ಮಲ್ಪೆ: ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಯುವ ಜನತೆಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫೆಡರೇಶನ್ ಕಾರ್ಯ ಪ್ರವೃತ್ತವಾಗಿದ್ದು, 15 ವರ್ಷಗಳಿಂದ ಸಂಸ್ಥೆಯು ಗಳಿಸಿದ ಲಾಭದಲ್ಲಿ ಸುಮಾರು 5 ಕೋ.ರೂ.ಗಳನ್ನು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಹಿತ ಶೈಕ್ಷಣಿಕ ಚಟುವಟಿಕೆಗಳಿಗೆ ವಿನಿಯೋಗಿಸಿದೆ ಎಂದು ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ, ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಲ್ಪೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಶ್‌ಪಾಲ್ ನೇತೃತ್ವದಲ್ಲಿ ಫೆಡರೇಶನ್ ನಿರಂತರ ಪ್ರಗತಿ ಸಾಧಿಸುತ್ತ ಶಿಕ್ಷಣ ಸಹಿತ ವಿವಿಧ ಸಮಾಜಮುಖೀ ಕಾರ್ಯಗಳಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು.
ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಮಾತನಾಡಿದರು.
ಡೀಪ್‌ಸೀ ಟ್ರಾಲ್ ಬೋಟ್ ಅಸೋಸಿಯೇಶನ್‌ನ ಅಧ್ಯಕ್ಷ ಸುಭಾಷ್ ಎಸ್. ಮೆಂಡನ್, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ, ತ್ರಿಸೆವೆಂಟಿ ಟ್ರಾಲ್ ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಕುಂದರ್, ಕನ್ನಿ ಮೀನುಗಾರರ ಸಂಘದ ಅಧ್ಯಕ್ಷ ದಯಾಕರ್ ವಿ. ಸುವರ್ಣ, ಟೆಂಪೋ ಚಾಲಕರ, ಮಾಲಕರ ಸಂಘದ ಅಧ್ಯಕ್ಷ ಗಣೇಶ್ ಕುಂದರ್, ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸುಂದರ್ ಸಾಲ್ಯಾನ್, ಮೀನುಗಾರ ಮಹಿಳೆಯರ ಪ್ರಾ. ಸ. ಸಂಘದ ಅಧ್ಯಕ್ಷೆ ಸುಮಿತ್ರಾ ಕುಂದರ್, ಯಾಂತ್ರಿಕ ಟ್ರಾಲ್‌ದೋಣಿ ಮೀನುಗಾರರ ಪ್ರಾ. ಸ. ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಪರ್ಸಿನ್ ಮೀನುಗಾರರ ಪ್ರಾ. ಸ. ಸಂಘದ ಅಧ್ಯಕ್ಷ ಕೃಷ್ಣಪ್ಪ ಮರಕಾಲ, ಡೀಪ್‌ಸೀ ಟ್ರಾಲ್ ಬೋಟ್ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ತ್ರಿಸೆವೆಂಟಿ ತಾಂಡೇಲರ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಬಿ. ಕುಂದರ್, ಉಡುಪಿ ತಾಲೂಕು ಹಸಿಮೀನು ಮಾರಾಟಗಾರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ವಿಜಯ ಕೊಡವೂರು, ಸುಂದರ್ ಜೆ. ಕಲ್ಮಾಡಿ, ಎಡ್ಲಿನ್ ಕರ್ಕಡ ಉಪಸ್ಥಿತರಿದ್ದರು.ವ್ಯವಸ್ಥಾಪನ ನಿರ್ದೇಶಕ ದರ್ಶನ್ ವಂದಿಸಿದರು. ವಿಜೇತ ಶೆಟ್ಟಿ ನಿರೂಪಿಸಿದರು.
ಅವಿಭಜಿತ ದ.ಕ. ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುಮಾರು 40 ಲಕ್ಷ ರೂ. ಪ್ರತಿಭಾ ಪುರಸ್ಕಾರ ಹಾಗೂ ಗ್ರಾಹಕ ಬೋಟ್ ಮಾಲಕರಿಗೆ ಸುಮಾರು 5 ಕೋಟಿ ರೂ. ಮೊತ್ತದ ಪ್ರೋತ್ಸಾಹ ಧನವನ್ನು ವಿತರಿಸಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದರು.