು ಕ್ಷೇತ್ರಶಿಕ್ಷಣಾ ಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಕೆಲವು ಕೋಣೆಗಳ ಮಾಳಿಗೆ ಸೋರುತ್ತಿವೆ. ಕೆಲವೆಡೆ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಹೊಸ ಕಟ್ಟಡಗಳ ಮಾಳಿಗೆಯ ಒಳಭಾಗದಲ್ಲಿ ತೇಪೆ ಹಚ್ಚಲಾದ ಕಾಂಕ್ರೀಟ್ ಕಳಚಿ ಬೀಳುತ್ತಿದೆ. ಆದ್ದರಿಂದ ಕೋಣೆಗಳನ್ನು ಬಳಸುತ್ತಿಲ್ಲ. ಕಿಟಕಿ, ಬಾಗಿಲು, ಬಿರುಕು ಬಿಟ್ಟಿದ್ದು ದುರಸ್ತಿ ಮಾಡಬೇಕಿದೆ. ಬಿಸಿಲು ಅಧಿಕವಿರುವ ಪರಿಣಾಮ ಮತ್ತು ಕೋಣೆಗಳಲ್ಲಿ ಫ್ಯಾನ್ ವ್ಯವಸ್ಥೆ ಇಲ್ಲದ ಕಾರಣ ಮಕ್ಕಳಿಗೆ ಮದ್ಯಾಹ್ನ ವೇಳೆ ಮಾತ್ರ ಮರದ ಕೆಳಗೆ ತಂಪು ಪರಿಸರದಲ್ಲಿ ಪಾಠ ಮಾಡುತ್ತಿದ್ದೇವೆ.
–ರೋಮಣ್ಣ ಕಳಸದ್, ಮುಖ್ಯಶಿಕ್ಷಕ, ಸ.ಹಿ.ಪ್ರಾ.ಶಾಲೆ, ಸನ್ನತಿ
–ಮಡಿವಾಳಪ್ಪ ಹೇರೂರ